Advertisement

ರಾಜ್ಯ ಸಚಿವ ಸಂಪುಟ ರಚನೆಗೆ ಮಂಗಳವಾರ ಮುಹೂರ್ತ ಫಿಕ್ಸ್

10:33 AM Aug 19, 2019 | Sriram |

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಿ 3 ವಾರ ಕಳೆದ ಬಳಿಕ ಕೊನೆಗೂ ವರಿಷ್ಠರು ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ತೋರಿದ್ದಾರೆ. ಮಂಗಳವಾರ ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನಕ್ಕೆ ಮುಹೂರ್ತ ನಿಗದಿಯಾಗಿದೆ.

Advertisement

ಮೊದಲ ಹಂತದಲ್ಲಿ 12 ರಿಂದ 15 ಮಂದಿ ಸಚಿವ ರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದ್ದು, ಯಾರ್ಯಾರು ಸಚಿವರಾಗಲಿ ದ್ದಾರೆ ಎಂಬುದನ್ನು ಕೇಂದ್ರಗೃಹ ಸಚಿವ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನಿರ್ಧಾರ ಮಾಡಲಿದ್ದಾರೆ. ರವಿವಾರ ಇಲ್ಲವೇ ಸೋಮವಾರ ಪಟ್ಟಿ ರಾಜ್ಯ ನಾಯಕರಿಗೆ ರವಾನೆಯಾಗಲಿದೆ.

ಮಂಗಳವಾರ ಬೆಳಗ್ಗೆ ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಪಕ್ಷ ಸಭೆ ನಡೆಯಲಿದ್ದು, ಬಳಿಕ ಮಧ್ಯಾಹ್ನ ರಾಜಭವನದಲ್ಲಿ ಸಚಿವ ಸಂಪುಟ ಸದಸ್ಯರ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ. ಈ ಮೂಲಕ ಕಳೆದ 22 ದಿನಗಳಿಂದ ಮೂಡಿದ್ದ ಗೊಂದಲಕ್ಕೆ ತೆರೆ ಬಿದ್ದಂತಾ ಗಿದೆ. ಮೊದಲ ಹಂತದಲ್ಲಿ ಎಷ್ಟು ಸಚಿವ ಸ್ಥಾನ ಮತ್ತು ಅವು ಯಾರಿಗೆ ಸಿಗಲಿವೆ ಎಂಬ ಕುತೂಹಲ ಮಾತ್ರ ಹಾಗೆಯೇ ಉಳಿದಿದೆ. ಜತೆಗೆ ಸಚಿವಾಕಾಂಕ್ಷಿಗಳಲ್ಲೂ ತಲ್ಲಣ, ಆತಂಕ ಆರಂಭವಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಶನಿವಾರ ಸಂಜೆ ಅಮಿತ್‌ ಶಾ ಅವರನ್ನು ಭೇಟಿಯಾಗಿ ನಡೆಸಿದ ಚರ್ಚೆ ಫ‌ಲಪ್ರದವಾಗಿದ್ದು, ಸಂಪುಟ ವಿಸ್ತರಣೆಗೆ ವರಿಷ್ಠರು ಒಪ್ಪಿಗೆ ನೀಡಿದ್ದಾರೆ. ಆದರೆ ಮೊದಲ ಹಂತ ದಲ್ಲಿ ಯಾರೆಲ್ಲ ಸಚಿವರಾಗಲಿದ್ದಾರೆ ಎಂಬುದು ಇನ್ನೂ ಗೌಪ್ಯವಾಗಿದ್ದು, ವರಿಷ್ಠರು ಸದ್ಯದಲ್ಲೇ ಪಟ್ಟಿ ಅಂತಿಮಗೊಳಿಸಿ ರವಾನಿಸಲಿದ್ದಾರೆ.

ಎರಡನೇ ಬಾರಿಗೆ ದಿಲ್ಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆಯುವ ಯಡಿಯೂರಪ್ಪ ಅವರ ಪ್ರಯತ್ನ ಕೊನೆಗೂ ಫ‌ಲ ನೀಡಿದೆ.

Advertisement

ವಿಸ್ತೃತ ಚರ್ಚೆ
ಯಡಿಯೂರಪ್ಪ ಅವರು ಸಂಭಾವ್ಯ ಸಚಿವರ ಹೆಸರು ಪ್ರಸ್ತಾವಿಸಿದ ಬಳಿಕ ಅಮಿತ್‌ ಶಾ ವಿಸ್ತೃತ ಚರ್ಚೆ ನಡೆಸಿದರು. ಸಚಿವ ಸ್ಥಾನಕ್ಕೆ ಪ್ರಸ್ತಾವಿಸಿರುವ ಶಾಸಕರ ಹಿನ್ನೆಲೆ, ಕಾರ್ಯ ನಿರ್ವಹಣೆಯ ಸಾಮರ್ಥ್ಯ, ಸರಕಾರ ಮತ್ತು ಪಕ್ಷಕ್ಕೆ ಉಂಟಾಗುವ ಅನುಕೂಲ ಸಹಿತ ವಿವಿಧ ಮಾಹಿತಿಗಳನ್ನು ಪಡೆದರು. ಜತೆಗೆ ಸಚಿವ ಸ್ಥಾನಕ್ಕೆ ಪರಿಗಣಿಸಿರುವ ಅಂಶಗಳ ಬಗ್ಗೆ ಯಡಿಯೂರಪ್ಪ ಅವರಿಂದ ವಿವರ ಪಡೆದುಕೊಂಡರು ಎನ್ನಲಾಗಿದೆ.

