Advertisement
ಕೊರೆಯುವ ಚಳಿ, ಸುರಿಯುವ ಹಿಮ ಪಾತದಿಂದ ಬಸವಳಿದಿದ್ದ ಅಮೆರಿಕದ ಜನತೆ ಬರಲಿರುವ ವಸಂತನಾಗಮನಕ್ಕೆ ಸಜ್ಜಾಗುತ್ತಿತ್ತು. ದಕ್ಷಿಣ ಭಾರತೀಯರ ಹಬ್ಬ “ಯುಗಾದಿ’ಯೊಂದಿಗೆ ಹೊಸ ವರ್ಷ ಆರಂಭವಾಗುವುದರಿಂದ ಆ ಬಗ್ಗೆ ಸಿದ್ಧತೆಯೂ ಜೋರಾಗಿ ಸಾಗಿತ್ತು. ಇಂಥ ಸಮಯದಲ್ಲಿಯೇ ಒಕ್ಕರಿಸಿತಲ್ಲ, ಕೊರೊನಾ ಎಂಬ ಮಹಾಮಾರಿ! ಚೀನಾದಲ್ಲಿ ಹುಟ್ಟಿತೆನ್ನಲಾದ ಕಣ್ಣಿಗೆ ಕಾಣದ ಈ ಕ್ಷುದ್ರ ಜೀವಿ ವಿಮಾನ ಹತ್ತಿಳಿದು ಶರವೇಗದಲ್ಲಿ ಜಗತ್ತನ್ನೆಲ್ಲಾ ಸಂಚರಿಸಿ, ವಿಶ್ವದ ದಿಗ್ಗಜರನ್ನೆಲ್ಲಾ ದಿಕ್ಕುಗೆಡಿಸಿತ್ತು. ಬೀದೀಲಿ ಹೋಗೋ ಮಾರಿಯನ್ನು ಮನೆಗೆ ಬಾ ಎಂದು ಕರೆಯುವ ಮೊದಲೇ ಮನೆ ಯೊಳಗೆ ಬಂದು ಕೂತಾಗಿತ್ತು. ಆಗ ಬೆಚ್ಚಿಬಿದ್ದಿತು ಅಮೆರಿಕ! ಎಲ್ಲೆಲ್ಲೂ ಭಯ, ಆತಂಕದ ವಾತಾವರಣ! ಯಾರನ್ನೂ ಯಾರೂ ಮುಟ್ಟದ, ಯಾರನ್ನು ಯಾರೂ ನಂಬದ ವಾತಾವರಣ. ಅಲ್ಲಿ ಬಂತಂತೆ..ಇಲ್ಲಿ ಕಾಣಿಸಿ ಕೊಂಡಿತಂತೆ ಎಂಬ ಅಂತೆಕಂತೆಗಳ ನಡುವೆ ಅಮೆರಿಕದ ಹಲವಾರು ರಾಜ್ಯಗಳಲ್ಲಿ ಕೊರೊನಾ ಹಾಜರಿ ಹಾಕಿತ್ತು. “ಇಲಿನಾಯ್’ ರಾಜ್ಯದ ಕೆಲವು ನಗರಗಳಲ್ಲಿ ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ರಾಜ್ಯಾದ್ಯಂತ ತುರ್ತು ಪರಿಸ್ಥಿತಿ ಸಾರಲಾಗಿದೆ. ಶಾಲೆಗಳಿಗೆ ರಜೆ, ಆಫೀಸುಗಳಲ್ಲಿ ಕೆಲಸ ಮಾಡುವವರಿಗೆ ಮನೆಯಿಂದ ಕೆಲಸ ಮಾಡುವಂತೆ ಆದೇಶ ಹೊರಟಿದೆ!
