Advertisement

ಬಿಜೆಪಿಗೆ 300ಕ್ಕೂ ಹೆಚ್ಚು ಸೀಟು ಖಚಿತ

11:09 PM Dec 26, 2021 | Team Udayavani |

ಲಕ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಅಧಿಕ ಸೀಟುಗಳನ್ನು ಗೆಲ್ಲುವುದು ಖಚಿತ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ರವಿವಾರ ಇಲ್ಲಿನ ಕಸ್‌ಗಂಜ್‌ನಲ್ಲಿ “ಜನವಿಶ್ವಾಸ್‌ ಯಾತ್ರೆ’ ಉದ್ದೇಶಿಸಿ ಮಾತನಾಡಿದ ಅವರು, “ಹಿಂದೆಲ್ಲ ಜನಸಾಮಾನ್ಯರು ಗೂಂಡಾಗಳಿಗೆ ಹೆದರಿ ರಾಜ್ಯ ಬಿಟ್ಟು ಓಡಿ ಹೋಗುತ್ತಿದ್ದರು. ಆದರೆ ಕಳೆದ ನಾಲ್ಕೂವರೆ ವರ್ಷ ಗಳಿಂದ ಗೂಂಡಾಗಳೇ ಹೆದರಿ ರಾಜ್ಯ ಬಿಟ್ಟು ಓಡಿಹೋಗುತ್ತಿದ್ದಾರೆ. ಈಗ ರಾಜ್ಯದ ಜನರ್ಯಾರೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿಲ್ಲ’ ಎಂದಿದ್ದಾರೆ.

ವಾರಾಣಸಿಯಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಕಾಶಿ ವಿಶ್ವನಾಥ ಕಾರಿಡಾರ್‌ ಕುರಿತು ಪ್ರಸ್ತಾವಿಸಿದ ಶಾ, ಈ ಪವಿತ್ರ ಕ್ಷೇತ್ರವು ಹಿಂದೆ ಮರುಭೂಮಿಯಂತೆ ಕಾಣುತ್ತಿತ್ತು. ಈಗ ಪ್ರಧಾನಿ ಮೋದಿ ಅವರಿಂದಾಗಿ ಕಾಶಿ ಕ್ಷೇತ್ರವು ಸುಂದರವಾಗಿ ಕಾಣುತ್ತಿದೆ. ಹಿಂದಿನ ಎಸ್ಪಿ ಹಾಗೂ ಬಿಎಸ್ಪಿ ಸರಕಾರಗಳು ಜಾತಿ ರಾಜಕೀಯ ಮಾಡಿದವೇ ವಿನಾ ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಿಲ್ಲ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿಎಂಸಿ-ಆಪ್‌ ವಿರುದ್ಧ ಚಿದು ಕಿಡಿ: ಗೋವಾದಲ್ಲಿ ಆಪ್‌ ಮತ್ತು ಟಿಎಂಸಿ ಪಕ್ಷಗಳು ಬಿಜೆಪಿಯೇತರ ಮತಗಳನ್ನು ವಿಭಜಿಸುತ್ತಿವೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಪಿ. ಚಿದಂಬರಂ ಕಿಡಿಕಾರಿದ್ದಾರೆ. ಗೋವಾದ ಎಲ್ಲ 40 ಕ್ಷೇತ್ರ ಗಳಲ್ಲೂ ಕಾಂಗ್ರೆಸ್‌ನ ಬೇರು ಆಳವಾಗಿದೆ. ಬಿಜೆಪಿಯನ್ನು ಸೋಲಿಸುವ ಶಕ್ತಿ ಇರುವುದು ಕಾಂಗ್ರೆಸ್‌ಗೆ ಮಾತ್ರ. ಪಕ್ಷವು ಖಂಡಿತಾ ಗೋವಾದಲ್ಲಿ ಜಯ ಗಳಿಸಲಿದೆ ಎಂದಿದ್ದಾರೆ.

ಲಡ್ಕಿ ಹೂಂ, ಲಡ್‌ ಸಕ್ತೀ ಹೂಂ… :

Advertisement

ರವಿವಾರ ಬೆಳಗ್ಗೆ ಲಕ್ನೋ ಮತ್ತು ಝಾನ್ಸಿಯಲ್ಲಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ ಅವರು, “ಲಡ್ಕಿ ಹೂಂ, ಲಡ್‌ ಸಕ್ತೀ ಹೂಂ’ (ನಾನು ಹೆಣ್ಣುಮಗಳು, ಹೋರಾಡಬಲ್ಲೆ) ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಲಕ್ನೋದಲ್ಲಿ ಜಿಲ್ಲಾಡಳಿತವು ಕೊರೊನಾ ಕಾರಣಕ್ಕಾಗಿ ಅಭಿಯಾನಕ್ಕೆ ಅನುಮತಿ ನೀಡದ ಕಾರಣ ಮಹಿಳೆಯರು ಪ್ರತಿಭಟನೆ ನಡೆಸಿದ ಘಟನೆಯೂ ಜರುಗಿದೆ. ನೀವು ಮಹಿಳಾ ವಿರೋಧಿಗಳಾಗಿರುವ ಕಾರಣ ಹೆಣ್ಣುಮಕ್ಕಳ ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲ ಎಂದು ಯೋಗಿ ಸರಕಾರದ ವಿರುದ್ಧ ಪ್ರಿಯಾಂಕಾ ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next