ನವದೆಹಲಿ: 2026ರ ಮಾರ್ಚ್ ವೇಳೆಗೆ ದೇಶದಲ್ಲಿ ನಕ್ಸಲಿಸಂ ನಿರ್ಮೂಲನೆ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.
ಈಗಾಗಲೇ ಶರಣಾಗಿರುವ 55 ನಕ್ಸಲರನ್ನು ಉದ್ದೇಶಿಸಿ ಮಾತನಾಡಿದ ಅವರು ಹಿಂಸಾಚಾರದಲ್ಲಿ ತೊಡಗಿರುವ ನಕ್ಸಲರು ಕೂಡಲೇ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗಿ ಇಲ್ಲದಿದ್ದರೆ ಕಾರ್ಯಾಚರಣೆ ನಡೆಸುವ ಮೂಲಕ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
ಛತ್ತೀಸ್‌ಗಢ ಬಸ್ತಾರ್‌ನಲ್ಲಿರುವ 4 ಜಿಲ್ಲೆಗಳನ್ನು ಹೊರತುಪಡಿಸಿ ಇಡೀ ದೇಶದಲ್ಲಿ ನಕ್ಸಲಿಸಂ ನಿರ್ಮೂಲನೆ ಮಾಡುವಲ್ಲಿ ನರೇಂದ್ರ ಮೋದಿ ಸರ್ಕಾರ ಯಶಸ್ವಿಯಾಗಿದೆ. ಅದರ ಮುಂದುವರೆದ ಭಾಗವಾಗಿ ದೇಶದಲ್ಲಿ ನಕ್ಸ್ಸಲ್ ಚಟುವಟಿಕೆಯನ್ನು ನಿರ್ಮೂಲನೆ ಮಾಡಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ, ಅದರಂತೆ ಮಾರ್ಚ್ 31, 2026 ರ ವೇಳೆಗೆ ದೇಶದಲ್ಲಿ ನಕ್ಸಲಿಸಂ ಅನ್ನು ಸಂಪೂರ್ಣ ಕೊನೆಗಾಣಿಸಿ ಶಾಂತಿ ನೆಲೆಸುವಂತೆ ಮಾಡಲಾಗುತ್ತದೆ ಹಾಗಾಗಿ ಕೂಡಲೇ ಹಿಂಸಾಚಾರದಲ್ಲಿ ತೊಡಗಿರುವ ನಕ್ಸಲರು ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಿ ಎಂದು ಖಡಕ್ ಸೂಚನೆ ನೀಡಿದ್ದಾರೆ.
ಕಾಶ್ಮೀರದಲ್ಲಿ ಎಡಪಂಥೀಯ ಉಗ್ರವಾದ ಮತ್ತು ಭಯೋತ್ಪಾದನೆಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಕಾಶ್ಮೀರದಲ್ಲಿ ನಕ್ಸಲೀಯರು ಮತ್ತು ಭಯೋತ್ಪಾದಕರ ವಿರುದ್ಧ ಶೀಘ್ರದಲ್ಲೇ ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದು ಅಮಿತ್ ಶಾ ಹೇಳಿದರು. ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ಛತ್ತೀಸ್‌ಗಢ ಸರ್ಕಾರಗಳು ನಕ್ಸಲ್ ಪೀಡಿತ ಜನರಿಗೆ ವಿಶೇಷ ವಸತಿ ನೀತಿಯನ್ನು ತರಲಿವೆ ಎಂದು ಹೇಳಿದರು.
ಮಾವೋವಾದಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಗಮನಾರ್ಹ ಯಶಸ್ಸನ್ನು ಸಾಧಿಸಿವೆ, ಈಗ ಸಮಸ್ಯೆ ಇರುವುದು ಛತ್ತೀಸ್‌ಗಢದ ಕೇವಲ ನಾಲ್ಕು ಜಿಲ್ಲೆಗಳಿಗೆ ಸೀಮಿತವಾಗಿದೆ ಎಂದು ಶಾ ಹೇಳಿದರು.
ಇದನ್ನೂ ಓದಿ: Stock Market: ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಏರಿಕೆ, ನಿಫ್ಟಿ ಜಿಗಿತ