Advertisement

ಕಾಂಗ್ರೆಸ್‌ ಅಸ್ತಿತ್ವ ನಾಶ ಮಾಡಿದ ಟಿಕೆಟ್‌ ಹಂಚಿಕೆ: ಅಮೃತ್‌ ಶೆಣೈ ಆಕ್ರೋಶ

01:13 AM Apr 11, 2019 | Team Udayavani |

ಉಡುಪಿ: ನನಗೆ ಟಿಕೆಟ್‌ ಸಿಗಲಿಲ್ಲ ಎನ್ನುವ ಕಾರಣಕ್ಕೆ ನಾನು ಸ್ಪರ್ಧಿಸುತ್ತಿಲ್ಲ. ಕಾಂಗ್ರೆಸ್‌ ಹೈಕಮಾಂಡ್‌ ಜೆಡಿಎಸ್‌ಗೆ ಟಿಕೆಟ್‌ ನೀಡಿರುವುದನ್ನು ವಿರೋಧಿಸಿ, ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಸ್ತಿತ್ವ ವನ್ನು ನಿರ್ನಾಮ ಮಾಡಿದ ಕಾಂಗ್ರೆಸ್‌ ಹೈಕಮಾಂಡ್‌ ವಿರುದ್ಧ ಪಕ್ಷೇತರ ಅಭ್ಯರ್ಥಿ
ಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಉಡುಪಿ – ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅಮೃತ್‌ ಶೆಣೈ ಪಿ. ಹೇಳಿದರು.

Advertisement

ನಗರದಲ್ಲಿ ಬುಧವಾರ ನಡೆದ ಚುನಾವಣ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಜೆಡಿಎಸ್‌ನಲ್ಲಿ ಉಡುಪಿ ಕ್ಷೇತ್ರದಲ್ಲಿ ಕಾರ್ಯಕರ್ತರು, ಸಮರ್ಥ ಅಭ್ಯರ್ಥಿ ಇಲ್ಲದ ನೆಲೆಯಲ್ಲಿ ಜೆಡಿಎಸ್‌ಗೆ ಟಿಕೆಟ್‌ ಬಿಟ್ಟು ಕೊಡಬಾರದೆಂದು ಎಷ್ಟೇ ಹೇಳಿದರೂ ಹೈಕಮಾಂಡ್‌ ಜೆಡಿಎಸ್‌ಗೆ ಟಿಕೆಟ್‌ ಕೊಟ್ಟಿದೆ. ಜೆಡಿಎಸ್‌ನವರಿಗೆ ಅಭ್ಯರ್ಥಿ ಇಲ್ಲದೆ ಕಾಂಗ್ರೆಸ್‌ನ ಪ್ರಮೋದ್‌ ಮಧ್ವರಾಜ್‌ಗೆ ಟಿಕೆಟ್‌ ನೀಡಿರುವುದನ್ನು ವಿರೋಧಿಸಿ, ನನ್ನಂತೆ ನೊಂದ ಅದೆಷ್ಟೋ ಕಾಂಗ್ರೆಸ್‌ ಕಾರ್ಯಕರ್ತರ ದನಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದರು.

ಈಗ ನನಗಾಗಿ ಮತ ಯಾಚನೆ
ಕಾಂಗ್ರೆಸ್‌ ಪಕ್ಷದಲ್ಲಿರುವ ಎಲ್ಲ ನಾಯಕರ ಪರ ಇದುವರೆಗೆ ಮತ ಯಾಚಿಸಿದ ನಾನು ಇಂದು ನನಗಾಗಿ ಮತ ಯಾಚಿಸುತ್ತಿದ್ದೇನೆ. ಸಮಾಜದಲ್ಲಿ ರಾಜಕೀಯ ಪ್ರಭಾವವಿಲ್ಲದೆ ಜನ ಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಲು ಸಾಧ್ಯ ವಿಲ್ಲ ಎನ್ನುವುದನ್ನು ಮನಗಂಡು ಮಾನವತಾವಾದಿ, ಜಾತ್ಯತೀತ ನಿಲುವು ಳ್ಳವನಾದ 25ನೇ ವಯಸ್ಸಲ್ಲಿ ಕಾಂಗ್ರೆಸ್‌ ಸೇರಿದೆ ಎಂದವರು ತಿಳಿಸಿದರು.

