Advertisement

ಮಿಷನ್‌ 2019ನತ್ತ ಬಿಜೆಪಿ; 363 ಸೀಟುಗಳ ಮೇಲೆ ಕಣ್ಣು

10:20 AM Apr 05, 2017 | Team Udayavani |

ಹೊಸದಿಲ್ಲಿ: ಉತ್ತರಪ್ರದೇಶ, ಉತ್ತರಾಖಂಡ ವಿಧಾನಸಭೆಯಲ್ಲಿ ಅಭೂತಪೂರ್ವ ಗೆಲುವು ಹಾಗೂ ಪಂಚರಾಜ್ಯಗಳ ಪೈಕಿ ನಾಲ್ಕರಲ್ಲಿ ಸರ್ಕಾರ ರಚಿಸಿರುವ ಉತ್ಸಾಹದಲ್ಲಿರುವ ಬಿಜೆಪಿ ಇನ್ನು ಹಿಂದಿರುಗಿ ನೋಡದೇ ಇರಲು ನಿರ್ಧರಿಸಿದೆ. ಅದರಂತೆ, 2019ರ ಲೋಕಸಭೆ ಚುನಾವಣೆಗೆ ಈಗಲೇ ಸಿದ್ಧತೆ ಆರಂಭಿಸಿದೆ. ದೇಶದ ಮೂಲೆ ಮೂಲೆಗಳಲ್ಲಿ ಕೇಸರಿ ಅಲೆ ವ್ಯಾಪಿಸುವಂತೆ ಮಾಡಿ, 363 ಸೀಟುಗಳ ಗಡಿಯನ್ನು ದಾಟುವ ಗುರಿ ಹಾಕಿಕೊಂಡಿರುವ ಬಿಜೆಪಿ, ಪಕ್ಷದ ‘ಮಿಷನ್‌ 2019’ನ ಮುಂದಿನ ಸ್ಟಾಪ್‌ ಆಗಿ ಒಡಿಶಾವನ್ನು ಆಯ್ದುಕೊಂಡಿದೆ. ಅದಕ್ಕಾಗಿಯೇ ತನ್ನ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಭುವನೇಶ್ವರದಲ್ಲಿ ಹಮ್ಮಿಕೊಂಡಿರುವುದು. ಇದೇ 15 ಮತ್ತು 16ರಂದು ಕಾರ್ಯಕಾರಿಣಿ ಜರುಗಲಿದ್ದು, ಕೇಂದ್ರ ಸಚಿವರು, ಆರೆಸ್ಸೆಸ್‌ ನಾಯಕರು, ಬಿಜೆಪಿ ಆಡಳಿತವಿರುವ ರಾಜ್ಯಗಳ ಸಿಎಂಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement

11 ಕೋಟಿ ಸದಸ್ಯರ ಗುರಿ: ಬಿಜೆಪಿಯ ಸ್ಥಾಪನಾ ದಿನವಾದ ಎ.6 ಮತ್ತು ಬಾಬಾಸಾಹೇಬ್‌ ಭೀಮರಾವ್‌ ಅಂಬೇಡ್ಕರ್‌ರ ಜನ್ಮ ಶತಮಾನೋತ್ಸವ ದಿನವಾದ ಎ.14ರಂದು ಬೃಹತ್‌ ಅಭಿಯಾನವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ತನ್ನ ಸದಸ್ಯರ ಸಂಖ್ಯೆಯನ್ನು 11 ಕೋಟಿಗೇರಿಸುವುದು ಈ ಅಭಿಯಾನದ ಮೂಲ ಉದ್ದೇಶ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲುಂಡಿರುವ 200ರಷ್ಟು ಸೀಟುಗಳೇ ಪಕ್ಷದ ಟಾರ್ಗೆಟ್‌ ಆಗಿದೆ. ಹೀಗಾಗಿ, ಹಿರಿಯ ನಾಯಕರು ಅಲ್ಲಿಗೆ ತೆರಳಿ ಬಿಜೆಪಿಯನ್ನು ಬಲಿಷ್ಠಗೊಳಿಸುವ ಕಾರ್ಯದಲ್ಲಿ ನಿರತರಾಗಲಿದ್ದಾರೆ. 

ರಿಪೋರ್ಟ್‌ ಕಾರ್ಡ್‌ ಬಿಡುಗಡೆಗೆ ಬಿಜೆಪಿ ಇಂಗಿತ
ಮುಂದಿನ ತಿಂಗಳು ಮೋದಿ ನೇತೃತ್ವದ ಸರಕಾರಕ್ಕೆ 3 ವರ್ಷ ಪೂರ್ಣವಾಗಲಿರುವ ಹಿನ್ನಲೆಯಲ್ಲಿ ಸಾಧನೆಗಳನ್ನು ಜನರಿಗೆ ತಿಳಿಸಲು ರಿಪೋರ್ಟ್‌ ಕಾರ್ಡ್‌ ಬಿಡುಗಡೆ ಮಾಡಲು ಬಿಜೆಪಿ ಮುಂದಾಗಿದೆ.3 ವರ್ಷಗಳ ಅವಧಿಯಲ್ಲಿ ಏನು ಅಗಿಲ್ಲ ಬರಿ ಮಾತೆ ಸಾಧನೆ ಎಂಬ ವಿರೋಧ‌ ಪಕ್ಷಗಳ ಟೀಕೆಗೆ ಬೀಗ ಹಾಕುವುದು ಮತ್ತು ಸಾಧನೆಗಳನ್ನು ಜನರಿಗೆ ವಿವರಿಸುವುದು ಇದರ ಮುಖ್ಯ ಉದ್ದೇಶ. ಪ್ರತಿ ಸಚಿವಾಲಯವೂ ಮಾಡಿರುವ ಸಾಧನೆಗಳನ್ನು ತಿಳಿಯಪಡಿಸಿ ವಿರೋಧಪಕ್ಷಗಳು ಮಾಡುತ್ತಿರುವ ಅಪಪ್ರಚಾರದಲ್ಲಿ ಯಾವುದೆ ಸತ್ಯವಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲು ಪಕ್ಷ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next