Advertisement

ನಿಟ್ಟುಸಿರು ಬಿಟ್ಟ ಐಹೊಳೆ ಜನ

12:37 PM Aug 12, 2019 | Naveen |

ಅಮೀನಗಡ: ಭಾರತೀಯ ದೇವಾಲಯಗಳ ವಾಸ್ತು ಶಿಲ್ಪದ ತವರು ಎಂದೇ ಖ್ಯಾತಿ ಪಡೆದಿರುವ ಐಹೊಳೆ ಗ್ರಾಮದಲ್ಲಿ ಮಲಪ್ರಭಾ ನದಿಯ ಅಬ್ಬರದ ಪ್ರವಾಹ ನೀರು ಇಳಿಕೆಯಾದ ಹಿನ್ನೆಲೆಯಲ್ಲಿ ಸದ್ಯ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

Advertisement

ಹೌದು, ಕಲಾ ಇತಿಹಾಸದಲ್ಲಿ ದೇವಾಲಯ ವಾಸ್ತು ಶೈಲಿಗಳ ತೊಟ್ಟಿಲು, ಪ್ರಯೋಗಾಲಯ ಎಂದೇ ಹೆಸರುವಾಸಿಯಾಗಿರುವ, ಚಾಲುಕ್ಯರ ಕಾಲದ ಪ್ರಮುಖ ನಗರ, ಸುಮಾರ 125ಕ್ಕೂ ಹೆಚ್ಚು ದೇಗುಲಗಳನ್ನು ಹೊಂದಿರುವ ಐತಿಹಾಸಿಕ ಹಿನ್ನೆಲೆಯುಳ್ಳ ಐಹೊಳೆ ಗ್ರಾಮಕ್ಕೂ ಪ್ರಕೃತಿಯ ಮುನಿಸು ಮಲಪ್ರಭಾ ನದಿಯ ಪ್ರವಾಹದಿಂದ ಗ್ರಾಮದ ಮಾರುತೇಶ್ವರ ದೇವಾಲಯ, ಅಳ್ಳಿ ಬಸಪ್ಪ ದೇವಾಲಯ, ಹುಚ್ಚಪ್ಪಯ್ಯ ದೇವಾಲಯ, ರಾಚಿ ಗುಡಿ, ಚಕ್ರ ಗುಡಿ, ಬಡಿಗೇರ ಗುಡಿ, ಸೂರ್ಯ ದೇವಾಲಯ, ಕೊರವರ(ವೆನಿಯರ್‌) ದೇವಾಲಗಳು ಜಲಾವೃತಗೊಂಡರೆ, ಇನ್ನು ಕೆಲವು ದೇವಾಲಯಗಳು ನೀರಿನಲ್ಲಿ ಮುಳುಗಿವೆ ಮತ್ತು ಗ್ರಾಮದ 40ಕ್ಕೂ ಹೆಚ್ಚು ಮನೆಗಳು ನೀರಿನಿಂದ ಜಲಾವೃತಗೊಂಡಿವೆ. ಇದರಿಂದ ಗ್ರಾಮದ ಜನ ಹಾಗೂ ಪ್ರವಾಸಿಗರು ಅಕ್ಷರಶ: ದೀಘಭ್ರಮೆಗೊಂಡಿದ್ದಾರೆ.

ನವೀಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ಬಂದ ರಭಸವಾದ ನೀರಿನಿಂದ ಉಂಟಾದ ಪ್ರವಾಹಕ್ಕೆ ಜಲಾವೃತಗೊಂಡಿದ್ದ ಐತಿಹಾಸಿಕ ಐಹೊಳೆ ಗ್ರಾಮದ ಚಾಲುಕ್ಯರ ಕಾಲದ ಕೆಲ ದೇವಾಲಗಳು ಪ್ರವಾಹದ ನೀರು ಹೋದ ಮೇಲೆ ಸದ್ಯ ನಿರಾಳವಾಗಿದೆ. ಜಲಾವೃತಗೊಂಡ ದೇವಾಲಯಗಳ ಸುತ್ತಲಿನ ಪ್ರದೇಶ ಪ್ಲಾಸ್ಟಿಕ್‌ ತ್ಯಾಜ್ಯಗಳು, ಕಸದ ರಾಶಿಯಿಂದ ಗಬ್ಬೆದ್ದು ನಾರುತ್ತಿದೆ ಕಸದ ರಾಶಿಗಳು, ಕೊಳಚೆ ನೀರು ಸುತ್ತಿಕೊಂಡಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಅದನ್ನು ಸ್ವಚ್ಚಗೊಳಿಸಲು ಪ್ರಾಚ್ಯ ಇಲಾಖೆ ಮುಂದಾಗಬೇಕಾಗಿದೆ. ಸ್ಮಾರಕದ ಪಕ್ಕ ಸುಮಾರು 40-50 ವರ್ಷಗಳ ಇತಿಹಾಸವಿರುವ ಬೃಹತ್‌ ಮರ ಬಿದ್ದಿದ್ದು, ಅದರಿಂದ ತೊಂದರೆಯಾಗುವ ಮುನ್ನವೇ ಅದನ್ನು ತೆರವುಗೊಳಿಸಬೇಕು. ಸ್ಮಾರಕಗಳ ಸುತ್ತವಿರುವ ಕಸದ ರಾಶಿ, ಕೊಳಚೆ ನೀರು ಅಶುಚಿತ್ವ ತಾಂಡವಾಡುತ್ತಿದೆ. ಇದು ಸ್ಮಾರಕಗಳ ಪರಿಸ್ಥಿತಿಯಾದರೆ.

