Advertisement

ಜಾಗತಿಕ ಸಹಾಯದ ನಡುವೆ ಅಮೆರಿಕದ ವಿಳಂಬ ಮರೆಯುವಂಥದ್ದಲ್ಲ

01:27 AM Apr 27, 2021 | Team Udayavani |

ದೇಶದಲ್ಲಿ ಕೊರೊನಾದ ಎರಡನೇ ಅಲೆ ಸೃಷ್ಟಿಸಿರುವ ಹಾಹಾಕಾರ ದೇಶವಾಸಿಗಳು ಮಾತ್ರವಲ್ಲ, ಅಂತಾರಾಷ್ಟ್ರೀಯ ಸಮುದಾಯವನ್ನೂ ಬೆಚ್ಚಿ ಬೀಳಿಸಿದೆ. ಕಳೆದ ವರ್ಷ ಮೊದಲನೇ ಅಲೆಯ ಸಂದರ್ಭದಲ್ಲಿ ಸಾಕಷ್ಟು ಮುಂಜಾಗರೂಕತೆಗಳನ್ನು ತೆಗೆದುಕೊಂಡಿದ್ದ ದೇಶದಲ್ಲಿ ಎರಡನೇ ಅಲೆ ಏಕೆ ಇಷ್ಟು ತೊಂದರೆ ಉಂಟು ಮಾಡುತ್ತಿದೆ ಎಂಬ ಪ್ರಶ್ನೆ ಎಲ್ಲರದು. ಪ್ರಾಯಃ ವೈರಸ್‌ ರೂಪಾಂತರಗೊಂಡಿದ್ದು, ಹೆಚ್ಚು ವೇಗವಾಗಿ ಹರಡುತ್ತಿರುವುದು ಮುಖ್ಯ ಕಾರಣ ಎನ್ನಬಹುದು.

Advertisement

ಕಳೆದ ವರ್ಷ ಕೊರೊನಾ ಬಾಧಿಸಿದ ಕೂಡಲೇ ಲಾಕ್‌ಡೌನ್‌ ಹೇರಿದ್ದುದರಿಂದ ಹೆಚ್ಚು ಪರಿಣಾಮಕಾರಿಯಾದ ನಿಯಂತ್ರಣ ಸಾಧ್ಯವಾಗಿತ್ತು. ಆದರೆ ಈ ವರ್ಷ ಹೆಚ್ಚು ಆಲೋಚಿಸುವುದಕ್ಕೂ ಸಮಯ ಇಲ್ಲದಂತೆ ಪರಿಸ್ಥಿತಿ ಕೈಮೀರಿ ಬಿಟ್ಟಿದೆ. ಔಷಧ, ಲಸಿಕೆ, ಹಾಸಿಗೆ, ಆಮ್ಲಜನಕ… ಹೀಗೆ ದೇಶ ಎದುರಿಸುತ್ತಿರುವ ಕೊರತೆಯ ಸರಮಾಲೆ ದೀರ್ಘ‌ವಾದದ್ದು. ಈ ಬಿಕ್ಕಟ್ಟಿನ ಪರಿಸ್ಥಿತಿಗೆ ಅನೇಕ ಮಿತ್ರ ದೇಶಗಳು ಸಹಾನುಭೂತಿ ತೋರಿಸಿವೆ. ಮಾತ್ರವಲ್ಲ, ಅಗತ್ಯವಸ್ತುಗಳನ್ನು ಕಳುಹಿಸಿಕೊಟ್ಟು ನೆರವು ನೀಡಿವೆ. ಜಗತ್ತಿನ ಎಲ್ಲೆಡೆ ಯಿಂದ ಭರವಸೆ ಮತ್ತು ನೆರವಿನ ಸಂದೇಶ, ನಡವಳಿಕೆ ಕಂಡುಬಂದಿದೆ.

