Advertisement

ಮೊಬೈಲ್‌ ಚಂದಾದಾರರು; ಜಿಯೋ-ಏರ್‌ಟೆಲ್‌ ನಡುವೆ ಸ್ಪರ್ಧೆ

12:07 AM Sep 29, 2022 | Team Udayavani |

ತಂತ್ರಜ್ಞಾನ ಕ್ಷಿಪ್ರಗತಿಯಲ್ಲಿ ದಾಪುಗಾಲಿಡುತ್ತಿರುವಂತೆಯೇ ಟೆಲಿಕಾಂ ಕ್ಷೇತ್ರದಲ್ಲೂ ಮಹತ್ತರ ಬದಲಾವಣೆಗಳಾಗುತ್ತಿವೆ. ವರ್ಷಗಳ ಹಿಂದೆ ಅಂತರ್ಜಾಲದ ಸಂಪರ್ಕ ಜನಸಾಮಾನ್ಯರ ಪಾಲಿಗಂತೂ ಕನಸಿನ ಮಾತಾಗಿತ್ತು. ಇದೀಗ ಎಲ್ಲರ ಕೈಯಲ್ಲೂ ಸ್ಮಾರ್ಟ್‌ ಫೋನ್‌ಗಳು ರಾರಾಜಿಸುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಸದ್ಯ ದೇಶದೆಲ್ಲೆಡೆ 4ಜಿ ಬಳಕೆ ವ್ಯಾಪಕವಾಗಿದ್ದು ಮುಂದಿನ ಮಾಸಾಂತ್ಯಕ್ಕೆ ದೇಶದ ಆಯ್ದ ನಗರಗಳಲ್ಲಿ 5ಜಿ ಸೇವೆ ಆರಂಭಿಸಲು ಕೆಲವು ಟೆಲಿಕಾಂ ಕಂಪೆನಿಗಳು ಭರದ ಸಿದ್ಧತೆಯಲ್ಲಿ ತೊಡಗಿವೆ.

Advertisement

ಈ ಭರಾಟೆಯ ನಡುವೆಯೇ ಟೆಲಿಕಾಂ ಕ್ಷೇತ್ರದಲ್ಲಿ ದಿಗ್ಗಜ ಕಂಪೆನಿಗಳ ನಡುವೆ ಭಾರೀ ಪೈಪೋಟಿ ನಡೆಯುತ್ತಿದ್ದು ದೇಶದ ಟೆಲಿಕಾಂ ವಲಯದ ಮೇಲೆ ಅಧಿಪತ್ಯ ಸ್ಥಾಪಿಸಲು ಜಿದ್ದಾಜಿದ್ದಿಗಿಳಿದಿವೆ. ಸದ್ಯ ದೇಶದಲ್ಲಿ ಜಿಯೋ ಮತ್ತು ಏರ್‌ಟೆಲ್‌ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದ್ದು ರಿಲಯನ್ಸ್‌ ಜಿಯೋ ಪ್ರಾಬಲ್ಯ ಮೆರೆದಿದೆ.

ಟ್ರಾಯ್‌ ವರದಿ
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ…) ಪ್ರಕಾರ, ಜುಲೈಯಲ್ಲಿ ಜಿಯೋ ತನ್ನ ನೆಟ್‌ವರ್ಕ್‌ಗೆ 29.4 ಲಕ್ಷ ಹೊಸ ಬಳಕೆದಾರರನ್ನು ಸೇರ್ಪಡೆಗೊಳಿಸಿದೆ.

ಇದರೊಂದಿಗೆ ಜಿಯೋ ನೆಟ್‌ವರ್ಕ್‌ ಬಳಕೆದಾರರ ಸಂಖ್ಯೆ 41.59 ಕೋಟಿಗೆ ಏರಿಕೆಯಾಗಿದೆ.

ಇದೇ ವೇಳೆ ಏರ್‌ಟೆಲ್‌ 5.1 ಲಕ್ಷ ಹೊಸ ಬಳಕೆದಾರರನ್ನು ಸೇರ್ಪಡೆ ಗೊಳಿಸಿದ್ದು ಈಗ ಇದರ ಒಟ್ಟಾರೆ ಚಂದಾದಾರರ ಸಂಖ್ಯೆ 36.34 ಕೋಟಿಗೆ ಏರಿದೆ. ಅದೇ ಸಮಯದಲ್ಲಿ, ವೊಡಾಫೋನ್‌ ಐಡಿಯಾದ ಬಳಕೆದಾರರ ಸಂಖ್ಯೆ ನಿರಂತರವಾಗಿ ಕಡಿಮೆಯಾಗುತ್ತಿದೆ. ಜುಲೈಯಲ್ಲಿ 15.4 ಲಕ್ಷ ಬಳಕೆದಾರರು ವೊಡಾಫೋನ್‌-ಐಡಿಯಾ ಕಂಪೆನಿಗೆ ಗುಡ್‌ಬೈ ಹೇಳಿದ್ದಾರೆ. ಇದರೊಂದಿಗೆ ಕಂಪೆನಿಯ ಒಟ್ಟು ಚಂದಾದಾರರ ಸಂಖ್ಯೆ 25.51 ಕೋಟಿಗೆ ಇಳಿಕೆಯಾಗಿದೆ.