ಸದ್ಯದಲ್ಲೇ ಶಾ ಅವರಿಂದ ಪಟ್ಟಿ ರವಾನೆ
ಮೊದಲ ಹಂತದಲ್ಲಿ 16 ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದು ಉತ್ತಮ. ಇದರಿಂದ ದೈನಂದಿನ ಆಡಳಿತವನ್ನು ಸುಗಮವಾಗಿ ನಡೆಸುವ ಜತೆಗೆ ನೆರೆ ಹಾನಿ ಪ್ರದೇಶಗಳಲ್ಲಿ ಪರಿಹಾರ – ಪುನರುಜ್ಜೀವನ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಲು ಸಾಧ್ಯವಾಗಲಿದೆ ಎಂಬುದನ್ನು ಯಡಿಯೂರಪ್ಪ ಅವರು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ. ಸಂಭಾವ್ಯರ ಪಟ್ಟಿ ಪರಿಶೀಲಿಸಿ ಸದ್ಯದಲ್ಲೇ ಅಂತಿಮಗೊಳಿಸಿ ಮಾಹಿತಿ ನೀಡುವುದಾಗಿ ಅಮಿತ್‌ ಶಾ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಭಿನ್ನಮತ
ತಡೆಗೆ ಮುನ್ನೆಚ್ಚರಿಕೆ
ಮಂಗಳವಾರ ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಿಗದಿಯಾಗಿದ್ದು, ಅದಕ್ಕೂ ಮೊದಲು, ಮಂಗಳವಾರ ಬೆಳಗ್ಗೆ 10 ಗಂಟೆಗೆ ವಿಧಾನಸೌಧದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿರುವುದು ಕುತೂಹಲ ಮೂಡಿಸಿದೆ. ಬಿಜೆಪಿಯಲ್ಲಿ ಮೂರಕ್ಕಿಂತ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾದ ಮತ್ತು ಹಿಂದೆ ಸಚಿವರಾಗಿ ಕಾರ್ಯ ನಿರ್ವಹಿಸಿದ 50ಕ್ಕೂ ಹೆಚ್ಚು ಹಿರಿಯ ಶಾಸಕರಿದ್ದಾರೆ. ಮೊದಲ ಹಂತದಲ್ಲಿ 12ರಿಂದ 15 ಮಂದಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಜತೆಗೆ 10 ಸಚಿವ ಸ್ಥಾನಗಳನ್ನು ಬಿಜೆಪಿ ಸರಕಾರ ರಚನೆಗೆ ಕಾರಣರಾದ ಅನರ್ಹ ಶಾಸಕರ ಪೈಕಿ ಕೆಲವರಿಗೆ ಕಾಯ್ದಿರಿಸುವ ಸಾಧ್ಯತೆ ಇದೆ. ಇದರಿಂದ ಸಚಿವಾಕಾಂಕ್ಷಿಗಳಲ್ಲಿ ಮೂರು ಇಲ್ಲವೇ ನಾಲ್ಕನೇ ಒಂದು ಭಾಗದಷ್ಟು ಶಾಸಕರಿಗಷ್ಟೇ ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಗಲಿದೆ. ಇದು ಆಕಾಂಕ್ಷಿಗಳಲ್ಲಿ ಬೇಸರ, ಆಕ್ರೋಶಕ್ಕೆ ಕಾರಣವಾಗಬಹುದು. ಹಾಗಾಗಿ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ಅಸಮಾಧಾನ, ಭಿನ್ನಮತ ಉಂಟಾಗದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಶಾಸಕಾಂಗ ಪಕ್ಷದ ಸಭೆ ಕರೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಂಭಾವ್ಯ ಸಚಿವರು
ಲಿಂಗಾಯತ: ಜಗದೀಶ ಶೆಟ್ಟರ್‌, ಜೆ.ಸಿ. ಮಾಧುಸ್ವಾಮಿ, ಉಮೇಶ್‌ ಕತ್ತಿ, ಬಸನಗೌಡ ಪಾಟೀಲ್‌, ಶಶಿಕಲಾ ಜೊಲ್ಲೆ
ಒಕ್ಕಲಿಗ: ಆರ್‌. ಅಶೋಕ್‌, ಡಾ| ಸಿ.ಎನ್‌. ಅಶ್ವತ್ಥ ನಾರಾಯಣ, ಸಿ.ಟಿ. ರವಿ
ಬ್ರಾಹ್ಮಣ: ಎಸ್‌. ಸುರೇಶ್‌ ಕುಮಾರ್‌ ಅಥವಾ ಎಲ್‌.ಎ. ರವಿಸುಬ್ರಹ್ಮಣ್ಯ ಎ.ಎಸ್‌. ರಾಮದಾಸ್‌
ಪ. ಜಾತಿ: ಅರವಿಂದ ಲಿಂಬಾವಳಿ, ಎಸ್‌. ಅಂಗಾರ, ನೆಹರು ಓಲೇಕಾರ್‌, ಗೋವಿಂದ ಕಾರಜೋಳ, ಎನ್‌. ರವಿಕುಮಾರ್‌
 ಪ. ಪಂಗಡ: ಶ್ರೀರಾಮುಲು, ಬಾಲಚಂದ್ರ ಜಾರಕಿಹೊಳಿ, ಶಿವನಗೌಡ ನಾಯಕ್‌
 ಬಂಟ: ಹಾಲಾಡಿ ಶ್ರೀನಿವಾಸ ಶೆಟ್ಟಿ
 ಹಿಂದುಳಿದ ವರ್ಗ: ಕೆ.ಎಸ್‌. ಈಶ್ವರಪ್ಪ (ಕುರುಬ), ಕೋಟ ಶ್ರೀನಿವಾಸ ಪೂಜಾರಿ, ಸುನಿಲ್‌ ಕುಮಾರ್‌ (ಈಡಿಗ), ಪೂರ್ಣಿಮಾ ಶ್ರೀನಿವಾಸ್‌ (ಯಾದವ). ಕೆ.ಜೆ. ಬೋಪಯ್ಯ (ಕೊಡವ).

Advertisement

Udayavani is now on Telegram. Click here to join our channel and stay updated with the latest news.

Next