Advertisement
ಶ್ರೀಗಳ ಆರೋಗ್ಯ ಚಿಕಿತ್ಸೆ ಗಂಭೀರವಾಗಿದೆ. ಪ್ರಸ್ತುತ 48 ಗಂಟೆಗಳ ಕಾಲ ವೆಂಟಿಲೇಟರ್ ಮೂಲಕ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿದೆ. ಆ್ಯಂಟಿಬಯೋಟಕ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ನ್ಯುಮೋನಿಯಾ ಆರೋಗ್ಯ ಸಮಸ್ಯೆಯಿಂದ ಅವರು ಚಿಕಿತ್ಸೆಗೆ ದಾಖಲಾಗಿದ್ದಾರೆ. ಕೆಎಂಸಿ ಆಸ್ಪತ್ರೆಯಲ್ಲಿ ಡಾಣ ಸುಧಾ ವಿದ್ಯಾ ಸಾಗರ್ ನೇತೃತ್ವದ ವೈದ್ಯಕೀಯ ತಂಡ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಇತ್ತೀಚಿಗೆ ಉತ್ತರ ಭಾರತ, ತಿರುಪತಿ ಹಾಗೂ ಚೆನ್ನೈ ಪ್ರವಾಸ ಮಾಡಿ ಶ್ರೀಗಳು ಬಂದಿದ್ದರು. ಮಂಗಳವಾರ ತಿರುಪತಿಯಿಂದ ಬಂದ ಅವರು ಬೆಂಗಳೂರಿನಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅವರಿಗೆ ಜ್ವರವಿದ್ದರೂ ಗುರುವಾರ ರಾಮಕುಂಜ ಮತ್ತು ಪಾಜಕದ ಶಾಲಾ ಕಾಲೇಜುಗಳ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡರು. ಸಂಜೆ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಅವರ ಶಿಷ್ಯರೊಬ್ಬರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅರ್ಧ ಗಂಟೆ ಉಪನ್ಯಾಸ ನೀಡಿದ್ದರು. ಗುರುವಾರ ರಾತ್ರಿ ಶೀತದಿಂದ ಬಳಲುತ್ತಿದ್ದ ಅವರಿಗೆ ಉಸಿರಾಟದ ತೊಂದರೆ ಉಂಟಾಗಿತ್ತು. ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸ್ವಲ್ಪ ಗುಣಮುಖವಾದ ಕಾರಣ ಮಠಕ್ಕೆ ಹಿಂದಿರುಗಿದರು. ಬೆಳಗ್ಗೆ ಸುಮಾರು 3.30 ಗಂಟೆ ಹೊತ್ತಿಗೆ ಆರೋಗ್ಯ ಮತ್ತಷ್ಟು ಹದಗೆಟ್ಟ ಕಾರಣ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೊದಲಾದವರು ಡಿ. 21ರಂದು ಆಗಮಿಸಿ ಶ್ರೀಗಳ ಆರೋಗ್ಯವನ್ನು ವಿಚಾರಿಸಲಿದ್ದಾರೆ.
Related Articles
ಪೇಜಾವರ ಶ್ರೀಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಗಣ್ಯಾತಿಗಣ್ಯರು ಅವರನ್ನು ನೋಡಲು ಆಗಮಿಸಿದರು. ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಎಡನೀರು ಮಠದ ಶ್ರೀಕೇಶವಾನಂದ ಭಾರತಿ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಸಿರಿಗೆರೆ ತರಳಬಾಳು ಶ್ರೀಗಳು, ಕನ್ಯಾಡಿಯ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಮೂಡಬಿದಿರೆಯ ಶ್ರೀಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಈಶ್ವರಪ್ಪ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಜಿ.ಪಂ. ಸಿಇಒ ಪ್ರೀತಿ ಗೆಹೂÉಟ್, ಎಡಿಸಿ ಸದಾಶಿವ ಪ್ರಭು, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಸುನಿಲ್ ಕುಮಾರ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಆರೆಸ್ಸೆಸ್ ಮುಖಂಡ ಡಾಣ ಕಲ್ಲಡ್ಕ ಪ್ರಭಾಕರ ಭಟ್, ಮೂಡಬಿದಿರೆಯ ಡಾಣ ಮೋಹನ ಆಳ್ವ, ಉದ್ಯಮಿ ಭುವನೇಂದ್ರ ಕಿದಿಯೂರು ಸಹಿತ ಹಲವಾರು ಮಂದಿ ಗಣ್ಯರು ಭೇಟಿ ನೀಡಿದರು.
