ಹನೂರು(ಚಾಮರಾಜನಗರ): ಉಳುವವನೇ ಭೂ ಒಡೆಯ ಎನ್ನುವ ಕಾಯ್ದೆಯನ್ನು ಉಳ್ಳವನೇ ಭೂ ಒಡೆಯ ಎಂಬಂತೆ ತಿದ್ದುಪಡಿ ಮಾಡಿ ಈ ಹಿಂದಿನ ಜೀತಪದ್ಧತಿಗೆ ರೈತರನ್ನು ದೂಡುವ ಷಡ್ಯಂತ್ರವೇ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಯ ಹುನ್ನಾರ ಎಂದು ಶಾಸಕ ಆರ್.ನರೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಹನೂರು ಮತ್ತು ರಾಮಾಪುರ ಬ್ಲಾಕ್ ಕಾಂಗ್ರೆಸ್‍ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸಿರುವ ರೈತ ವಿರೋಧಿ ಕಾಯ್ದೆಗಳು ಮತ್ತು ದೇಶದಲ್ಲಿ ಉಂಟಾಗಿರುವ ಅರಾಜಕತೆಯ ವಿರುದ್ಧ ಸಾಂಕೇತಿಕ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಮೂಲಕ ಹೊರಟ ಪ್ರತಿಭಟನಾಕಾರರು ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಮುಖ್ಯವೃತ್ತವನ್ನು ತಲುಪಿದರು. ಮುಖ್ಯವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ. ಪ್ರಧಾನಮಂತ್ರಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಧಿಕ್ಕಾರಗಳನ್ನು ಮೊಳಗಿಸಿದರು.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ನರೇಂದ್ರ ಈ ಹಿಂದೆ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಉಳುವವನೇ ಭೂ ಒಡೆಯ ಎನ್ನುವ ಕಾಯ್ದೆಯನ್ನು ಜಾರಿಗೊಳಿಸಿ ರೈತರಿಗೆ ಭೂ ಮಾಲೀಕತ್ವವನ್ನು ನೀಡಿತ್ತು. ಅಲ್ಲದೆ ಕಾಂಗ್ರೆಸ್ ಪಕ್ಷ ಜೀತಪದ್ಧತಿ ನಿರ್ಮೂಲನೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿತ್ತು. ಆದರೆ ಇಂದಿನ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಂದ ಜಮೀನನ್ನು ಕಸಿದುಕೊಳ್ಳುವಂತಹ ಕಾಯ್ದೆಯನ್ನು ಜಾರಿಗೊಳಿಸಿವೆ. ಈ ಕಾಯ್ದೆಯಿಂದ ರೈತರು ಜಮೀನನ್ನು ಕಳೆದುಕೊಳ್ಳುವ ಭೀತಿ ಎದುರಾಗಿ ಉಳ್ಳವರ ಬಳಿ ಕೈ ಕಟ್ಟಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಅಲ್ಲದೆ ರೈತರು ತಾವು ಬೆಳೆದ ಬೆಲೆಯನ್ನು ನಿರ್ಧರಿಸುವ ಹಕ್ಕನ್ನು ಕಸಿದಿಕೊಳ್ಳುವಂತಹ ಎಪಿಎಂಸಿ ಕಾಯ್ದೆಯನ್ನೂ ಸಹ ಜಾರಿಗೊಳಿಸಿದ್ದಾರೆ. ಈ ಕಾಯ್ದೆಗಳು ರೈತ ವಿರೋಧಿ ಕಾಯ್ದೆಗಳಾಗಿವೆ ಎಂದು ಕಿಡಿಕಾರಿದರು.
ದೇಶದಲ್ಲಿ ಅರಾಜಕತೆ: ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿಯೂ ಸಹ ಅರಾಜಕತೆ ಸೃಷ್ಠಿಯಾಗಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಕಳೆದ 15 ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ. ಅತ್ಯಾಚಾರಕ್ಕೊಳಗಾದ ಯುವತಿ ಪೊಲೀಸ್ ಅಧಿಕಾರಿಗಳು, ಮ್ಯಾಜಿಸ್ಟ್ರೇಟ್ ಮುಂದೆಯೇ ಹೇಳಿಕೆ ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. 15 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಆ ಯುವತಿಯ ಮೃತದೇಹವನ್ನು ಪೋಷಕರಿಗೆ ನೀಡದೆ ರಾತ್ರೋರಾತ್ರಿ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಈ ಸಂಬಂಧ ನೊಮದವರ ಅಳಲು ಕೇಳಿ ಸಾಂತ್ವನ ತಿಳಿಸಲು ಹೊರಟಿದ್ದ ರಾಹುಲ್‍ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯರವನ್ನು ತಡೆದು ಅವರ ಮೇಲೆ ಪೊಲೀಸರ ಮೂಲಕ ಹಲ್ಲೆ ನಡೆಸಿದ್ದಾರೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಈ ಎಲ್ಲಾ ವೈಫಲ್ಯಗಳನ್ನು ರಾಷ್ಟ್ರದ ಜನತೆಗೆ ತಿಳಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಹಮ್ಮಿಕೊಂಡಿದ್ದು ಮುಂದಿನ ದಿನಗಳಲ್ಲಿಯೂ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಜಿ.ಪಂ ಸದಸ್ಯ ಬಸವರಾಜು, ಶಿವಮ್ಮ ಕೃಷ್ಣ, ಬ್ಲಾಕ್‍ಕಾಂಗ್ರೆಸ್ ಅಧ್ಯಕ್ಷರಾದ ಈಶ್ವರ್, ಕೆಂಪಯ್ಯ, ಮುಖಂಡರಾದ ಪಾಳ್ಯ ಕೃಷ್ಣ, ಕೌದಳ್ಳಿ ಚಾಂದ್‍ಪಾಷ, ಮುರಳಿ, ಪುಟ್ಟರಾಜು, ಉದ್ದನೂರು ಸಿದ್ಧರಾಜು, ತಾ.ಪಂ ಸದಸ್ಯರು, ಪ.ಪಂ ಸದಸ್ಯರು ಹಾಜರಿದ್ದರು.