ಇತ್ತ ಗ್ರಾಮದಲ್ಲಿ ಕೂಡಾ ಮಲಪ್ರಭಾ ನದಿಯ ನೀರಿನ ಪ್ರವಾಹದಿಂದ ಸುಮಾರು 40ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, ಸುಮಾರು 7-8 ಮನೆಗಳು ಕುಸಿದಿವೆ. 25 ಕುಟುಂಬಗಳ ಮನೆಗೆ ನೀರು ಬರಬಹುದು ಎಂಬ ಭಯದಿಂದಾಗಿ ಸ್ಥಳಾಂತರಗೊಂಡಿದ್ದಾರೆ. ಒಟ್ಟಾರೆ ಸುಮಾರು 500 ಜನ ಸ್ಥಳಾಂತರಗೊಂಡಿದ್ದಾರೆ. ಎರಡು ದಿನಗಳ ಕಾಲ ನೀರಿನ ಪ್ರಮಾಣ ಕಡಿಮೆಯಾದ ಪರಿಣಾಮ ಇಲ್ಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಮತ್ತೆ ನೀರು ಬರಬಹುದು ಎಂಬ ಭಯ ಮಾತ್ರ ಅವರನ್ನು ಕಾಡುತ್ತಿದೆ. ಕೆಲವರು ಮನೆಯಲ್ಲಿರುವ ದವಸ ಧಾನ್ಯ ರಕ್ಷಣೆಗೆ ಮುಂದಾಗಿದ್ದಾರೆ. ಗ್ರಾಮದಲ್ಲಿ ಕೊಳಚೆ ನೀರು ತುಂಬಿದ್ದರಿಂದ ಸದ್ಯ ಸಂತ್ರಸ್ತರಿಗೆ ಮರಳಿ ತಮ್ಮ ಮನೆಗಳಿಗೆ ಕಳುಹಿಸಲು ಅಧಿಕಾರಿಗಳು ಅವಕಾಶ ನೀಡಿಲ್ಲ. ಅದನ್ನು ಸಂಪೂರ್ಣವಾಗಿ ಸ್ವಚ್ಚ ಮಾಡಿದ ನಂತರ ಮರಳಿ ಕಳಿಸಲಾಗುತ್ತದೆ. ಅವರನ್ನು ಪರಿಹಾರ ಕೇಂದ್ರಗಳಲ್ಲಿ ಮೂಲಸೌಕರ್ಯ ಒದಗಿಸಲಾಗಿದೆ. ಒಟ್ಟಾರೆ ಮಲಪ್ರಭಾ ನದಿಯ ಪ್ರವಾಹಕ್ಕೆ ಐಹೋಳೆ ಗ್ರಾಮದ ಐತಿಹಾಸಿಕ ಸ್ಮಾರಕಗಳು ಮತ್ತು ಅಲ್ಲಿನ 40ಕ್ಕೂ ಹೆಚ್ಚು ಮನೆಗಳಿಗೆ ತೊಂದರೆಯಾಗಿದ್ದು ಮಾತ್ರ ವಿಪರ್ಯಾಸ.

ಪ್ರೌಢಶಾಲೆ ಶಿಕ್ಷಕರ ಶ್ರಮ: ಐಹೊಳೆ ಗ್ರಾಮದ ವಿಜಯಮಹಾಂತೇಶ ಪ್ರೌಡಶಾಲೆಯ ಶಿಕ್ಷಕರು ಪ್ರವಾಹದಿಂದ ಸ್ಥಳಾಂತರಗೊಂಡ ಗ್ರಾಮಸ್ಥರಿಗೆ ವಿವಿಧ ಭಾಗದಿಂದ ತಂದು ಕೊಡುವ ಆಹಾರ ಸಾಮಗ್ರಿ ಮತ್ತು ಅಗತ್ಯ ಪರಿಕರಗಳನ್ನು ಪರಶೀಲಿಸಿ ಮತ್ತು ಅದನ್ನು ಸರಿಯಾಗಿ ಪೂರೈಕೆ ಮಾಡುವಲ್ಲಿ ಕಳೆದ ನಾಲ್ಕು ದಿನಗಳಿಂದ ತೊಡಗಿಕೊಂಡಿದ್ದು, ಅವರು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next