Advertisement

ಕೊರೊನಾ ಸಂಕಷ್ಟಕ್ಕೆ ಸ್ಪಂದಿಸಿದ ಅಮೆರಿಕದ  ಕನ್ನಡ ವೈದ್ಯರು!

10:07 PM Jun 19, 2021 | Team Udayavani |

ಭಾರತದಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆ ಸೃಷ್ಟಿಸಿದ ಸಂಕಷ್ಟಗಳು ಹಲವಾರು. ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಅತಿ ಹೆಚ್ಚಿನ ಪ್ರಕರಣ ಕಂಡುಬಂದಿತು. ಇದರ ಪರಿಣಾಮವಾಗಿ ವೈದ್ಯಕೀಯ ಸೌಲಭ್ಯಗಳೊಂದಿಗೆ ಸಿಬಂದಿ ಕೊರತೆಗಳು ಕಂಡುಬಂದು, ಸೋಂಕಿತರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆಯನ್ನು ನೀಡುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಿತ್ತು.

Advertisement

ಈ ಪರಿಸ್ಥಿತಿಯನ್ನು ಅರಿತ ಅಮೆರಿಕದ  ಬಾಸ್ಟನ್‌ನಲ್ಲಿರುವ ಹೃದಯ ತಜ್ಞರಾದ ಕರ್ನಾಟಕ ಮೂಲದ, ಬೆಂಗಳೂರು ಮೆಡಿಕಲ್‌ ಕಾಲೇಜಿನ ಪದವೀಧರೆ ಡಾ| ವೀಣಾ ಶಂಕರ್‌ ತಮ್ಮ ಸಹಪಾಠಿಗಳಾದ ಬೆಂಗಳೂರಿನ ವೈದ್ಯರಾದ ಡಾ| ಪದ್ಮ. ಎಸ್‌. ಹಾಗೂ ಡಾ| ಸ್ನೇಹ ವಿಕ್ರಮ್‌ ಜತೆ ಕೈಜೋಡಿಸಿ ವೈದ್ಯಕೀಯ ನೆರವನ್ನು ಒದಗಿಸಲು ಕರ್ನಾಟಕ- ಅಮೆರಿಕ ಸ್ವಯಂಸೇವೆಯ ತಂಡವನ್ನು ರಚಿಸಿ ನಿಸ್ವಾರ್ಥ ಸೇವೆಗೆ ಮುಂದಾದರು.

ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ವೈದ್ಯರಿಗೆ ಹಣ ಸಂಗ್ರಹಿಸಿ ಕೊಡುವುದು ಸುಲಭವಾದರೂ ಸದ್ಯದ ಪರಿಸ್ಥಿತಿಯಲ್ಲಿ ತಾಯ್ನಾಡಿಗೆ ತಮ್ಮ ವೈದ್ಯಕೀಯ ವೃತ್ತಿಯ ಅನುಭವದ ಪಾಲನ್ನು ಹಂಚುವ ಸಂಕಲ್ಪವನ್ನು ಮಾಡಿಕೊಂಡಿದ್ದಾರೆ ಡಾ| ವೀಣಾ ಶಂಕರ್‌. ಅವರ ನೇತೃತ್ವದಲ್ಲಿ ಅವರ ಸಹೋದರಿ ಡಾ| ಚೇತನಾ ಅಗ್ರಹಾರ ಮತ್ತು ಅವರ ಸಹಪಾಠಿಗಳಾದ ಡಾ| ಸವಿತಾ ಗೌಡ, ಡಾ|  ಅನುರಾಧಾ ಅಮರನಾಥ, ಡಾ| ಪಲ್ಲವಿ ನಂದೀಶ್ವರ, ಡಾ| ಇಂದ್ರೇಶ್‌ ಅಯ್ಯರ್‌, ಡಾ| ಸುನೀಲಾ ಹಸೂìರು, ಮತ್ತು ಡಾ| ಶೇಖರ ಕೃಪಾದ್‌ ಸೇರಿಕೊಂಡು ಕನ್ನಡ ಮಾತನಾಡುವ ಇತರೆ 60 ವೈದ್ಯರನ್ನು ತ್ವರಿತವಾಗಿ ಒಟ್ಟುಗೂಡಿಸಿ, ಈ ಕಾರ್ಯಕ್ಕೆ ಬೇಕಾಗುವ ತಾಂತ್ರಿಕ ಸಹಾಯಕ್ಕೆ ಅಮೆರಿಕದಲ್ಲಿ ಹಿರಿಯ ತಂತ್ರಜ್ಞಾನಿಯಾಗಿ ಕೆಲಸ ನಿರ್ವಹಿಸುತ್ತಿರುವ ಕಿರಣ್‌ ಅಗ್ರಹಾರ ಹಾಗೂ ರೋಹನ್‌ ಶಂಕರ್‌ (ಸ್ಟೆರ್ನ್ ಬ್ಯುಸಿನಸ್‌ ಸ್ಕೂಲ…) ಜತೆಗೂಡಿ ತಂಡವನ್ನು ರಚಿಸಿದ್ದರು.

