Advertisement

ಅಮೆರಿಕ ಚುನಾವಣ ತಯಾರಿ; ಭಾರತದ ಪರವಿಲ್ಲ ಕಮಲಾ

01:18 AM Aug 21, 2020 | mahesh |

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಇನ್ನೂ ಹಲವು ತಿಂಗಳುಗಳು ಬಾಕಿ ಇವೆಯಾದರೂ ಈಗಾಗಲೇ ಚುನಾವಣ ತಂತ್ರಗಾರಿಕೆಗಳು ವೇಗ ಪಡೆದು ಬಿಟ್ಟಿವೆ. ವಿವಿಧ ಮತದಾರ ಸಮೂಹಗಳನ್ನು ಸೆಳೆಯಲು ಅಲ್ಲಿನ ರಿಪಬ್ಲಿಕನ್‌ ಮತ್ತು ಡೆಮಾಕ್ರಟಿಕ್‌ ಪಕ್ಷಗಳು ನಾಮುಂದು ತಾಮುಂದು ಎಂದು ಮುಗಿಬಿದ್ದಿವೆ. ಈ ಬಾರಿ ಟ್ರಂಪ್‌ ಅವರಿಗೆ ಎದುರಾಳಿಯಾಗಿ, ಜೋ ಬಿಡೆನ್‌ ಅಖಾಡಕ್ಕಿಳಿದಿದ್ದಾರಾದರೂ ಕೆಲವು ದಿನಗಳಿಂದ ಹೆಚ್ಚು ಸದ್ದು ಮಾಡುತ್ತಿರುವ ಹೆಸರು (ಅದರಲ್ಲೂ ಭಾರತದಲ್ಲಿ) ಕಮಲಾ ಹ್ಯಾರಿಸ್‌ ಅವರದ್ದು. ಡೆಮಾಕ್ರಟಿಕ್‌ ಪಕ್ಷವು ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿರುವ ಕಮಲಾ ಹ್ಯಾರಿಸ್‌ ಭಾರತೀಯ ಮೂಲದವರು ಎಂಬ ಅಂಶವನ್ನೇ ಮುಂದಿಟ್ಟುಕೊಂಡು ಕೆಲ ದಿನಗಳಿಂದ ಡೆಮಾಕ್ರಟಿಕ್‌ ಪಕ್ಷ ಭಾರೀ ಪ್ರಚಾರ ನಡೆಸಿದೆ. ಭಾರತೀಯ ಮಾಧ್ಯಮಗಳೂ ಈ ವಿಚಾರದಲ್ಲಿ ಸಂಭ್ರಮಿಸಲಾರಂಭಿಸಿವೆ. ಇನ್ನೊಂದೆಡೆ ಕಮಲಾರ ತಂದೆ ಕಪ್ಪು ವರ್ಣೀಯರಾದ್ದರಿಂದ ಆಫ್ರಿಕನ್‌ ಅಮೆರಿಕನ್‌ ವರ್ಗದ ಧ್ವನಿ ಎಂದೂ ಅವರನ್ನು ಬಿಂಬಿಸಲಾಗುತ್ತಿದೆ.

Advertisement

ಕಮಲಾರ ತಾಯಿ ಭಾರತೀಯ ಮೂಲದವರೆಂಬುದೇನೋ ಸರಿ. ಹಾಗೆಂದು ಕಮಲಾ ಹ್ಯಾರಿಸ್‌ ಭಾರತದ ಪರವಿದ್ದಾರೆ ಎಂದೇನೂ ಅರ್ಥವಲ್ಲ. ಅವರು ಈಗ ತಮ್ಮ ಭಾರತೀಯ ಮೂಲವನ್ನು ಬಂಡವಾಳ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ಸುಸ್ಪಷ್ಟ. ಈ ವಿಚಾರವೇಕೆ ಚರ್ಚೆಯ ಮುನ್ನೆಲೆಗೆ ಬರಬೇಕು ಅಂದರೆ, ಈಗಲೂ ಅಮೆರಿಕವೇ ಜಾಗತಿಕ ಶಕ್ತಿಕೇಂದ್ರವಾಗಿರುವುದರಿಂದ, ಅಲ್ಲಿನ ಚುನಾವಣೆಗಳು, ಫ‌ಲಿತಾಂಶಗಳು ಅನ್ಯ ದೇಶಗಳ ಮೇಲೂ ಪರಿಣಾಮ ಬೀರುತ್ತವೆ. ಅಲ್ಲಿ ಅಧಿಕಾರಕ್ಕೆ ಬರುವವರ ಸಿದ್ಧಾಂತಗಳು, ನೀತಿಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅನ್ಯ ದೇಶಗಳ ಮೇಲೂ ಪರಿಣಾಮ ಬೀರುತ್ತವೆ. ಇನ್ನು ಭಾರತೀಯರೂ ಅಮೆರಿಕದಲ್ಲಿ ಅಪಾರ ಸಂಖ್ಯೆಯಲ್ಲಿರುವ ಕಾರಣ, ಭಾರತವು ಈ ಬಾರಿಯೂ ಅಮೆರಿಕದ ಚುನಾವಣೆಗಳನ್ನು ಗಮನವಿಟ್ಟು ನೋಡಲಿದೆ.