Advertisement
ಗುಣಮುಖರಾಗುವಂತೆ ಹಲವೆಡೆ ಪ್ರಾರ್ಥನೆಶ್ರೀಪಾದರು ಶೀಘ್ರ ಗುಣಮುಖರಾಗುವಂತೆ ಹಾರೈಸಿ ವಿವಿಧೆಡೆ ವಿಶೇಷ ಪ್ರಾರ್ಥನೆ ಮಾಡಲಾಯಿತು. ಶ್ರೀ ಕೃಷ್ಣ ಮಠದ ಚಂದ್ರಶಾಲೆಯಲ್ಲಿ ಶ್ರೀವಿಷ್ಣುಸಹಸ್ರನಾಮ ಹಾಗೂ ವಾಯುಸ್ತುತಿ ಮೊದಲಾದ ಸೂಕ್ತ, ಸ್ತೋತ್ರ ಪಾರಾಯಣ ಮಾಡುವ ಮೂಲಕ ಪ್ರಾರ್ಥನೆ ನಡೆಸಿದರು. ಶ್ರೀಗಳು ಶೀಘ್ರ ಗುಣಮುಖರಾಗುವಂತೆ ಹಾರೈಸಿ ಯೋಗಗುರು ಬಾಬಾ ರಾಮ್‌ದೇವ್ ಪ್ರಾರ್ಥಿಸಿದರು. ಹರಿದ್ವಾರದ ಪತಂಜಲಿ ಯೋಗಪೀಠದಲ್ಲಿ ವಿಶೇಷ ಭಜನೆ, ಪ್ರಾರ್ಥನೆ ನಡೆಯಿತು. ಜಿಲ್ಲಾ ನಾಗರಿಕ ಸಮಿತಿ ಹಾಗೂ ಪಂಚರತ್ನ ಸೇವಾ ಟ್ರಸ್ಟ್ ಆಯೋಜನೆಯಲ್ಲಿ ಮಾರುಥಿ ವಿಥಿಕಾ ಬಳಿಯ ಭಜನಾ ಮಂಟಪದಲ್ಲಿ ಹರಿನಾಮ ಸಂಕೀರ್ತನೆ ಕಾರ್ಯಕ್ರಮ ನಡೆಯಿತು. ಉಡುಪಿ ನಗರ ವಲಯ ಭಜನಾ ಮಂಡಳಿಗಳ ಭಜಕರು ಹರಿನಾಮ ಸಂಕೀರ್ತನೆ ನಡೆಸಿಕೊಟ್ಟರು. ಪ್ರಧಾನಿ ದೂರವಾಣಿ ಕರೆ
ಪೇಜಾವರ ಶ್ರೀಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಗಣ್ಯಾತಿಗಣ್ಯರು ಮಠದ ಆಪ್ತರಿಗೆ ಕರೆ ಮಾಡಿ ಸ್ವಾಮೀಜಿಗಳ ಆರೋಗ್ಯ ವಿಚಾರಿಸಿದರು. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕರೆಮಾಡಿ ಯೋಗಕ್ಷೇಮ ವಿಚಾರಿಸಿದರು. ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಬೆಳಗ್ಗಿನಿಂದಲೂ ಆಸ್ಪತ್ರೆಯಲ್ಲಿಯೇ ಇದ್ದರು. ಸುಳ್ಳು ಮಾಹಿತಿ ಹರಡುವವರ ವಿರುದ್ದ ಕಾನೂನು ಕ್ರಮ
ಸ್ವಾಮೀಜಿಯವರು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಅಸಮರ್ಪಕ ಮಾತುಗಳು/ ವಿಷಯಗಳು ಪ್ರಸಾರವಾಗುತ್ತಿದೆ. ಇದನ್ನು ಸಾರ್ವಜನಿಕರು ಪರಿಗಣಿಸದೆ ಕೆಎಂಸಿ ಆಸ್ಪತ್ರೆಯ ವೈದ್ಯಾಧಿಕಾರಿಯವರು ನೀಡುವಂತಹ ಹೇಳಿಕೆಗಳನ್ನು ಮಾತ್ರ ಪರಿಗಣಿಸಬೇಕು. ಸುಳ್ಳು ಮಾಹಿತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪಸರಿಸುವುದು ಕಾನೂನು ಬಾಹಿರವಾಗಿದೆ. ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿರುತ್ತದೆ. ಇಂತಹ ಸುಳ್ಳು ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಮಾಡಬಾರದು. ಮಾಡಿದರೆ ಇಂತಹವರ ವಿರುದ್ದ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪ್ರಕಟನೆ ತಿಳಿಸಿದೆ. ಪೇಜಾವರ ಶ್ರೀಗಳಿಗೆ ತಲುಪಿದ ಮಂಜುನಾಥ ಸ್ವಾಮಿ ಪ್ರಸಾದ
ಮುಂಬೈ ಪ್ರವಾಸದಲ್ಲಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಪೂಜ್ಯ ಶ್ರೀ ಪೇಜಾವರ ಸ್ವಾಮೀಜಿ ಅವರು ಅಸ್ವಸ್ಥರಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುದ್ದಿ ತಿಳಿದು ಪೂಜ್ಯ ಸ್ವಾಮೀಜಿ ಅವರು ಶೀಘ್ರ ಗುಣಮುಖರಾಗುವಂತೆ ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸಿ ಕಳುಹಿಸಿದ ಪ್ರಸಾದವನ್ನು ಅವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಸ್ವಾಮಿಗಳಿಗೆ ತಲುಪಿಸಿದ್ದಾರೆ.
ಪೂಜ್ಯ ಸ್ವಾಮೀಜಿಯವರು ಚಿಕಿತ್ಸೆಗೆ ಸ್ಪಂದಿಸಿ ಚೇತರಿಸಿ ಕೊಳ್ಳುತ್ತಿದ್ದಾರೆ ಎಂದು ಎ.ವಿ. ಶೆಟ್ಟಿಯರು ತಿಳಿಸಿದ್ದಾರೆ. ಅಮಿತ್ ಶಾ,ಯಡಿಯೂರಪ್ಪ ಭೇಟಿ
ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಥವಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಭೇಟಿ ನೀಡುವ ಸಾಧ್ಯತೆಗಳಿವೆ.
-ಕೆ.ರಘುಪತಿ ಭಟ್, ಶಾಸಕರು ಗುಣಮುಖರಾಗುವ ವಿಶ್ವಾಸ
ಪೇಜಾವರ ಶ್ರೀಗಳು ಶೀಘ್ರದಲ್ಲಿ ಗುಣಮುಖರಾಗಲಿದ್ದಾರೆ. ಶೀಘ್ರದಲ್ಲಿ ಚೇತರಿಕೆಗೊಂಡು ಮತ್ತೆ ಸಮಾಜ ಕಾರ್ಯದಲ್ಲಿ ತೊಡಗುತ್ತಾರೆ ಎಂಬ ವಿಶ್ವಾಸವಿದೆ.
-ನಳಿನ್ ಕುಮಾರ್ ಕಟೀಲು
ಬಿಜೆಪಿ, ರಾಜ್ಯಾಧ್ಯಕ್ಷ