Advertisement

114.8 ಕೋಟಿ ಬಳಕೆದಾರರು
ವರದಿಗಳ ಪ್ರಕಾರ, ಜುಲೈ ತಿಂಗಳಲ್ಲಿ ದೇಶದಲ್ಲಿ ಮೊಬೈಲ್‌ ಫೋನ್‌ ಬಳಕೆದಾರರ ಸಂಖ್ಯೆ ಶೇ. 0.06ರಷ್ಟು ಹೆಚ್ಚಾಗಿದೆ. ಪ್ರಸ್ತುತ ದೇಶದಲ್ಲಿ ಸುಮಾರು 114.8 ಕೋಟಿ ಮೊಬೈಲ್‌ ಫೋನ್‌ ಬಳಕೆದಾರರಿದ್ದಾರೆ. ಜೂನ್‌ನಲ್ಲಿ ಇದು 114.7 ಕೋಟಿ ಆಗಿತ್ತು.

ಗ್ರಾಮೀಣ ಭಾಗದಲ್ಲಿ ಇಳಿಕೆ
ನಗರ ಪ್ರದೇಶದಲ್ಲಿ ಮೊಬೈಲ್‌ ಫೋನ್‌ ಬಳಕೆದಾರರ ಸಂಖ್ಯೆ ಹೆಚ್ಚಿದ್ದರೆ, ಗ್ರಾಮೀಣ ಭಾಗದಲ್ಲಿ ಮೊಬೈಲ್‌ ಫೋನ್‌ ಬಳಕೆದಾರರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದೆ. ಜೂನ್‌ಗೆ ಹೋಲಿಸಿದರೆ, ನಗರ ಪ್ರದೇಶಗಳಲ್ಲಿ ಬಳಕೆದಾರರ ಸಂಖ್ಯೆ 6.49 ಕೋಟಿಯಿಂದ 6.50ಕೋಟಿಗೆ ಏರಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಬಳಕೆದಾರರ ಸಂಖ್ಯೆ 5.24ಕೋಟಿಯಿಂದ 5.23ಕೋಟಿಗೆ ಇಳಿದಿದೆ.

ಅಕ್ಟೋಬರ್‌ನಲ್ಲಿ 5ಜಿ
ಮುಂದಿನ ತಿಂಗಳ ಆರಂಭದಿಂದ 5ಜಿ ಸೇವೆಯನ್ನು ಪ್ರಾರಂಭಿಸುವುದಾಗಿ ರಿಲಯನ್ಸ್‌ ತಿಳಿಸಿದೆ. ಇದೇ ವೇಳೆ ಏರ್‌ಟೆಲ್‌ ಕೂಡ ಅಕ್ಟೋಬರ್‌ನಲ್ಲಿ 5ಜಿ ಸೇವೆಯನ್ನು ಪ್ರಾರಂಭಿಸಲು ಚಿಂತನೆ ನಡೆಸಿದೆ.

ಕಂಪೆನಿ-ಗ್ರಾಹಕರು
– ಜಿಯೋ- 41. 59 ಕೋಟಿ
– ಏರ್‌ಟೆಲ್‌-36.34 ಕೋಟಿ
– ಐಡಿಯಾ-25.51 ಕೋಟಿ

ಮುನ್ನಡೆ ಕಾಯ್ದುಕೊಂಡ ಜಿಯೋ
– ಟೆಲಿಕಾಂ ಮಾರುಕಟ್ಟೆಯಲ್ಲಿ ರಿಲಯನ್ಸ್‌ ಜಿಯೋ ಮಾರುಕಟ್ಟೆ ಪಾಲು ಶೇ.36 ರಿಂದ ಶೇ.36.23ಕ್ಕೆ ಏರಿಕೆಯಾಗಿದೆ.
-ಭಾರ್ತಿ ಏರ್‌ಟೆಲ್‌ನ ಮಾರುಕಟ್ಟೆ ಪಾಲು ಶೇ.31.63 ರಿಂದ ಶೇ.31.66 ಕ್ಕೆ ಏರಿದೆ.
– ವೊಡಾಫೋನ್‌-ಐಡಿಯಾ ಪಾಲು ಶೇ.22.37 ರಿಂದ ಶೇ.22.22 ಕ್ಕೆ ಇಳಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next