ಕೆಲಸದ ಒತ್ತಡ, ತಮಗಿರುವ ಕಾಲಮಾನ ದಲ್ಲಿನ ವ್ಯತ್ಯಾಸವನ್ನು ಗಮನದಲ್ಲಿಟ್ಟುಕೊಂಡು ಹಗಲಿರುಳು ದೂರವಾಣಿ ಮುಖಾಂತರ ಉಚಿತ ಆರೋಗ್ಯ ಸಲಹೆ ನೀಡುತ್ತಿದ್ದಾರೆ. ಅದರ ಜತೆಗೆ ಇತರೆ ವೈದ್ಯಕೀಯ ವಸ್ತುಗಳನ್ನು ಒದಗಿಸಲು ಶ್ರಮಿಸುತ್ತಿದ್ದಾರೆ. ಬೆಂಗಳೂರಿನ ವೈದ್ಯರಾದ ಡಾ| ಪದ್ಮಾ ಎಸ್‌. ಹಾಗೂ ಡಾ| ಸ್ನೇಹ ವಿಕ್ರಮ್‌ ಅವರ ಸಹಯೋಗದಲ್ಲಿ ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಲಭ್ಯವಿರುವ ಮಾಹಿತಿ ನೀಡುವುದರೊಂದಿಗೆ, ಆಮ್ಲಜನಕ, ಔಷಧಗಳನ್ನು ಸೋಂಕಿತರಿಗೆ ಒದಗಿಸಲು ನೆರವಾಗುತ್ತಿದ್ದಾರೆ.

ಈ ತಂಡ ಕೊರೊನಾ ಪೀಡಿತ ರೋಗಿಗಳನ್ನು ಸಂಪರ್ಕಿಸಿ ಅವರಿಗೆ ಸಹಾಯ ಮಾಡುವುದನ್ನೇ ತನ್ನ ಮುಖ್ಯ ಉದ್ದೇಶವಾಗಿಸಿಕೊಂಡಿದೆ. ಅಲ್ಲದೆ, ರೋಗಿಗಳಿಗೆ ಮನೆಯಲ್ಲೇ  ಗುಣಮುಖರಾಗುವ ಬಗ್ಗೆ ತಿಳುವಳಿಕೆ ನೀಡಿ, ಅವರ ಚಿಕಿತ್ಸೆಗೆ ನೆರವಾಗುತ್ತಿದ್ದಾರೆ. ಇದರಿಂದ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳ ಜನಸಂದಣಿ ಕಡಿಮೆಯಾಗಿ,  ಎಲ್ಲರಿಗೂ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಗುವಂತಾಗಬೇಕು ಎಂಬುದೇ ಮುಖ್ಯ ಉದ್ದೇಶವಾಗಿದೆ.

Advertisement

ತಾಂತ್ರಿಕ ತಂಡದ ಕಿರಣ್‌ ಅಗ್ರಹಾರ ಹಾಗೂ ರೋಹನ್‌ ಶಂಕರ್‌ ಅವರು, ದೂರವಾಣಿ ಕರೆಗಳನ್ನು ಸಂಯೋಜಿಸಿ, ಬೆಂಗಳೂರಿನಲ್ಲಿರುವ ರೋಗಿಗಳು ಹಾಗೂ ಇಲ್ಲಿನ ವೈದ್ಯರ ನಡುವೆ ಸಂಪರ್ಕ ಕಲ್ಪಿಸಿ ವೈದ್ಯಕೀಯ ಸಮಾಲೋಚನೆಗೆ ಸಹಾಯ ಮಾಡುತ್ತಿದ್ದಾರೆ. ವೈದ್ಯರು ತಮಗಿರುವ ಸೀಮಿತ ಸಂಪನ್ಮೂಲದಲ್ಲಿ  ಅಲ್ಲಿನ ಜನರ ಜತೆ ಮಾತುಕತೆ  ನಡೆಸಿ ಸಾಂತ್ವನ ಹೇಳುತ್ತಿದ್ದಾರೆ.

ಸಾವಿರಾರು ಮೈಲಿ ದೂರದಲ್ಲಿರುವ ಕರ್ನಾಟಕ- ಅಮೆರಿಕ ಸ್ವಯಂ ಸೇವಕರ ಗುಂಪು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು ಇಲ್ಲಿಯವರೆಗೂ ಬೆಂಗಳೂರಿನ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಕೋವಿಡ್‌ ರೋಗಿಗಳಿಗೆ ಸೀಮಿತ ಚಿಕಿತ್ಸೆ ನೀಡುವುದರ ಮೂಲಕ ಕನ್ನಡ ಮಾತನಾಡುವ ಅನಿವಾಸಿ ವೈದ್ಯರು ಬೆಂಗಳೂರಿನ ಸಂತ್ರಸ್ತ ಜನರಿಗೆ ವೈದ್ಯಕೀಯ ಸಲಹೆ ನೀಡಿ, ಅವರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಅಮೆರಿಕದ 60ಕ್ಕೂ ಹೆಚ್ಚು ವೈದ್ಯರ ಈ ತಂಡದ ನಿಸ್ವಾರ್ಥ ಸೇವೆಯನ್ನು ಮೆಚ್ಚಿ ಇನ್ನೂ ಹಲವಾರು ಅನಿವಾಸಿ ವೈದ್ಯರು ತಮ್ಮ ಸಹಾಯ ಹಸ್ತವನ್ನು ನೀಡಲು ಮುಂದಾಗಿರುವುದು ಇವರ ಕಾರ್ಯಕ್ರಮಕ್ಕೆ ಮತ್ತಷ್ಟು ಬಲ ಸಿಕ್ಕಿದಂತಾಗಿದೆ.

– ಅಹೀಶ್‌ ಭಾರದ್ವಾಜ, ನ್ಯೂ ಜೆರ್ಸಿ

Advertisement

Udayavani is now on Telegram. Click here to join our channel and stay updated with the latest news.

Next