Advertisement

ಅಮೀನಗಡ: ಅರ್ಧ ಶತಮಾನದ ಬಳಿಕ ಒಂದಾದ ಗೆಳೆಯರು!

05:06 PM Sep 09, 2024 | Team Udayavani |

ಉದಯವಾಣಿ ಸಮಾಚಾರ
ಅಮೀನಗಡ: ಪಟ್ಟಣದ ಬನ್ನಿ ಮಹಾಂಕಾಳಿ ದೇವಸ್ಥಾನದ ಆವರಣದಲ್ಲಿ ಅರ್ಧ ಶತಮಾನದ ಬಳಿಕ ಒಂದಾದ ಗೆಳೆಯರು !
ಹೌದು, ಬರೋಬ್ಬರಿ 52 ವರ್ಷಗಳ ಬಳಿಕ ಒಂದೇ ಶಾಲೆಯಲ್ಲಿ ಅಧ್ಯಯನ ಮಾಡಿದ್ದ 50 ಕ್ಕೂ ಹೆಚ್ಚು ಗೆಳೆಯರು ಒಟ್ಟಾಗಿ ಸೇರಿ
ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಅರ್ಥ ಪೂರ್ಣವಾಗಿ ಆಚರಿಸಿದರು.

Advertisement

ಪಟ್ಟಣದ ಸಂಗಮೇಶ್ವರ ಮಾಧ್ಯಮಿಕ ಶಾಲೆಯಲ್ಲಿ 1972ರಲ್ಲಿ ಎಸ್ಸೆಸ್ಸೆಲ್ಸಿ ಅಧ್ಯಯನ ಮಾಡಿದ್ದ, ಸುಮಾರು 70 ವರ್ಷ ವಯಸ್ಸಿನ ಹಳೆಯ ಹಿರಿಯ ವಿದ್ಯಾರ್ಥಿಗಳು ತಮಗೆ ಕಲಿಸಿದ ಗುರುಗಳನ್ನು ಕರೆಯಿಸಿ ಅವರಿಗೆ ಗುರುವಂದನೆ ಸಮರ್ಪಿಸಿದ ಕ್ಷಣ
ಅವಿಸ್ಮರಣೀಯವಾಗಿತ್ತು.

ಸಂಗಮೇಶ್ವರ ವಿದ್ಯಾವರ್ಧಕ ಸಂಸ್ಥೆಯ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದು ವಿವಿಧ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುವಷ್ಟು
ಸಾಧನೆ ಮಾಡಿದ ಹಳೆಯ ಗೆಳೆಯರು ಒಂದೆಡೆ ಸೇರಿ ತಮ್ಮ ವಿದ್ಯಾರ್ಥಿ ಜೀವನದ ಸುವರ್ಣ ಕಾಲದ ನೆನಪುಗಳನ್ನು ಮೆಲುಕು
ಹಾಕಿ ಖುಷಿಪಟ್ಟರು.

ಕಾರ್ಯಕ್ರಮದಲ್ಲಿ ಹಿರಿಯ ಲೇಖಕಿ ಲಲಿತಾ ಹೊಸಪ್ಯಾಟಿ ಮಾತನಾಡಿ, ಜಗತ್ತಿನಲ್ಲಿ ಗುರುವಿನ ಸ್ಥಾನ ಅತ್ಯಂತ ಮಹತ್ವದ್ದು,
ಅಂತರಂಗದ ಬಾಗಿಲನ್ನು ತೆರೆದಾಗ ಮಾತ್ರ ಗುರುವಿನ ದರ್ಶನವಾಗುತ್ತದೆ. ಗುರು ಶಿಷ್ಯರ ಸಂಬಂಧ ಶ್ರೇಷ್ಠವಾದದ್ದು ಎಂದರು.

ಸಾಮಾಜಿಕ ಸಂಬಂಧಗಳು ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಗುರುಗಳನ್ನು ಸ್ಮರಿಸಿ, ಅವರನ್ನು ಗೌರವಿಸುವ ಪವಿತ್ರ ಕಾರ್ಯದಿಂದ ಸಮಾಜದಲ್ಲಿ ಸಾಮಾಜಿಕ ಮೌಲ್ಯಗಳು ಉಳಿದು ಬೆಳೆಯುತ್ತಿದ್ದು, ಮುಂದಿನ ಜನಾಂಗಕ್ಕೆ ಒಂದು ಉತ್ತಮ ದಾರಿದೀಪವಾಗಿದೆ ಎಂದರು.

Advertisement

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ ಅಕ್ಷರ ಕಲಿಸಿದ, ಜೀವನಕ್ಕೆ ಒಂದು ಅರ್ಥ ಕಲಿಸಿದ,
ಆತ್ಮವಿಶ್ವಾಸ ತುಂಬಿದ, ಎಲ್ಲರಿಗೂ ಪ್ರೀತಿಯನ್ನು ಹಂಚಿದ, ಸರ್ವತೋಮುಖ ಏಳಿಗೆಗೆ ಶ್ರಮಿಸಿದ ಗುರುಗಳನ್ನು 70 ವರ್ಷದ ಹಿರಿಯ ವಿದ್ಯಾರ್ಥಿಗಳು ಐವತ್ತು ವರ್ಷಗಳ ನಂತರ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಲಿಸಿದ ಗುರುವಿಗೆ
ಶಿಷ್ಯರಿಂದ ಗರಿಮೆ ಬಂದಿದೆ ಎಂದರು.

