ಆಗ್ರಾ: ಐತಿಹಾಸಿಕ ಸ್ಮಾರಕದ ಸ್ಥಿತಿಗತಿಯ ಕುರಿತಾಗಿ ವ್ಯಾಪಕ ಚರ್ಚೆ ನಡೆಯುತ್ತಿರುವ ವೇಳೆಯಲ್ಲೇ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗುರುವಾರ ತಾಜ್‌ಮಹಲ್‌ಗೆ ಭೇಟಿ ನೀಡುತ್ತಿದ್ದಾರೆ.
ಆದಿತ್ಯನಾಥ್ ಅವರು ತಾಜ್‌ಮಹಲ್ ಪ್ರವೇಶಿಸಿದ ಉತ್ತರಪ್ರದೇಶದ ಪ್ರಥಮ ಬಿಜೆಪಿ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ.
ತಾಜ್ ಭೇಟಿ ವೇಳೆ ಸಿಎಂ ಯೋಗಿ ಅವರು ಸೌಧದ ಒಳಗಿನ ಎಲ್ಲಾ ಪ್ರದೇಶಗಳನ್ನು ವೀಕ್ಷಿಸಲಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವನೀಶ್ ಅವಸ್ಥಿ ತಿಳಿಸಿದ್ದಾರೆ.
ಸಿಎಂ ಭೇಟಿಗೂ ಮುನ್ನ ತಾಜ್ ಸುತ್ತಲೂ ನೂರಾರು ಬಿಜೆಪಿ ಕಾರ್ಯಕರ್ತರು ಮತ್ತು ಸಮಾಜ ಸೇವಕರು ಸ್ವಚ್ಛತಾ ಆಂದೋಲನ ನಡೆಸುತ್ತಿದ್ದಾರೆ. ಆಗ್ರಾದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಯೋಗಿ ಚಾಲನೆ ನೀಡಲಿದ್ದಾರೆ. ಆಗ್ರಾದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಬರೋಬ್ಬರಿ 370 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದಾರೆ.
ಪ್ರೇಮ ಸ್ಮಾರಕವಾಗಿರುವ 17ನೇ ಶತಮಾನದ ವಿಶ್ವ ಪ್ರಸಿದ್ಧ ಮೊಘಲ್ ಕಾಲದ ತಾಜ್ ಮಹಲ್, ಶಿವ ದೇವಾಲಯಗಿತ್ತು ಎಂದು ಸಾಬೀತು ಪಡಿಸುವುದಕ್ಕೆ ಯಾವುದೇ ದೃಢವಾದ ಸಾಕ್ಷ್ಯಾಧಾರಗಳು ಇಲ್ಲವೆಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿತ್ತು.
1983ರಲ್ಲಿ ಯುನೆಸ್ಕೋ ತಾಜ್‌ಮಹಲ್ ವಿಶ್ವ ಪಾರಂಪರಿಕ ತಾಣವೆಂದು ಮಾನ್ಯತೆ ನೀಡಿತ್ತು. ವಾರ್ಷಿಕ 30 ಲಕ್ಷ ಪ್ರವಾಸಿಗರನ್ನು ಹರಿದುಬರುತ್ತಿದ್ದ ಹೊರತಾಗಿಯೂ ಯೋಗಿ ಸರಕಾರ ಸಾಂಸ್ಕೃತಿಕ ಪರಂಪರೆಯ ಕೇಂದ್ರಗಳ ಪಟ್ಟಿಯಿಂದ ತಾಜ್‌ಮಹಲನ್ನು ಕೈಬಿಟ್ಟಿರುವುದು ಭಾರೀ ವಿವಾದ ಎಬ್ಬಿಸಿತ್ತು.