ವಾಷಿಂಗ್ಟನ್: ಮುಂದಿನ ತಿಂಗಳು ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಭಾರತ ಮೂಲದ ಅಮೆರಿಕನ್ನರು ಸಜ್ಜಾಗಿದ್ದು, ದೇಶದ 20 ಪ್ರಮುಖ ನಗರಗಳಲ್ಲಿ “ಭಾರತ ಏಕತಾ ದಿನ” ಮೆರವಣಿಗೆ ನಡೆಸಲು ಯೋಜಿಸಿರುವುದಾಗಿ ತಿಳಿಸಿದ್ದಾರೆ.
ಜೂನ್ 22ರಂದು ಅಧ್ಯಕ್ಷ ಜೋ ಬೈಡೆನ್ ಹಾಗೂ ಫಸ್ಟ್ ಲೇಡಿ ಜಿಲ್ ಬೈಡೆನ್, ಮೋದಿ ಅವರಿಗೆ ವಿಶೇಷ ಔತಣಕೂಟ ಏರ್ಪಡಿಸಿದ್ದಾರೆ. ಬೈಡೆನ್ ಆಹ್ವಾನದ ಮೇರೆಗೆ ಮೋದಿ ಅಮೆರಿಕ ಪ್ರವಾಸ ನಿಗದಿಯಾಗಿದೆ. ಈ ನಡುವೆ ಮೋದಿ ಆಗಮನಕ್ಕೂ ಮುಂಚೆಯೇ ಅಂದರೆ ಜೂನ್ 18ರಂದೇ ವಾಷಿಂಗ್ಟನ್ ಡಿಸಿಯ ರಾಷ್ಟ್ರೀಯ ಸ್ಮಾರಕದಿಂದ ಲಿಂಕನ್ ಸ್ಮಾರಕದವರೆಗೆ ಭಾರತೀಯ ಅಮೆರಿಕನ್ನರು ಮೆರವಣಿಗೆ ನಡೆಸಲಿದ್ದಾರೆ. ಬಾಸ್ಟನ್, ಚಿಕಾಗೋ, ಹ್ಯೂಸ್ಟನ್ ಸೇರಿದಂತೆ ಒಟ್ಟು 20 ನಗರಗಳಲ್ಲಿ ಮೆರವಣಿಗೆ ನಡೆಯಲಿದ್ದು, ಅಮೆರಿಕದಲ್ಲಿರುವ ಭಾರತೀಯರೆಲ್ಲ ಒಟ್ಟುಗೂಡಿ ಪ್ರಧಾನಿ ಮೋದಿ ಅವರಿಗೆ ನೀಡುವ ಈ ಸ್ವಾಗತವನ್ನು ಭಾರತ ಏಕತಾ ದಿನ ಮೆರವಣಿಗೆ ಎಂದು ಗುರುತಿಸಲಾಗುತ್ತದೆ ಎಂದು ಸ್ಥಳೀಯ ಭಾರತೀಯ ಮೂಲದ ನಿವಾಸಿಗಳ ಸಂಘಟನೆ ತಿಳಿಸಿದೆ