ನವದೆಹಲಿ: “ಪ್ರತಿಯೊಂದು ವಿಷಯಕ್ಕೂ ಟ್ವೀಟ್ ಮಾಡುವ ಪ್ರಧಾನಿ ಮೋದಿ ಅವರು, ಅಮೆರಿಕದಲ್ಲಿ ಭಾರತೀಯರ ಮೇಲೆ ಜನಾಂಗೀಯ ಹಲ್ಲೆಗಳು, ಹತ್ಯೆಗಳು ನಡೆಯುತ್ತಿರುವುದರ ಬಗ್ಗೆ ಮೌನ ವಹಿಸಿರುವುದೇಕೆ?’
ಅಮೆರಿಕದಲ್ಲಿನ ಇತ್ತೀಚೆಗಿನ ಬೆಳವಣಿಗೆ ಕುರಿತು ಪ್ರಧಾನಿ ಮೋದಿಯನ್ನು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತರಾಟೆಗೆ ತೆಗೆದುಕೊಂಡಿದ್ದು ಹೀಗೆ. ಗುರುವಾರ ಲೋಕಸಭೆಯಲ್ಲಿ ಮಾತನಾಡಿದ ಖರ್ಗೆ, “ಭಾರತೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಪ್ರತಿಕ್ರಿಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಅಲ್ಲಿ ನಡೆಯುತ್ತಿರುವ ಜನಾಂಗೀಯ ದ್ವೇಷದ ಪ್ರಕರಣಗಳನ್ನು ಮೋದಿ ಅವರು ಖಂಡಿಸಿಯೂ ಇಲ್ಲ, ಅಮೆರಿಕ ಸರ್ಕಾರದೊಂದಿಗೆ ಚರ್ಚಿಸಿಯೂ ಇಲ್ಲ. ಇಂತಹ ಗಂಭೀರ ಪ್ರಕರಣಗಳ ಕುರಿತು ಮೋದಿ ಮೌನ ವಹಿಸಿರುವುದೇಕೆ,’ ಎಂದು ಪ್ರಶ್ನಿಸಿದ್ದಾರೆ. ಜತೆಗೆ, ಕೇವಲ ವಿದೇಶಿ ನಾಯಕರನ್ನು ಆಲಿಂಗಿಸಿಕೊಳ್ಳುವ, ಅವರೊಂದಿಗೆ ಉಯ್ನಾಲೆಯಲ್ಲಿ ಕುಳಿತು ಫೋಟೋ ತೆಗೆಸಿಕೊಳ್ಳುವ ಮೋದಿ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲವೇಕೆ ಎಂದೂ ಪ್ರಶ್ನೆ ಹಾಕಿದ್ದಾರೆ ಖರ್ಗೆ.
ಇದೇ ವೇಳೆ, ತೃಣಮೂಲ ಕಾಂಗ್ರೆಸ್‌ನ ಸೌಗತಾ ರಾವ್ ವಿಷಯ ಪ್ರಸ್ತಾಪಿಸಿ, ಕೇಂದ್ರ ಸರ್ಕಾರಕ್ಕೆ ಅಮೆರಿಕದಲ್ಲಿನ ಭಾರತೀಯರ ಹಿತಾಸಕ್ತಿ ಕಾಪಾಡಿಕೊಳ್ಳುವ ಇಚ್ಛಾಶಕ್ತಿ ಇಲ್ಲ ಎಂದು ಆರೋಪಿಸಿದ್ದಾರೆ. ಇದಕ್ಕೆ ಬಿಜೆಡಿ ಸದಸ್ಯರೂ ಧ್ವನಿಗೂಡಿಸಿದ್ದಾರೆ.
ಕೊನೆಗೆ, ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, “ನಾವು ಈ ಎಲ್ಲ ಪ್ರಕರಣಗಳನ್ನೂ ಗಂಭೀರವಾಗಿ ಪರಿಗಣಿಸಿದ್ದೇವೆ. ವಿದೇಶಗಳಲ್ಲಿರುವ ಭಾರತೀಯರು ಸುರಕ್ಷಿತವಾಗಿರುವಂತೆ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತೇವೆ. ಮುಂದಿನ ವಾರ ಸರ್ಕಾರವು ಸಂಸತ್‌ನಲ್ಲಿ ಈ ಕುರಿತು ಹೇಳಿಕೆ ನೀಡಲಿದೆ,’ ಎಂದಿದ್ದಾರೆ.
ಕಲಾಪ ಮುಂದೂಡಿಕೆ: ಇದೇ ವೇಳೆ, ಇತ್ತೀಚೆಗಷ್ಟೇ ನಿಧನರಾದ ರಾಜ್ಯಸಭೆಯ ಹಾಲಿ ಸದಸ್ಯ ಹಾಜಿ ಅಬ್ದುಲ್ ಸಲಾಮ್ ಅವರಿಗೆ ಗೌರವ ಸೂಚಿಸಿ, ರಾಜ್ಯಸಭೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.