ಬೀಜಿಂಗ್/ವಾಷಿಂಗ್ಟನ್: ಅಮೆರಿಕ ಮತ್ತು ಚೀನ ನಡುವಿನ ಸುಂಕ ಸಮರದ ಬಿಸಿ ವಿಶ್ವವನ್ನೇ ವ್ಯಾಪಿಸುವ ಹಂತಕ್ಕೆ ಹೋಗುವ ಸಾಧ್ಯತೆ ಇದೆ. ಅದರಲ್ಲಿಯೂ ವಿಶೇಷವಾಗಿ ಭಾರತಕ್ಕೆ ಪ್ರತಿಕೂಲವಾಗಲಿದೆಯೇ ಎಂಬ ವಿಶ್ಲೇ ಷಣೆ ಶುರುವಾಗಿದೆ. ಗುರುವಾರ ನಡೆದ ಬೆಳವಣಿಗೆಯಲ್ಲಿ ರಷ್ಯಾದಿಂದ ಮಿಲಿಟರಿ ಆಯುಧ, ಶಸ್ತ್ರಾಸ್ತ್ರಗಳನ್ನು ಚೀನ ಖರೀದಿ ಮಾಡುವಂತಿಲ್ಲ ಎಂದು ಅಮೆರಿಕ ಫರ್ಮಾನು ಹೊರಡಿಸಿದೆ. ಅದರಲ್ಲಿ ಎಸ್-400 ಟ್ರೈಂಫ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯೂ ಸೇರಿದೆ. ಇದೇ ವ್ಯವಸ್ಥೆಯನ್ನು ಭಾರತವೂ ರಷ್ಯಾದಿಂದ ಖರೀದಿಸಲು ಮುಂದಾಗಿದ್ದು, ಅಮೆರಿಕ -ಚೀನ ಸಮರವು ಭಾರತದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.
ಮುಂದಿನ ತಿಂಗಳು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತ ಪ್ರವಾಸ ಕೈಗೊಳ್ಳುವ ವೇಳೆ 40 ಸಾವಿರ ಕೋಟಿ ರೂ. ವೆಚ್ಚದ ರಕ್ಷಣಾ ಖರೀದಿ ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧತೆ ನಡೆದಿರುವಾಗಲೇ ಈ ಬೆಳವಣಿಗೆ ನಡೆದಿದೆ. ಏಷ್ಯಾದ ಪ್ರಬಲ ರಾಷ್ಟ್ರವಾಗಿರುವ ಚೀನದ ಮಿಲಿಟರಿ ಡೀಲ್‌ಗೆ ಅಮೆರಿಕ ಸರಕಾರ ಆಕ್ಷೇಪ ವ್ಯಕ್ತಪಡಿಸಿದೆ. ಜತೆಗೆ “ಇತರೆ ರಾಷ್ಟ್ರಗಳು ಕೂಡ ರಷ್ಯಾ ಜತೆ ಒಪ್ಪಂದ ಮಾಡುವ ಮುನ್ನ ಎರಡು ಬಾರಿ ಯೋಚನೆ ಮಾಡುವುದು ಒಳಿತು’ ಎಂದು ಎಚ್ಚರಿಕೆಯ ಟಿಪ್ಪಣಿಯನ್ನೂ ನೀಡಿದೆ.
ಸೆ.6ರಂದು ದೆಹಲಿಯಲ್ಲಿ ಅಮೆರಿಕದ ವಿದೇಶಾಂಗ ಮತ್ತು ರಕ್ಷಣಾ ಸಚಿವರು ಭಾರತದ ವಿದೇಶಾಂಗ ಮತ್ತು ರಕ್ಷಣಾ ಸಚಿವರು ನಡೆಸಿದ್ದ 2+2 ಮಾತುಕತೆ ಯಲ್ಲಿ ಮೇಲ್ನೋಟಕ್ಕೆ ಮಾತ್ರ ಈ ಬಗ್ಗೆ ಪ್ರಸ್ತಾಪವಾಗಿತ್ತು. ಇದರ ಹೊರತಾ ಗಿಯೂ ರಷ್ಯಾದಿಂದ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿ ಮಾಡಿದರೆ ಪ್ರತಿಕೂಲ ಪರಿಣಾಮ ಎದುರಿಸಬೇಕಾದೀತು ಎಂದು ಭಾರತಕ್ಕೆ ಅಮೆರಿಕ ಈಗಾಗಲೇ ಸೂಚನೆ ರವಾನಿಸಿದೆ.
ಚೀನ, ರಷ್ಯಾ ಎಚ್ಚರಿಕೆ: ರಷ್ಯಾದಿಂದ ಸೇನೆಗೆ ಸಂಬಂಧಿಸಿದ ಖರೀದಿ ಪ್ರಸ್ತಾಪಕ್ಕೆ ತಡೆಯೊಡ್ಡಿ ಹೇರಲಾಗಿರುವ ನಿರ್ಬಂಧ ವನ್ನು ತಕ್ಷಣ ರದ್ದು ಮಾಡುವಂತೆ ಅಮೆರಿಕಕ್ಕೆ ಚೀನ ಹಾಗೂ ರಷ್ಯಾ ಎಚ್ಚರಿಕೆ ನೀಡಿವೆ. ಮಾಸ್ಕೋದಲ್ಲಿ ಮಾತನಾಡಿದ ಉಪ ವಿದೇಶಾಂಗ ಸಚಿವ ಸರ್ಗಿ ರ್ಯಬೊವ್ “ಬೆಂಕಿಯ ಜತೆಗೆ ಆಟವಾಡ ಬೇಡಿ’ ಎಂದು ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ ಜಾಗತಿಕ ಸ್ಥಿರತೆ ಎಂಬ ವಿಚಾರ ಮರೆತು ವರ್ತಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಬೀಜಿಂಗ್‌ನಲ್ಲಿ ಪ್ರತಿ ಕ್ರಿಯಿಸಿದ ಚೀನ ವಿದೇಶಾಂಗ ಇಲಾಖೆ, ಅಮೆರಿಕ ಕೂಡಲೇ ನಿರ್ಧಾರ ಹಿಂಪಡೆ ಯಬೇಕು. ಇಲ್ಲದೇ ಇದ್ದಲ್ಲಿ ಪ್ರತಿಕೂಲ ಪರಿಣಾಮ ಉಂಟಾದೀತು. “ಅಮೆರಿಕದ ಘೋಷಣೆ ಅಂತಾರಾಷ್ಟ್ರೀಯವಾಗಿ ಎರಡು ರಾಷ್ಟ್ರಗಳು ಹೊಂದಿರಬೇಕಾದ ಬಾಂಧವ್ಯಕ್ಕೆ ಧಕ್ಕೆ ತರುವಂತಿದೆ. ಜತೆಗೆ ಎರಡು ಸೇನೆಯ ನಡುವಿನ ಸಂಬಂಧಕ್ಕೂ ಅಡ್ಡಿಯಾಗಲಿದೆ’ ಎಂದಿದ್ದಾರೆ. ಇದೇ ಮೊದಲ ಬಾರಿಗೆ ಟ್ರಂಪ್ ಆಡಳಿತ ಕಾಟ್ಸಾ ಕಾಯ್ದೆ(ದಿಗ್ಬಂಧ ಕಾಯ್ದೆ 2017) ಯನ್ವಯ ಮೂರನೇ ರಾಷ್ಟ್ರದತ್ತ ಕ್ರಮ ಕೈಗೊಂಡಿದೆ.