ಇದೇ ಸಂದರ್ಭದಲ್ಲಿ ಕಲಿಸಿದ ಗುರುಗಳಾದ ನಿವೃತ್ತ ಶಿಕ್ಷಕ ಎಸ್‌.ಎಸ್‌. ಶಿರೋಳ ಹಾಗೂ ಅವರ ಪತ್ನಿಯನ್ನು ಎಲ್ಲ ಹಳೆಯ ವಿದ್ಯಾರ್ಥಿಗಳು ಸನ್ಮಾನ ಮಾಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಖ್ಯಾತ ವೈದ್ಯ ಡಾ| ಎಂ.ಎಸ್‌.ದಡ್ಡೇನವ ರ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು, ಹಳೆಯ ವಿದ್ಯಾರ್ಥಿ ನವದೆಹಲಿಯ ನಿವೃತ್ತ ಮುಖ್ಯ ಚಿಕಿತ್ಸಾ ಧಿಕಾರಿ
ಡಾ| ಕಿರಣ ಅ. ಡಂಬಳಕರ ಹಾಗೂ ಇತರ ಹಳೆ ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು.

ಅರ್ಧ ಶತಮಾನದ ನಂತರ ನಡೆದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಸ್ನೇಹಿತರು ಮತ್ತು ವಿದ್ಯೆ
ಕಲಿಸಿದ ಗುರುಗಳನ್ನು ಕಣ್ತುಂಬಿಕೊಂಡ ವಿದ್ಯಾರ್ಥಿಗಳ ಮೊಗದಲ್ಲಿ ಸಂತಸ ಮನೆ ಮಾಡಿತ್ತು. ಸ್ನೇಹ ಸಮ್ಮಿಲನ ಕಾರ್ಯಕ್ರಮ
ಭಾವ ಸಮ್ಮಿಲನ ಕಾರ್ಯಕ್ರಮವಾಗಿಯೂ ಗಮನೆ ಸೆಳೆಯತು, ಸ್ನೇಹಿತರೊಂದಿಗೆ ವಿಚಾರ ವಿನಿಮಯ, ಹಾಸ್ಯ ಚಟಾಕಿ ಹಾರಿಸುವ ಮೂಲಕ 1972ರ ಬ್ಯಾಚ್‌ನ ಹಿರಿಯ ವಿದ್ಯಾರ್ಥಿಗಳೆಲ್ಲರು ಮತ್ತೊಮ್ಮೆ ಶಾಲಾ ದಿನಗಳತ್ತ ಜಾರಿದರು. ಇಡೀ ದಿನ ಸ್ನೇಹಿತರೊಂದಿಗೆ ಕಾಲ ಕಾಳೆದು, ಹಳೆಯ ನೆನಪುಗಳೊಂದಿಗೆ ಕೊನೆಯಲ್ಲಿ ಬಾಯಿ ಸಿಹಿ ಮಾಡಿಕೊಂಡು ಮಧುರ
ನೆನಪುಗಳೊಂದಿಗೆ ಮನೆಯ ಕಡೆ ಹೆಜ್ಜೆ ಹಾಕಿದರು.

ಇತ್ತೀಚಿನ ದಿನಗಳಲ್ಲಿ ಗುರುಗಳ ಮೇಲಿನ ಗೌರವ ಕಡಿಮೆಯಾಗುತ್ತಿರುವುದು ಖೇದದ ಸಂಗತಿಯಾದರೇ, 70 ವರ್ಷದ ಹಿರಿಯ
ಹಳೆಯ ವಿದ್ಯಾರ್ಥಿಗಳು ಅರ್ಧ ಶತಮಾನದ ಬಳಿಕ ಕಲಿಸಿದ ಗುರುವನ್ನು ನೆನೆದು ಗುರುವಂದನೆಯಂತಹ ಕಾರ್ಯಕ್ರಮ ಮಾಡಿ ಕಲಿಸಿದ ಗುರುವಿಗೆ ಅರ್ಥಪೂರ್ಣವಾಗಿ ಸನ್ಮಾನ ಮಾಡಿ ಗೌರವಿಸಿದ್ದು, ಶಿಕ್ಷಕರ ಗೌರವವನ್ನು ಹೆಚ್ಚಿಸುವಂತೆ ಮಾಡಿದೆ.
ಲಲಿತಾ ಹೊಸಪ್ಯಾಟಿ,
ಹಿರಿಯ ಲೇಖಕಿ

*ಎಚ್‌.ಎಚ್‌.ಬೇಪಾರಿ

Advertisement

Udayavani is now on Telegram. Click here to join our channel and stay updated with the latest news.

Next