ಅಮೀನಗಡ: ರಾಜ್ಯ ಮಟ್ಟದಲ್ಲಿ ಪ್ರಸಿದ್ಧಿ ಮತ್ತು ಶತಮಾನಗಳ ಇತಿಹಾಸ ಹೊಂದಿರುವ ಪಟ್ಟಣದ ಕುರಿ ಸಂತೆಯನ್ನು ಕ್ಷುಲಕ್ಕ ಕಾರಣಕ್ಕೆ ಇಂದು (ಡಿ.28ರಂದು) ಬಂದ್ ಮಾಡಿರುವ ಕ್ರಮಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಅಮೀನಗಡ ಪಟ್ಟಣ 2011ರ ಜನಗಣತಿ ಪ್ರಕಾರ 15,076 ಜನಸಂಖ್ಯೆ ಹೊಂದಿದೆ. 5 ಸಾವಿರಕ್ಕೂ ಹೆಚ್ಚು ಕುಟುಂಬಗಳು ಇವೆ. ಇನ್ನು ಇಲ್ಲಿನ ಕುರಿ ಸಂತೆಗೆ ಶತಮಾನಗಳ ಇತಿಹಾಸವಿದೆ. ಉತ್ತರ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ ಸಹಿತ ವಿವಿಧ ರಾಜ್ಯಗಳ ವ್ಯಾಪಾರಸ್ಥರು ಇಲ್ಲಿಗೆ ಬರುತ್ತಾರೆ. ಕೋಟ್ಯಂತರ ರೂ. ವ್ಯವಹಾರ ನಡೆಯುತ್ತದೆ ಮತ್ತು ಸಾವಿರಾರು ಬಡ ಕುಟುಂಬಗಳಿಗೆ ಆಸರೆಯಾಗಿರುವ ಈ ಕುರಿ ಸಂತೆಯನ್ನು ಒಂದು ದಿನದ ಮಟ್ಟಿಗೆ ಬಂದ್ ಮಾಡಿರುವ ಕ್ರಮಕ್ಕೆ ವ್ಯಾಪಾರಸ್ಥರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಶನಿವಾರ ಸಣ್ಣ ಪುಟ್ಟ ಅಹಿತಕರ ಘಟನೆಗೆ ಡಿ.28ರಂದು ಶನಿವಾರ ಕುರಿ ಮತ್ತು ದನದ (ಜಾನುವಾರುಗಳ) ಸಂತೆ ಬಂದ್ ಮಾಡಿರುವ ನಿರ್ಧಾರಕ್ಕೆ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಪಪಂ ಅಧಿಕಾರಗಳ ಹಾಗೂ ಪೊಲೀಸ್ ಇಲಾಖೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ರಾಷ್ಟ್ರದ ವಿವಿಧ ಭಾಗದದಿಂದ ಸಾವಿರಾರು ವ್ಯಾಪಾರಸ್ಥರು ಅಮೀನಗಡ ಕುರಿ ಸಂತೆಗೆ ಆಗಮಿಸುತ್ತಾರೆ. ಆದರೆ ಸಣ್ಣ ಪುಟ್ಟ ಘಟನೆಗಳಿಗೆ ಕೋಟ್ಯಂತರ ರೂ. ವ್ಯವಹಾರ ಆಗುವ ಸಂತೆ ಬಂದ್ ಮಾಡಿರುವ ಕ್ರಮ ಸರಿಯಲ್ಲ. ಸಣ್ಣ ಪುಟ್ಟ ಘಟನೆಗಳ ನಡೆದ ತಕ್ಷಣ ಜಾನುವಾರು ಸಂತೆ ಬಂದ್ ಮಾಡಿದ್ದು ನೆಗಡಿ ಬಂದರೆ ಮೂಗು ಕೊಯ್ದುಕೊಂಡರಂತೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಣ್ಣ ಅಂಗಡಿಕಾರರಿಗೆ, ಬಡ ವ್ಯಾಪಾರಸ್ಥರಿಗೆ, ಕುರಿ ಸಂತೆಗೆ ಅವಲಂಬನೆಯಾಗಿರುವ ಕುಟುಂಬಗಳಿಗೆ ತೊಂದರೆಯಾಗಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಡಿ.28ರಂದು ಕುರಿ ಮತ್ತು ದನದ ಸಂತೆ ಬಂದ್ ಮಾಡಿದ್ದು ಬಹಳ ಕುಟುಂಬಗಳಿಗೆ ತೊಂದರೆಯಾಗುತ್ತದೆ. ಕೆಲವು ಕುಟುಂಬಗಳು ವಾರಕ್ಕೊಮ್ಮೆ ಹೊಟೇಲ್ ಹಾಕಿ ಅಥವಾ ಜಾನುವಾರುಗಳ ಸಂತೆ ಮಾಡಿ ತಮ್ಮ ಜೀವನ ನಡೆಸುತ್ತಿದ್ದಾರೆ. ಸಣ್ಣಪುಟ್ಟ ಘಟನೆಗಳಿಗೆ ಸಂತೆ ಬಂದ್ ಮಾಡಿದ್ದು ಬಡ ಜನರಿಗೆ, ಬಡ ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಗುತ್ತದೆ
. ಸಯ್ಯದ ಬೇಪಾರಿ, ಕರವೇ ತಾಲೂಕು ಸಂಘಟನೆ ಕಾರ್ಯದಶಿ
ಸಾರ್ವಜನಿಕರ ರಕ್ಷಣೆ ನಮ್ಮ ಕೆಲಸ. ಡಿ.28ರಂದು ಒಂದು ದಿನ ಮಾತ್ರ ಜಾನುವಾರು ಸಂತೆ ಬಂದ್ ಮಾಡಲಾಗಿದೆ. ಕಳೆದ ಶನಿವಾರ ನಡೆದ ಘಟನೆಯಿಂದ ಸಮಸ್ಯೆಯಾಗಬಾರದು. ಜನರ ರಕ್ಷಣೆ ನಮ್ಮ ಕರ್ತವ್ಯ. ಆದ್ದರಿಂದ ಸಂತೆ ಬಂದ್ ಮಾಡಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದು ಎಂಬ ಉದ್ದೇಶದಿಂದ ಒಂದು ದಿನ ಸಂತೆ ಬಂದ್ ಮಾಡಲಾಗಿದೆ.
–ಡಾ| ಲಕ್ಷ್ಮಿಕಾಂತ ಬಾನಿಕೋಲ ಪಿಎಸೈ ಅಮೀನಗಡ
-ಎಚ್.ಎಚ್. ಬೇಪಾರಿ