Related Articles
Advertisement
ಭಾರತೀಯರೂ ದಿನಸಿ ಸಂಗ್ರಹದಲ್ಲಿ ಹಿಂದೆ ಬೀಳಲಿಲ್ಲ. “ಪಟೇಲ್ ಬ್ರದರ್ಸ್’ ಎಂಬುದು ಇಲ್ಲಿರುವ ಹಲವಾರು ಭಾರತೀಯ ದಿನಸಿ ಅಂಗಡಿಗಳ ಪೈಕಿ ದೊಡ್ಡದಾದ ಮಳಿಗೆ. ಇಲ್ಲಿ ಸಿಗದ ಪದಾರ್ಥಗಳಿಲ್ಲ. ಭಾರತೀಯರಿಗೆ ಅತ್ಯಗತ್ಯವಾದ ದಿನಸಿ ವಸ್ತುಗಳನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿಯೇ ಶೇಖರಿಸಿರಲಾಗುತ್ತದೆ. ಅದರೆ, ಕರೊನಾ ಹಾವಳಿಯಿಂದಾಗಿ ಮುಗಿಬಿದ್ದ ಭಾರತೀಯ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಈ ಅಂಗಡಿಗೂ ಅಸಾಧ್ಯವೇ ಆಯಿತು..”ದಯವಿಟ್ಟು ಎರಡು ವಾರಗಳಿಗಾಗುವಷ್ಟೇ ಖರೀದಿಸಿ. ನಾವು ಖಾಲಿಯಾದಂತೆ ಹೊಸ ದಾಸ್ತಾನು ತರಿಸುತ್ತೇವೆ..’ ಎಂದು ಸೂಚನಾ ಫಲಕಗಳನ್ನು ಅಂಟಿಸಿದರೂ ಯಾರೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಅಕ್ಕಿ, ಬೇಳೆಯಂತಹ ಅಗತ್ಯದ ದಿನಸಿಗಳು ಕೂಡ ಸಿಕ್ಕಿದವರಿಗೆ ಸಿಕ್ಕಿತು, ಇಲ್ಲದವರಿಗೆ ಇಲ್ಲ ಎನ್ನುವಂತಹ ಕೊರತೆ ಏರ್ಪಟ್ಟಿತು.
ಇಂಥ ಅತಿರೇಕ, ಅಪಸವ್ಯಗಳ ನಡುವೆಯೂ ಕೆಲವು ಸಹೃದಯರು ತಮ್ಮದೇ ಸಣ್ಣ ಸಂಘಟನೆಗಳ ಮೂಲಕ ಸಮಾಜ ಸೇವೆಗೆ ನಿಂತಿದ್ದು ನಿಜಕ್ಕೂ ಶ್ಲಾಘನೀಯ. ಕೈಕಾಲು ಗಟ್ಟಿ ಇರುವವರು, ಆರೋಗ್ಯವಂತರೇನೋ ಈ ನೂಕುನುಗ್ಗಲಿನ ಚಕ್ರವ್ಯೂಹದೊಳಹೊಕ್ಕು ಅಗತ್ಯ ವಸ್ತುಗಳನ್ನು ಖರೀದಿಸಬಹುದು. ಆದರೆ ಈ ರೀತಿ ತಮ್ಮ ಕಾರುಗಳನ್ನು ಚಲಾಯಿಸಿಕೊಂಡು ಬಂದು, ಹನುಮಂತನ ಬಾಲದಂತಹ ಸರತಿಯ ಸಾಲಿನಲ್ಲಿ ನಿಲ್ಲಲಾರದ ವಯೋವೃದ್ಧರ ಪಾಡೇನು? ಈ ರೀತಿಯ ಹಿರಿಯ ನಾಗರೀಕರಿಗೆ, ಅಶಕ್ತರಿಗೆ ಸಹಾಯ ಮಾಡಲು ಕೆಲವರು ಮುಂದಾದರು. ಯಾವುದೇ ಸಮಾಜದಲ್ಲಿ ಹಿರಿಯರು ಮತ್ತು ಕಿರಿಯರು ಹೇಗೆ ನಡೆಸಿಕೊಳ್ಳಲ್ಪಡುತ್ತಾರೆಂಬುದು ಆ ಸಮುದಾಯದ ಗುಣಮಟ್ಟವನ್ನು ನಿರ್ಧರಿಸುವ ವಿಷಯವಾದ್ದರಿಂದ ಗೋಜಲಿನ ನಡುವೆಯೇ ವ್ಯಕ್ತವಾದ ಇಂತಹ ನೆರವು ನೀಡುವ ಮನೋಭಾವ ನಿಜಕ್ಕೂ ನಮ್ಮಲ್ಲಿ ಹೆಮ್ಮೆ ಮೂಡಿಸಿತು. ಈ ರೀತಿ ಯೋಚಿಸುವ ಮನಸ್ಸುಗಳು ಹೆಚ್ಚಾದಷ್ಟೂ ಸಮಾಜ ಸ್ವಸ್ಥವಾಗಿರುವುದರಲ್ಲಿ ಅನುಮಾನವಿಲ್ಲ.
ಬರೀ ಅಜ್ಜ-ಅಜ್ಜಿಯರ ಮಾತುಗಳಲ್ಲಿ, ಕಥೆ ಕಾದಂಬರಿಗಳಲ್ಲಿ ಮಾತ್ರ ಕಂಡಿದ್ದ ಭೀಕರ ಸಮಸ್ಯೆಯೊಂದಕ್ಕೆ ನಮ್ಮ ತಲೆಮಾರು ಸಾಕ್ಷಿಯಾಯಿತು. ಕೊನೆ ಎಂದು? ಎಂದರಿಯದ ಮಹಾನ್ ವಿಪತ್ತಿಗೆ ಇಂದು ಜಗತ್ತು ಮುಖಾಮುಖೀ ಯಾಗಿರುವುದು ನಿಜ. ಆದರೆ ಯಾವ ಸಂಕಷ್ಟಗಳೂ ಶಾಶ್ವತವಲ್ಲ. ಆತ್ಮಬಲ, ಒಗ್ಗಟ್ಟಿನಿಂದ ಇದನ್ನು ಎದುರಿಸಲು ಸಾಧ್ಯವಿದೆ. ಆದರೆ ಅದಕ್ಕೆ ಪ್ರತಿಯೊ ಬ್ಬರೂ ತಮಗೆ ತಾವೇ ನಿರ್ಬಂಧಗಳನ್ನು ವಿಧಿಸಿ ಕೊಂಡು. ತಮ್ಮ ಮತ್ತು ಸಮಾಜದ ಆರೋಗ್ಯವನ್ನು ಕಾಪಾಡುವ ಕೆಲಸ ಮಾಡಬೇಕಾಗಿದೆ. ಕೊರೊನ ಹಿಡಿತದಿಂದ ಕಂಗಾಲಾಗಿರುವ ಜಗತ್ತು ನೆಮ್ಮದಿಯಿಂದ ನಗುವ ದಿನ ಬೇಗ ಬರಲಿ!
ಆಶ್ಚರ್ಯ ತರಿಸಿದ ವರ್ತನೆಯೆಂದರೆ ಇಲ್ಲಿ ಶೌಚಕ್ಕೆ ಬಳಸುವ ಟಾಯ್ಲೆಟ್ ಪೇಪರುಗಳನ್ನು ಜನರು ಮಿತಿಮೀರಿ ಕೊಂಡು ಸಂಗ್ರಹಿಸಿ, ಅಂಗಡಿಯ ಕಪಾಟುಗಳನ್ನೇ ಬರಿದಾಗಿ ಸಿದ್ದು!
“ದಯವಿಟ್ಟು 2 ವಾರಗಳಿಗಾಗುವಷ್ಟೇ ಖರೀದಿಸಿ. ನಾವು ಖಾಲಿಯಾದಂತೆ ಹೊಸ ದಾಸ್ತಾನು ತರಿಸುತ್ತೇವೆ..’ ಎಂದು ಸೂಚನಾ ಫಲಕ ಅಂಟಿಸಿದರೂ ಯಾರೂ ಕೇಳುವ ಸ್ಥಿತಿಯಲ್ಲಿರಲಿಲ್ಲ.
- ತ್ರಿವೇಣಿ ಶ್ರೀನಿವಾಸರಾವ್ ಶಿಕಾಗೊ, ಅಮೆರಿಕ