ರಷ್ಯಾ ಎ. 19ರಂದೇ ರೆಮಿಡಿಸಿವಿರ್‌ ಔಷಧ ಮತ್ತು ಆಮ್ಲಜನಕ ರವಾನಿಸುವುದಾಗಿ ವಾಗ್ಧಾನ ಮಾಡಿತು. ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುವೆಲ್‌ ಮ್ಯಾಕ್ರನ್‌ ಇದೇ ರೀತಿಯ ಭರವಸೆ ನೀಡಿದರು. ಜರ್ಮನಿ, ಯುಎಇ ಮತ್ತು ಸೌದಿ ಅರೇಬಿಯ ಕೂಡ ಇದೇ ಹಾದಿ ತುಳಿದಿವೆ. ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣದಿಂದ ನಾಲ್ಕು ಕ್ರಯೋಜೆನಿಕ್‌ ಆಮ್ಲಜನಕ ಟ್ಯಾಂಕರ್‌ಗಳನ್ನು ಭಾರತೀಯ ವಾಯು ಪಡೆಯ ಸಿ -17 ವಿಮಾನ ಈಗಾಗಲೇ ಹೊತ್ತು ತಂದಿದೆ. ಕಳೆದ ಮೇ ಬಳಿಕ ಲಡಾಖ್‌ನಲ್ಲಿ ವರ್ಷದುದ್ದಕ್ಕೂ ಭಾರತದ ಜತೆಗೆ ಭುಜ ತಿಕ್ಕುತ್ತಲೇ ಬಂದಿರುವ ಚೀನ ಕೂಡ ಸಹಾಯ ಹಸ್ತ ಚಾಚಿದೆ. ಸಾಂಕ್ರಾಮಿಕದ ಕಾಟದಿಂದ ಹೊರಬರಲು ಭಾರತಕ್ಕೆ ನೆರವು ನೀಡುವುದಕ್ಕೆ ನಾವು ಸನ್ನದ್ಧ ರಾಗಿದ್ದೇವೆ ಎಂದು ಎ. 22ರಂದು ಅಲ್ಲಿನ ವಿದೇಶಾಂಗ ಖಾತೆಯ ವಕ್ತಾರ ವಾಂಗ್‌ ವೆನ್‌ಬಿನ್‌ ತಿಳಿಸಿದ್ದರು.

ದೇಶ ತೀವ್ರ ಬಿಕ್ಕಟ್ಟಿನ ಸ್ಥಿತಿಯಲ್ಲಿದೆ, ಕಳೆದ ಕೆಲವು ದಿನಗಳಿಂದ ಪ್ರತೀ ದಿನ ಹೊಸ ಸೋಂಕುಗಳ ಸಂಖ್ಯೆ 3 ಲಕ್ಷ ದಾಟಿದೆ, ವೈದ್ಯಕೀಯ ಆಮ್ಲ ಜನಕ, ಹಾಸಿಗೆಗಳು, ಔಷಧ, ಲಸಿಕೆಯ ತೀವ್ರ ಅಭಾವ ಉಂಟಾಗಿದೆ. ಇವೆಲ್ಲವು ಮತ್ತು ಜಾಗತಿಕ ನೆರವಿನ ಆಶಾಕಿರಣದ ನಡುವೆ ಕಳವಳ ಕಾರಿಯಾಗಿ ಕಾಣಿಸಿರುವುದು ಶ್ವೇತಭವನದ ಸುದೀರ್ಘ‌ ಮೌನ. ಜತೆಗೆ ಲಸಿಕೆ ಉತ್ಪಾದಿಸಲು ಅಗತ್ಯವಾದ ಕಚ್ಚಾ ಸಾಮಗ್ರಿಗಳ ರಫ್ತಿಗೆ ಹೇರಿರುವ ನಿಷೇಧವನ್ನು ಅಮೆರಿಕ ಇನ್ನೂ ಹಿಂದೆಗೆದುಕೊಳ್ಳದೆ ಇರುವುದು. ಅಲ್ಲಿನ ಅನೇಕ ಸಂಸದರು, ನೀತಿನಿರೂಪಕರು, ಉದ್ಯಮಿಗಳು ನೂತನ ಅಧ್ಯಕ್ಷ ಜೋ ಬೈಡೆನ್‌ ಸರಕಾರವನ್ನು ತೀವ್ರವಾಗಿ ಒತ್ತಾಯಿಸಿದ ಬಳಿಕ ವಿದೇ ಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್‌ ಸಹಿತ ಉನ್ನತ ಅಧಿಕಾರಸ್ಥರು ನೆರವು ನೀಡುವ ಮಾತನ್ನಾಡಿದ್ದಾರೆ.
ಕಳೆದ ವರ್ಷ ಎಪ್ರಿಲ್‌ನಲ್ಲಿ ಜಗತ್ತಿನ ವಿವಿಧ ದೇಶಗಳು ಕೊರೊನಾ ದಿಂದ ತತ್ತರಿಸಿದ್ದಾಗ ಭಾರತವು ಅಲ್ಲಿಗೆಲ್ಲ ಔಷಧಗಳನ್ನು ಕಳುಹಿಸಿತ್ತು. ಅಮೆರಿಕ, ಬ್ರಿಟನ್‌, ಜರ್ಮನಿ, ಬ್ರೆಜಿಲ್‌, ಸ್ಪೇನ್‌ ಮೊದಲಾದ ದೇಶ ಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್‌, ಕ್ಲೋರೋ ಕ್ವಿನ್‌ ಮಾತ್ರೆಗಳನ್ನು ಕಳುಹಿಸಿ ಮಾನವೀಯತೆ ಮೆರೆದಿತ್ತು. ಈಗ ಭಾರತವು ಸಮಸ್ಯೆಯಲ್ಲಿರುವಾಗ ಅಮೆರಿಕ ವಿಳಂಬ ಮಾಡಿದ್ದು ಮಾತ್ರ ಒಂದಿನಿತೂ ಸರಿಯಲ್ಲ.

Advertisement

Udayavani is now on Telegram. Click here to join our channel and stay updated with the latest news.

Next