Advertisement

Police ಕಾಯ್ದೆಗೆ ತಿದ್ದುಪಡಿ: ವರ್ಗಾವಣೆಗೆ 2 ವರ್ಷ ಕನಿಷ್ಠ

10:56 PM Feb 21, 2024 | Team Udayavani |

ಬೆಂಗಳೂರು: ಆರಕ್ಷಕ ನಿರೀಕ್ಷಕ (ಪೊಲೀಸ್‌ ಇನ್‌ಸ್ಪೆಕ್ಟರ್‌), ಎಸ್ಪಿ, ಡಿವೈಎಸ್‌ಪಿ, ಡಿಐಜಿಯಂತಹ ಹುದ್ದೆಗಳಲ್ಲಿರುವ ಅಧಿಕಾರಿಗಳನ್ನು ಕನಿಷ್ಠ 2 ವರ್ಷಗಳ ವರೆಗೆ ವರ್ಗಾವಣೆ ಮಾಡದಂತೆ ಕರ್ನಾಟಕ ಪೊಲೀಸರು ಅಧಿನಿಯಮ-1963ಕ್ಕೆ ತಿದ್ದುಪಡಿ ತಂದಿದ್ದು, ಕರ್ನಾಟಕ ಪೊಲೀಸು (ತಿದ್ದುಪಡಿ) ಮಸೂದೆ -2024ಕ್ಕೆ ವಿಧಾನಸಭೆ ಸರ್ವಾನುಮತದಿಂದ ಅಸ್ತು ಎಂದಿದೆ.

Advertisement

ಕಾರ್ಯಾಚರಣೆ ಕರ್ತವ್ಯದಲ್ಲಿರುವ ಪೊಲೀಸ್‌ ಅಧಿಕಾರಿಗಳ ಕನಿಷ್ಠ ಅವಧಿಯನ್ನು ಒಂದು ವರ್ಷದಿಂದ ಎರಡು ವರ್ಷಗಳಿಗೆ ವಿಸ್ತರಿಸಲು ಮಸೂದೆಯಲ್ಲಿ ಅವಕಾಶ ನೀಡಿದ್ದು, ಇದರಿಂದ ತಮ್ಮ ಅಧಿಕಾರ ವ್ಯಾಪ್ತಿಯನ್ನು ಉತ್ತಮ ರೀತಿಯಲ್ಲಿ ಅರ್ಥ ಮಾಡಿಕೊಂಡು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ನಿರ್ಮಿಸಲು, ಅಪರಾಧ ಪತ್ತೆ ಹಚ್ಚಲು ಸಹಾಯವಾಗಲಿದೆ.

ಉಳಿದಂತೆ ಉನ್ನತ ಹುದ್ದೆಗೆ ಭಡ್ತಿ ಹೊಂದಿ ಹುದ್ದೆ ಖಾಲಿಯಾದರೆ, ಕ್ರಿಮಿನಲ್‌ ಅಪರಾಧದಲ್ಲಿ ನ್ಯಾಯಾಲಯದಿಂದ ದೋಷಾರೋಪಣೆ ಸಾಬೀತಾಗಿದ್ದರೆ, ಸೇವೆಯಿಂದ ವಜಾ ಮಾಡುವ, ತೆಗೆದುಹಾಕುವ, ಬಿಡುಗಡೆ ಮಾಡುವ, ಕಡ್ಡಾಯ ನಿವೃತ್ತಗೊಳಿಸುವ ದಂಡನೆ ವಿಧಿಸಿದ್ದರೆ, ಕರ್ತವ್ಯ ನಿರ್ವಹಣೆಯಲ್ಲಿ ದೈಹಿಕ ಅಥವಾ ಮಾನಸಿಕ ಅಸಮರ್ಥತೆ ಹೊಂದಿದ್ದರೆ, ಲಿಖೀತ ರೂಪದ ಕೋರಿಕೆ ಮೇರೆಗೆ 2 ವರ್ಷಕ್ಕಿಂತ ಮೊದಲೇ ವರ್ಗಾವಣೆ ಮಾಡಬಹುದು. ಇಲ್ಲದಿದ್ದರೆ ಕನಿಷ್ಠ 2 ವರ್ಷ ಅದೇ ಸ್ಥಾನದಲ್ಲಿ ಕೆಲಸ ಮಾಡಬೇಕೆಂಬುದನ್ನು ಮಸೂದೆಯಲ್ಲಿ ಉಲ್ಲೇಖಿಸಿದೆ.

ಸ್ವಾಗತಿಸುತ್ತೇವೆ
ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಪೊಲೀಸ್‌ ಅಧಿಕಾರಿಗಳನ್ನು ಕನಿಷ್ಠ 2 ವರ್ಷ ವರ್ಗಾವಣೆ ಮಾಡದಂತೆ ಕಾನೂನು ತಂದಿದ್ದೆವು. ಕೆ.ಜೆ. ಜಾರ್ಜ್‌ ಅವರು ಗೃಹ ಸಚಿವರಿದ್ದಾಗ ಶಾಸಕರ ಒತ್ತಡಕ್ಕೆ ಮಣಿದು 1 ವರ್ಷಕ್ಕೆ ಇಳಿಸಿದ್ದರು. ಈಗ ಮತ್ತೆ ನಮ್ಮ ಕಾನೂನನ್ನೇ ಜಾರಿಗೆ ತರುವುದಕ್ಕೆ ಸ್ವಾಗತಿಸುತ್ತೇನೆ.
– ಆರ್‌.ಅಶೋಕ, ವಿಪಕ್ಷ ನಾಯಕ

ಕಾನೂನು ತರಬೇಕು
ಪದೇಪದೆ ಪೊಲೀಸರನ್ನು ವರ್ಗಾಯಿಸುವುದರಿಂದ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಕೆಲವು ಆಯ್ದ ಠಾಣೆಗಳಿಗೆ ವರ್ಗಾಯಿಸಿಕೊಳ್ಳಲು ಪೊಲೀಸರೂ ತಯಾರಿರುತ್ತಾರೆ. ಜ್ಯೇಷ್ಠತೆ ಆಧಾರದ ಮೇಲೆ ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮಾಡುವ ಕಾನೂನು ತರಬೇಕು.
-ಆರಗ ಜ್ಞಾನೇಂದ್ರ, ಮಾಜಿ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next