ಕಮಲಾ ಹ್ಯಾರಿಸ್‌ ವಿಚಾರಕ್ಕೇ ಬರುವುದಾದರೆ, ಮೊದಲಿಂದಲೂ ಅವರು ತಮ್ಮ ಭಾರತೀಯ ವಿರೋಧಿ ಗುಣಗಳಿಂದ ಹಾಗೂ ಪಾಕ್‌ ಪರ ನಡೆಗಳಿಂದಲೇ ಗುರುತಿಸಿಕೊಂಡವರು. ಅಮೆರಿಕದಲ್ಲಿನ ಬಹುದೊಡ್ಡ ಪಾಕ್‌ ಪರ ಲಾಬಿಯೊಂದರ ಜತೆಗೆ, ಮುಖ್ಯವಾಗಿ ಡೆಮಾಕ್ರಟ್‌ ಪಕ್ಷದಲ್ಲಿನ ಪಾಕಿಸ್ಥಾನಿ ರಾಜಕಾರಣಿ ಆಸೀಫ್ ಮೆಹಮೂದ್‌ಗೆ ಆಪ್ತವಾಗಿರುವ ಕಮಲಾ, ಭಾರತವು ಕಾಶ್ಮೀರದಿಂದ ಆರ್ಟಿಕಲ್‌ 370 ಹಿಂಪಡೆದ ವಿಚಾರವನ್ನು ಹಲವು ವೇದಿಕೆಗಳಲ್ಲಿ ವಿರೋಧಿಸಿದವರು. ಸಿಎಎ ವಿಚಾರದಲ್ಲೂ ಅನವಶ್ಯಕವಾಗಿ ಮೂಗುತೂರಿಸುವ ಪ್ರಯತ್ನ ನಡೆಸುತ್ತಾ ಟೀಕೆಗೆ ಒಳಗಾಗಿದ್ದರು. ಇನ್ನು ಇದಕ್ಕೂ ಹಿಂದೆ, ಕ್ಯಾಲಿಫೋರ್ನಿಯಾದ ಪಠ್ಯಗಳಲ್ಲಿನ ಹಿಂದೂ ವಿರೋಧಿ ಪಾಠಗಳ ವಿರುದ್ಧ ಅಲ್ಲಿನ ಭಾರತೀಯರು ಧ್ವನಿಯೆತ್ತಿದಾಗ, ಸೆನೆಟರ್‌ ಆಗಿದ್ದ ಕಮಲಾ ಹ್ಯಾರಿಸ್‌ ಈ ವಿಚಾರದಲ್ಲಿ ತಮಗೆ ಬೆಂಬಲವೇ ನೀಡಲಿಲ್ಲ ಎನ್ನುವ ಅಸಮಾಧಾನದ ಧ್ವನಿಗಳು ಇನ್ನೂ ಕೇಳಿಸುತ್ತವೆ. ಹಾಗೆಂದು, ಅತ್ತ ಟ್ರಂಪ್‌ ಪೂರ್ಣ ಭಾರತದ ಪರ ಇದ್ದಾರೆ ಎಂದೇನೂ ಇದರರ್ಥವಲ್ಲ. ಎಚ್‌1ಬಿ ವೀಸಾ ವಿಚಾರವಾಗಿರಲಿ, ವ್ಯಾಪಾರ ಒಪ್ಪಂದಗಳ ವಿಚಾರವಾಗಲಿ ಅವರ ಸರಕಾರದ ನಡೆಗಳು ನಿಸ್ಸಂಶಯವಾಗಿಯೂ ಭಾರತಕ್ಕೆ ಬಿಕ್ಕಟ್ಟನಂತೂ ಸೃಷ್ಟಿಸಿವೆ. ಇದೇನೇ ಇದ್ದರೂ ಒಟ್ಟಿನಲ್ಲಿ ಅಮೆರಿಕದ ಚುನಾವಣೆಯಲ್ಲಿ ಭಾರತೀಯ ಮೂಲದ ಮತದಾರರನ್ನು ಸೆಳೆಯುವ ಪ್ರಯತ್ನವಂತೂ ಅಲ್ಲಿನ ರಾಜಕೀಯ ಪಕ್ಷಗಳು ಢಾಳಾಗಿಯೇ ನಡೆಸಿವೆ. ಅಂದರೆ ಈ ಮತದಾರ ವರ್ಗ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವಷ್ಟು ಬಲಿಷ್ಠವಾಗಿದೆ ಎಂಬುದು. ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮುಂದೆ ಯಾವ ತಿರುವು ಪಡೆಯಲಿದೆ, ಯಾರಿಗೆ ಮೇಲುಗೈ ಸಿಗಲಿದೆ ಎನ್ನುವುದನ್ನು ಭಾರತವಷ್ಟೇ ಅಲ್ಲದೇ ಇಡೀ ಜಗತ್ತು ಕುತೂಹಲದಿಂದ ನಿರೀಕ್ಷಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next