ನವದೆಹಲಿ: ಅಕ್ರಮ ವಲಸಿಗರನ್ನು ಗುರುತಿಸುವ ಅಸ್ಸಾಂ ನಾಗರಿಕರ ರಾಷ್ಟ್ರೀಯ ನೋಂದಣಿ(ಎನ್ ಆರ್ ಸಿ) ಅಂತಿಮ ಕರಡಿಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಗೆ ತಿರುಗೇಟು ನೀಡಿರುವ ಬಿಜೆಪಿ ಸಂಸದ ಅಮಿತ್ ಶಾ, ರಾಜೀವ್ ಗಾಂಧಿ 1985ರಲ್ಲಿನ ಅಸ್ಸಾಂ ಒಪ್ಪಂದವೂ ಕೂಡಾ ಎನ್ ಆರ್ ಸಿ ಉದ್ದೇಶವನ್ನೇ ಹೊಂದಿತ್ತು ಎಂದು ತಿರುಗೇಟು ನೀಡಿದ್ದಾರೆ.
ಅಸ್ಸಾಂನ ಎನ್ ಆರ್ ಸಿ ಕರಡನ್ನು ವಿರೋಧಿಸಿ ಕಾಂಗ್ರೆಸ್ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ವೇಳೆ ಮಾತನಾಡಿದ ಶಾ, ಎನ್ ಆರ್ ಸಿ ಯನ್ನು ಜಾರಿಗೊಳಿಸುವ ಧೈರ್ಯವನ್ನು ಕಾಂಗ್ರೆಸ್ ಪಕ್ಷ ಮಾಡಿಲ್ಲ, ಆದರೆ ಬಿಜೆಪಿ ಅದನ್ನು ಮಾಡುತ್ತಿದೆ ಎಂದು ಹೇಳಿದರು.
ರಾಜ್ಯಸಭೆಯಲ್ಲಿ ಮಂಗಳವಾರ ಎನ್ ಆರ್ ಸಿ ಕರಡನ್ನು ವಿರೋಧಿಸಿ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿ ಕೋಲಾಹಲ ನಡೆಸಿತ್ತು. ಈ ಸಂದರ್ಭದಲ್ಲಿ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಶಾ, 1985ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಸಹಿ ಮಾಡಿದ್ದ ಅಸ್ಸಾಂ ಒಪ್ಪಂದವೂ ಕೂಡಾ ಎನ್ ಆರ್ ಸಿಯಲ್ಲಿರುವ ಅಂಶಗಳನ್ನೇ ಹೊಂದಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸದಸ್ಯರ ಗದ್ದಲಕ್ಕೆ ಆಕ್ರೋಶ ವ್ಯಕ್ತಪಡಿಸಿದ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು, ಇದು ರಾಜ್ಯಸಭೆ, ಹಿರಿಯರ ಮೇಲ್ಮನೆಯಾಗಿದೆ. ನಿಮ್ಮ, ನಡೆ ನುಡಿಗಳನ್ನು ಇಡೀ ದೇಶವೇ ಗಮನಿಸುತ್ತಿದೆ. ದಯವಿಟ್ಟು ಪ್ರಜಾಪ್ರಭುತ್ವವನ್ನು ಅಣಕಿಸುವಂತೆ ಮಾಡಬೇಡಿ ಎಂದು ಮನವಿ ಮಾಡಿದರು.
ಕೋಲಾಹಲ ಹೆಚ್ಚಾದ ನಂತರ ಸಭಾಪತಿ ನಾಯ್ಡು ಅವರು ರಾಜ್ಯಸಭೆ ಕಲಾಪವನ್ನು ಬುಧವಾರ 11ಗಂಟೆಗೆ ಮುಂದೂಡಿದರು.
ಅಸ್ಸಾಂ ನಾಗರಿಕರ ನೋಂದಣಿ ಅಂತಿಮ ಕರಡಿನ ಕುರಿತು ಮಾತನಾಡಿದ ಕಾಂಗ್ರೆಸ್ ಸಂಸದ ಗುಲಾಮ್ ನಬಿ ಅಜಾದ್ ಮಾತನಾಡಿ, ಎನ್ ಆರ್ ಸಿಯ ಅಂತಿಮ ಕರಡಿನಲ್ಲಿ ಸುಮಾರು 40 ಲಕ್ಷ ಅಸ್ಸಾಮಿಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ನಿಜವಾದ ಭಾರತೀಯರನ್ನು ದೇಶದಿಂದ ಹೊರಗೆ ಕಳುಹಿಸಬಾರದು. ಎನ್ ಆರ್ ಸಿ ಈ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡಬಾರದು ಮತ್ತು ವೋಟ್ ಬ್ಯಾಂಕ್ ಗೆ ಉಪಯೋಗಿಸಿಕೊಳ್ಳಬಾರದು. ಇದು ಮಾನವ ಹಕ್ಕಿಗೆ ಸಂಬಂಧಿಸಿದ ವಿಷಯವಾಗಿದೆ ವಿನಃ, ಹಿಂದು, ಮುಸ್ಲಿಂ ವಿಚಾರವಲ್ಲ ಎಂದು ಕಲಾಪದಲ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದರು.