ಲಕ್ನೋ: ಕರ್ತವ್ಯಕ್ಕೆ ಹಾಜರಾಗಬೇಕೆಂಬ ಹಿರಿಯ ಅಧಿಕಾರಿ ಸೂಚನೆ ಹಿನ್ನೆಲೆಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಉತ್ತರಪ್ರದೇಶದಿಂದ 450 ಕಿಲೋ ಮೀಟರ್ ದೂರದಲ್ಲಿರುವ ಮಧ್ಯಪ್ರದೇಶದ ರಾಜ್ ಗಢ್ ಗೆ ಬಂದು ತಲುಪಿರುವ ಘಟನೆಯೊಂದು ವರದಿಯಾಗಿದೆ.
ಕೋವಿಡ್ 19 ಸೋಂಕು ಹರಡುವ ಭೀತಿಯಿಂದ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿತ್ತು. 22 ವರ್ಷದ ದಿಗ್ವಿಜಯ್ ಶರ್ಮಾ ಎಂಬ ಪೊಲೀಸ್ ಕಾನ್ಸ್ ಟೇಬಲ್ ಉತ್ತರಪ್ರದೇಶದಲ್ಲಿರುವ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಪಾಚೋರ್ ಪೊಲೀಸ್
ಠಾಣಾ ಇನ್ಸ್ ಪೆಕ್ಟರ್ ಗೆ ಕರೆ ಮಾಡಿದಾಗ,ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸೂಚಿಸಿದ್ದರಂತೆ. ಅಲ್ಲದೇ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲ ಎಂದು ಕೂಡಾ ಸಲಹೆ ನೀಡಿದ್ದರು.
ನಂತರ ಉತ್ತರಪ್ರದೇಶದಿಂದ ಸತತವಾಗಿ 96ಗಂಟೆಗಳ ಕಾಲ ಕಾಲ್ನಡಿಗೆಯಲ್ಲಿ ಹೊರಟಿದ್ದು, ಕೈಕಾಲು ನೋಯುತ್ತಿದ್ದರೂ ಕೂಡಾ ಕರ್ತವ್ಯಕ್ಕೆ ಹಾಜರಾಗಲೇಬೇಕೆಂದು ಹಠ ತೊಟ್ಟು ಠಾಣೆ ತಲುಪಿರುವುದಾಗಿ ಪಿಟಿಐ ಜತೆ ಮಾತನಾಡುತ್ತಿ ತಿಳಿಸಿದ್ದಾರೆ.
ಪ್ರಯಾಣದ ವಿವರ ಹಂಚಿಕೊಂಡಿರುವ ಶರ್ಮಾ, ಮಾರ್ಚ್ 25ರಂದು ಇಟಾವ ನಗರದಿಂದ ಕಾಲ್ನಡಿಗೆಯಲ್ಲಿ ಹೊರಟಿದ್ದು, ಕೆಲವೆಡೆ ಮೋಟಾರ್ ಬೈಕ್ ನಲ್ಲಿ ಮಧ್ಯ ಡ್ರಾಪ್ ಕೊಟ್ಟಿದ್ದರು. ಶನಿವಾರ ಮಧ್ಯಪ್ರದೇಶದ ರಾಜ್ ಗಢ್ ತಲುಪಿರುವುದಾಗಿ ತಿಳಿಸಿದ್ದಾರೆ.
ದಾರಿಯಲ್ಲಿ ನಡೆದು ಬರುವಾಗ ಒಂದು ದಿನ ತಿನ್ನಲು ಏನೂ ಸಿಗಲಿಲ್ಲವಂತೆ, ನಂತರ ಕೆಲವು ಸಾಮಾಜಿಕ ಸಂಘಟನೆಗಳು ತಿನ್ನಲು ಆಹಾರ ಕೊಟ್ಟಿರುವುದಾಗಿ ಶರ್ಮಾ ಪಿಟಿಐಗೆ ತಿಳಿಸಿದ್ದಾರೆ. ನನ್ನ ಕಾಲಿನ ಪಾದದಲ್ಲಿ ಬೊಬ್ಬೆ ಎದ್ದಿದ್ದವು, ಇದರಿಂದಾಗಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಠಾಣಾಧಿಕಾರಿ ಸೂಚಿಸಿದ್ದರು, ನಾನು ಕೂಡಲೇ ಕರ್ತವ್ಯಕ್ಕೆ ಹಾಜರಾಗಲಿದ್ದೇನೆ ಎಂದು ತಿಳಿಸಿದ್ದಾರೆ. ಶರ್ಮಾ 2018ರಲ್ಲಿ ಮಧ್ಯಪ್ರದೇಶದಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದರು.