ಕುಂದಾಪುರ: ಎಲ್ಲ ಭಾಷೆಗಳಿಗೂ ಅದರದೇ ಆದ ಭಾಷಾ ಸೊಗಡು, ವೈಶಿಷ್ಟ್ಯ ಮತ್ತು ಭೂಮಿಕೆಯಿವೆ. ಪರಸ್ಪರ ಭಾಷೆಗಳ ಮಧ್ಯೆ ಭಾವ – ಭೇದಗಳಿಲ್ಲ. ಹಿಂದಿ ಭಾರತದ ಎಲ್ಲ ಪ್ರದೇಶಗಳಲ್ಲಿ ಮಾತನಾಡುವ ಜನಮಾನಸದ ಏಕೈಕ ಭಾಷೆ. ಅನೇಕ ರಾಜ್ಯಗಳಲ್ಲಿ ರಾಜ ಭಾಷೆಯಾಗಿ, ಕೆಲ ರಾಜ್ಯಗಳಲ್ಲಿ ಸಂಪರ್ಕ ಭಾಷೆಯಾಗಿ ಬಳಸಲಾಗುತ್ತಿದೆ ಎಂದು ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ| ಸುಕನ್ಯಾ ಮೇರಿ ಜೆ. ಹೇಳಿದರು.
ಇಲ್ಲಿನ ಭಂಡಾರ್‌ಕಾರ್ ಕಾಲೇಜಿನಲ್ಲಿ ನಡೆದ ಹಿಂದಿ ದಿವಸ್- ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿಶ್ವದ ಐದು ಸರ್ವೇ ಸಾಮಾನ್ಯ ಪ್ರಸಿದ್ಧ ಭಾಷೆಗಳಲ್ಲಿ ಹಿಂದಿಯೂ ಒಂದು. ಭಾರತ ಮತ್ತು ವಿಶ್ವದ ಜನರನ್ನು ಒಂದು ಆವರಣದಲ್ಲಿ ಸೇರಿಸುವ ಕಾರ್ಯವಾಹಿನಿಗೆ ಹಿಂದಿ ಮಾಧ್ಯಮವಾಗಿದ್ದು, ನಮ್ಮ ರಾಷ್ಟ್ರ ಭಾಷೆಯ ಬಗ್ಗೆ ಕೀಳರಿಮೆ ಪಡುವ ಬದಲು ಹೆಮ್ಮೆ ಪಡೋಣ ಎಂದರು.
ಪ್ರಾಂಶುಪಾಲ ಡಾ| ಎನ್.ಪಿ. ನಾರಾಯಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನಲ್ಲಿ ನಡೆದ ಹಿಂದಿ ದಿವಸ್- ಜ್ಯೋತ್ಸಾ ಪ್ರಯುಕ್ತ ನಡೆದ ಹಿಂದಿ ಭಾಷಣ, ಬೀದಿನಾಟಕ, ಪ್ರಬಂಧ, ದೇಶಭಕ್ತಿ, ಸಮೂಹ ಗಾಯನ, ಮತ್ತು ಹನುಮಾಣ್ ಚಾಲೀಸಾ ಕಂಠಪಾಠ ಸ್ಪರ್ಧೆ ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಹಿಂದಿ ವಿಭಾಗದ ಮುಖ್ಯಸ್ಥೆ ಪ್ರೊ| ಪ್ರಫುಲ್ಲಾ ಬಿ. ಸ್ವಾಗತಿಸಿದರು. ಹಿಂದಿ ಉಪನ್ಯಾಸಕಿ ಅಶ್ವಿನಿ ಪೂಜಾರಿ ವರದಿ ವಾಚಿಸಿದರು. ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ| ಜಿ. ಎಂ. ಗೊಂಡ ವಂದಿಸಿದರು.