ಜೆಡಿಎಸ್ಸೋ ? ಕಾಂಗ್ರೆಸ್ಸೋ ?
ಬಿಜೆಪಿಯಿಂದಲೇ “ಗೋ ಬ್ಯಾಕ್‌ ಶೋಭಾ’ ಎಂದು ಕಾರ್ಯಕರ್ತರು ಕಿರುಚಾಡಿದರೂ ನಿಷ್ಕ್ರಿಯ ಸಂಸದೆಗೆ ಬಿಜೆಪಿ ಟಿಕೆಟ್‌ ನೀಡಿದೆ. ಕಾಂಗ್ರೆಸ್‌ ಪಕ್ಷದಿಂದ 4 ಬಾರಿ ಸ್ಪರ್ಧಿಸಿ 4ನೇ ಬಾರಿ ವಿಜಯಿಯಾಗಿ ಶಾಸಕರಾಗಿ, ಕ್ಯಾಬಿನೆಟ್‌ ದರ್ಜೆಯ ಸಚಿವರಾದ ಪ್ರಮೋದ್‌ ಈಗ ಜೆಡಿಎಸ್‌ ಪಕ್ಷದಿಂದ ಸ್ಪರ್ಧೆಗೆ ಇಳಿದಿದ್ದಾರೆ. ಅವರು ಜೆಡಿಎಸ್ಸೋ ಯಾ ಕಾಂಗ್ರೆಸ್ಸೋ ಎನ್ನುವ ಯಕ್ಷಪ್ರಶ್ನೆ ಉದ್ಭವಿಸಿದೆ. ಇದುವರೆಗೂ ಅವಕಾಶ ಗಿಟ್ಟಿಸಿಕೊಳ್ಳದ ನನಗೆ ಈ ಬಾರಿ ಒಂದು ಅವಕಾಶ ಕೊಟ್ಟರೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸುತ್ತೇನೆ ಎಂದರು.

ಡಾ| ಪಿ.ವಿ. ಭಂಡಾರಿ, ಮನಃಶಾಸ್ತ್ರಜ್ಞೆ ಜಯಶ್ರೀ ಭಟ್‌, ಕೃಷ್ಣಪ್ಪ ಉಪ್ಪೂರು, ಯೋಗೀಶ್‌ ಭಟ್‌, ಶಾಹಿದ್‌ ಅಲಿ ಮಾತನಾಡಿದರು. ವರದರಾಜ್‌ ತರಿಕೆರೆ, ಅನ್ಸರ್‌ ಅಹಮ್ಮದ್‌, ಅನಿತಾ ಡಿ’ಸೋಜಾ, ಹನೀಫ್ ಉಪಸ್ಥಿತರಿದ್ದರು.

Advertisement

ಮರಳು ಸಮಸ್ಯೆ, ಮೀನುಗಾರರ ಪತ್ತೆಗೆ ಹೋರಾಟ
ಮರಳು ಸಮಸ್ಯೆಯಿಂದಾಗಿ ಜನ ಸಂಕಷ್ಟಕ್ಕೀಡಾಗಿದ್ದಾರೆ. ಸಚಿವರ ಮನೆ ಮುಂದೆ ಧರಣಿ ಕುಳಿತಾದರೂ ಜಿಲ್ಲೆಯಲ್ಲಿ ಬಹು ದೊಡ್ಡ ಸಮಸ್ಯೆಯಾದ ಮರಳು ಜನಸಾಮಾನ್ಯರಿಗೆ ದೊರಕುವಂತೆ ಮಾಡುತ್ತೇನೆ. ಬೋಟ್‌ ಮತ್ತು ಮೀನುಗಾರರ ನಾಪತ್ತೆ ಕುರಿತು ನ್ಯಾಯಾಲಯದ ಮೊರೆ ಹೋಗಿ ಮೀನುಗಾರರ ಕುಟುಂಬಕ್ಕೆ ನ್ಯಾಯ ಕೊಡಿಸುತ್ತೇನೆ. ವಿದ್ಯಾವಂತ ಯುವಕರು ವಿದೇಶಕ್ಕೆ ವಲಸೆ ಹೋಗುವುದನ್ನು ತಪ್ಪಿಸಲು ಉದ್ಯಮಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡುತ್ತೇನೆ ಎಂದು ಶೆಣೈ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next