Advertisement
ಮೇ ತಿಂಗಳ ಕೊನೆಯ ವಾರದಲ್ಲಿ ಬರುವ ಸ್ಮಾರಕ ದಿನ ಸಾಂಪ್ರದಾಯಿಕವಾಗಿ ಅಮೆರಿಕದಲ್ಲಿ ಬೇಸಗೆಯ ಆರಂಭವನ್ನು ಸಂಕೇತಿಸುತ್ತದೆ. ದೇಶದಲ್ಲಿ ಕೋವಿಡ್-19 ಬಲಿಸಂಖ್ಯೆ 1,00,000ದ ಗಡಿಯನ್ನು ಸಮೀಪಿಸುತ್ತಿದ್ದರೂ ಅನೇಕರು ಯಾವುದೇ ಸುರಕ್ಷಾ ಕ್ರಮಗಳನ್ನು ಅನುಸರಿಸದೆ ಸ್ವತ್ಛಂದವಾಗಿ ತಿರುಗಾಡಿ ಮೋಜು ಮಾಡಿದರು.
Related Articles
ಸಾಮಾಜಿಕ ಅಂತರ ನಿಯಮಗಳು ಜಾರಿಯಲ್ಲಿದ್ದರೂ ಫ್ಲೋರಿಡಾದ ಡೆಟೋನ ಬೀಚ್‌ನಲ್ಲಿ ಮೋಜುಕೂಟ ನಡೆಸುವುದಕ್ಕಾಗಿ ನೂರಾರು ಮಂದಿ ಬ್ರೋಡ್‌ವಾಕ್‌ನಲ್ಲಿ ಸಮಾವೇಶಗೊಂಡಾಗ ಅವರನ್ನು ಚದುರಿಸಲು ಪೊಲೀಸರನ್ನು ಕರೆಸಬೇಕಾಯಿತು.
Advertisement
“ಡಿಸ್ನಿಯನ್ನು ಮುಚ್ಚಲಾಗಿದೆ. ಯೂನಿವರ್ಸಲ್ ಮುಚ್ಚಲ್ಪಟ್ಟಿದೆ. ಎಲ್ಲವೂ ಬಂದ್ ಆಗಿವೆ. ಹೀಗಿರುವಾಗ ಎಲ್ಲರೂ ಬೇಸಗೆ ಪ್ರಥಮ ದಿನ ಎಲ್ಲಿಗೆ ಹೋಗುವುದು? ಹಾಗಾಗಿ ಪ್ರತಿಯೊಬ್ಬರೂ ಇಲ್ಲಿಗೆ ಬಂದಿದ್ದಾರೆ’ ಎಂದು ವೊಲುಸಿಯಾ ಕೌಂಟಿ ಶರೀಫ್ ಮೈಕ್ ಚಿಟ್‌ವುಡ್ ಹೇಳಿದರು.
ಇದೇ ಸಮಯ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾರಾಂತ್ಯ ಮಾಸ್ಕ್ ಧರಿಸದೆ ಗಾಲ್ಫ್ ಆಡಿದ್ದಕ್ಕಾಗಿ ಮತ್ತು ಕೆಲವರ ಕೈಕುಲುಕಿದ್ದಕ್ಕಾಗಿ ವ್ಯಾಪಕ ಟೀಕೆಗೊಳಗಾಗಿದ್ದಾರೆ. ಗಾಲ್ಫ್ ಆಡುವುದನ್ನುಒಪ್ಪಬಹುದಾದರೂ ಆಟಗಾರರು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅಪೇಕ್ಷಣೀಯವಾಗಿತ್ತು ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಹೇಳಿದ್ದಾರೆ.
ಅಮೆರಿಕದ ಎಲ್ಲ 50 ರಾಜ್ಯಗಳು ಕೋವಿಡ್ ನಿರ್ಬಂಧಗಳನ್ನು ಸ್ವಲ್ಪಮಟ್ಟಿಗೆ ಸಡಿಲಿಸಿವೆ. ಇಲಿನಾಯ್ಸ ಮತ್ತು ನ್ಯೂಯಾರ್ಕ್‌ಗಳಂಥ ಕೆಲ ರಾಜ್ಯಗಳಲ್ಲಿ ರೆಸ್ಟಾರೆಂಟ್‌ಗಳು ಹಾಗೂ ಸೆಲೂನ್‌ಗಳು ಈಗಲೂ ಮುಚ್ಚಿವೆ. ದಕ್ಷಿಣದ ಅನೇಕ ರಾಜ್ಯಗಳಲ್ಲಿ ಸಾಮರ್ಥ್ಯದ ಮೇಲೆ ನಿರ್ಬಂಧಗಳೊಂದಿಗೆ ಹೆಚ್ಚಿನ ಉದ್ದಿಮೆಗಳು ತೆರೆದಿವೆ. ಕಳೆದ ವಾರ ಅಲಬಾಮ, ಅರ್ಕನ್ಸಾಸ್, ಮಿನ್ನೆಸೋಟ, ನಾರ್ತ್ ಡಕೋಟ, ನ್ಯೂಹ್ಯಾಂಪ್‌ಶಯರ್, ಮೇರಿಲ್ಯಾಂಡ್, ಮೈನ್, ನೆವಾಡ, ಉಟಾ, ವರ್ಜೀನಿಯ ಮತ್ತು ವಿಸ್ಕೋನ್ಸಿನ್ ಸಹಿತ 11 ರಾಜ್ಯಗಳಲ್ಲಿ ದಾಖಲೆ ಸಂಖ್ಯೆಯ ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ಹೆಚ್ಚಿಗೆ ಪರೀಕ್ಷೆಗಳನ್ನು ನಡೆಸುತ್ತಿರುವುದರಿಂದ ಹೀಗಾಗಿದೆಯೇ ಅಥವಾ ಸೋಂಕಿನ ಎರಡನೆ ಅಲೆ ಉಂಟಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಇದೇ ಸಮಯ ಅಮೆರಿಕದಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆ 16.80 ಲಕ್ಷವನ್ನು ದಾಟಿದೆ ಮತ್ತು ಮೃತರ ಸಂಖ್ಯೆ 1,00,000ದ ಗಡಿಯನ್ನು ಸಮೀಪಿಸುತ್ತಿದೆ. ಕೋವಿಡ್‌ನಿಂದ ಅಮೆರಿಕ ವಿಶ್ವದಲ್ಲೇ ಅತಿಹೆಚ್ಚು ಹಾನಿಗೊಳಗಾದ ರಾಷ್ಟ್ರವಾಗಿದೆ. ಪರಿಸ್ಥಿತಿ ಇಷ್ಟು ಗಂಭೀರವಾಗಿದ್ದರೂ ಜನರು ಕೋವಿಡ್ ಅನ್ನು ಮರೆತು ಭಾರೀ ಸಂಖ್ಯೆಯಲ್ಲಿ ಹೊರಬಂದಿರುವುದು ಅಚ್ಚರಿಗೆ ಕಾರಣವಾಗಿದೆ.ಬ್ರಝಿಲ್ ಸೋಂಕಿತರ ಸಂಖ್ಯೆಯ ದೃಷ್ಟಿಯಿಂದ ಎರಡನೆ ಸ್ಥಾನದಲ್ಲಿದ್ದು ಅಲ್ಲಿ 3.63 ಲಕ್ಷ ಮಂದಿ ಸೋಂಕುಪೀಡಿತರಿದ್ದಾರೆ.