Advertisement

ಇಂದಿನಿಂದ ಸಂಸತ್ತಿನ ಮುಂಗಾರು ಕಲಾಪ: ಕೋವಿಡ್ 19 ನಡುವೆ ಸುಗಮ ಅಧಿವೇಶನಕ್ಕೆ ಸಿದ್ಧತೆ

07:17 AM Sep 14, 2020 | Hari Prasad |

ಹೊಸದಿಲ್ಲಿ: ಕೋವಿಡ್ 19 ಆತಂಕದ ನಡುವೆ ಸೋಮವಾರದಿಂದ ಸಂಸತ್ತಿನ ಉಭಯ ಸದನಗಳ ಮುಂಗಾರು ಅಧಿವೇಶನ ಆರಂಭಗೊಳ್ಳಲಿದೆ.

Advertisement

ಈಗಾಗಲೇ ರೂಪಿಸಿರುವ ನಿಯಮಗಳಂತೆ ಅಧಿವೇಶನದಲ್ಲಿ ಭಾಗಿಯಾಗಲಿರುವ ಸಂಸದರು ರವಿವಾರ ಕೋವಿಡ್ 19 ಪರೀಕ್ಷೆಗೆ ಒಳಗಾಗಿದ್ದು, ಒಟ್ಟು ಐವರಲ್ಲಿ ಪಾಸಿಟಿವ್‌ ಕಾಣಿಸಿಕೊಂಡಿದೆ. ಸದ್ಯ ಇದು ಆತಂಕಕ್ಕೆ ಕಾರಣವಾಗಿದೆ.

18 ದಿನ ಅಧಿವೇಶನ
ಸೆ. 14ರಿಂದ ಅ. 1ರವರೆಗೆ ಅಧಿವೇಶನ ನಡೆಯಲಿದೆ. ಶನಿವಾರ ಮತ್ತು ರವಿವಾರ ರಜೆ ಇರುವುದಿಲ್ಲ. ರೈತರ ಉತ್ಪನ್ನ, ಮಾರಾಟ ಮತ್ತು ವಾಣಿಜ್ಯ ಮಸೂದೆ 2020 ಮತ್ತು ಎಂಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಸೂದೆ ಮಾತ್ರವಲ್ಲದೆ 11 ಅಧ್ಯಾದೇಶಗಳು ಮಸೂದೆ ರೂಪದಲ್ಲಿ ಮಂಡನೆಯಾಗಲಿವೆ.

ಪ್ರತ್ಯೇಕ ಸಮಯದಲ್ಲಿ ಕಲಾಪ
ಮೊದಲ ದಿನವಾದ ಸೋಮವಾರ ಮಾತ್ರ ಲೋಕಸಭೆ, ರಾಜ್ಯಸಭೆಗಳಲ್ಲಿ ಬೆಳಗ್ಗೆಯೇ ಕಲಾಪ ನಡೆಸಲಾಗುತ್ತದೆ. ಅಗಲಿದ ಗಣ್ಯರಿಗೆ ನಮನ ಸಲ್ಲಿಸಿ ಮಂಗಳವಾರಕ್ಕೆ ಕಲಾಪ ಮುಂದೂಡುವ ಸಂಭವವಿದೆ. ಪ್ರಶ್ನೋತ್ತರ ಅವಧಿಗೆ ಅವಕಾಶ ನೀಡಲಾಗಿಲ್ಲ.

ಆಸನ ವ್ಯವಸ್ಥೆ ಬದಲು
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಆಸನ ವ್ಯವಸ್ಥೆಯನ್ನೇ ಬದಲು ಮಾಡಲಾಗಿದೆ. ಕೆಲವರಿಗೆ ತಮ್ಮ ತಮ್ಮ ಕಚೇರಿಗಳಲ್ಲಿ ಮತ್ತು ಮೊಗಸಾಲೆಯಲ್ಲಿ ಕುಳಿತು ಸದನದಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಲಾಗಿದೆ.

Advertisement

ಹಿರಿಯರ ಗೈರು?
ಮೂಲಗಳ ಪ್ರಕಾರ, 65 ವರ್ಷ ಮೀರಿದ ಬಹಳಷ್ಟು ಸಂಸದರು ಕಲಾಪದಿಂದ ದೂರ ಉಳಿಯುವ ಸಾಧ್ಯತೆ ಇದೆ. ಲೋಕಸಭೆ ಮತ್ತು ರಾಜ್ಯಸಭೆ ಸೇರಿ ಒಟ್ಟು 785 ಸಂಸದರಿದ್ದಾರೆ. ಇವರಲ್ಲಿ 200 ಮಂದಿ 65 ವರ್ಷ ಮೇಲ್ಪಟ್ಟವರು. ರಾಜ್ಯಸಭೆಯ ಒಟ್ಟು 247 ಸದಸ್ಯರಲ್ಲಿ 97 ಮಂದಿ 65 ವರ್ಷ ಮೀರಿದ ಹಿರಿಯರು, 20 ಮಂದಿ 80 ವರ್ಷ ಮೀರಿದವರು ಇದ್ದಾರೆ. ಲೋಕಸಭೆಯಲ್ಲಿ 65 ವರ್ಷ ಮೀರಿದ 130 ಸಂಸದರಿದ್ದರೆ, 75 ವರ್ಷ ಮೇಲ್ಪಟ್ಟ 30 ಸಂಸದರಿದ್ದಾರೆ. 90 ವರ್ಷದ ಓರ್ವ ಸಂಸದರಿದ್ದಾರೆ.

ಸರ್ವ ಪಕ್ಷ ಸಭೆ ಇಲ್ಲ
ಇದೇ ಮೊದಲ ಬಾರಿಗೆ ಸರ್ವಪಕ್ಷಗಳ ಸಭೆ ನಡೆಸದೇ ಅಧಿವೇಶನ ಆರಂಭಿಸಲಾಗುತ್ತದೆ. ಆದರೆ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರು ರವಿವಾರ ಕಲಾಪ ಸಲಹಾ ಸಮಿತಿಯ ಸಭೆ ನಡೆಸಿ, ವಿಪಕ್ಷ ಸದಸ್ಯರ ಬೆಂಬಲ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next