Advertisement

ಭೂ ಕಂದಾಯ ಕಾಯ್ದೆ ತಿದ್ದುಪಡಿ ಕೈಬಿಡಿ: ಟಿಬಿಜೆ

03:41 PM Sep 25, 2020 | Suhan S |

ಶಿರಾ: ನಗರ ಪರಿಮಿತಿ 18ಕಿ.ಮೀ. ಒಳಗೆ ಬಿ ಖರಾಬು ಜಮೀನು ಸಕ್ರಮಗೊಳಿಸಿ ಮಾರಾಟ ಮಾಡಲು ಕರ್ನಾಟಕ ಭೂಕಂದಾಯ ಕಾಯ್ದೆ 1966ರ ಕಲಂ 64(2) ಮತ್ತು 69ಕ್ಕೆ ತಿದ್ದುಪಡಿ ಮಾಡುವುದನ್ನು ರಾಜ್ಯ ಸರ್ಕಾರ ಕೈಬಿಡಬೇಕು ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

Advertisement

ಬೆಂಗಳೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯ 18 ಕಿ.ಮೀ. ವ್ಯಾಪ್ತಿಯೊಳಗೆ ಸುಮಾರು 21,000 ಎಕರೆಯಷ್ಟು ಬಿ ಖರಾಬು ಜಮೀನನ್ನು ಸಕ್ರಮಗೊಳಿಸಲು ಭೂಕಂದಾಯ ಕಾಯ್ದೆ ತಿದ್ದುಪಡಿ ಮಾಡುವ ಬಗ್ಗೆ ಉಪಯೋಗಕ್ಕೆ ಬಾರದಿರುವ ಬಡಾವಣೆಯಲ್ಲಿರುವ ನಿವೇಶನದಾರರಿಂದ ಒತ್ತುವರಿಯಾಗಿರುವ ಆಸ್ತಿಗಳನ್ನು ಮಾರುಕಟ್ಟೆ ಬೆಲೆಯ ನಾಲ್ಕುಪಟ್ಟು ಶುಲ್ಕ ವಿಧಿಸಿ ಮಾರಾಟ ಮಾಡಿ ಸರ್ಕಾರದ ಬೊಕ್ಕಸಕ್ಕೆ ಆದಾಯ ತರುವ ನಿಟ್ಟಿನಲ್ಲಿ ಹಾಲಿ ಇರುವ ಭೂಕಂದಾಯ ಕಾಯ್ದೆ 1966ರ ಕಲಂ (64(2) ಮತ್ತು 69 ಕ್ಕೆ ತಿದ್ದುಪಡಿ ಮಾಡಿ ಮಾರ್ಪಡಿಸಲು ಹೊರಟಿರುವುದು ಅವೈಜ್ಞಾನಿಕವಾಗಿದೆ ಎಂದಿದ್ದಾರೆ.

ಕರ್ನಾಟಕ ಸರ್ಕಾರದ ಭೂಕಂದಾಯ ನಿಯಮಗಳಲ್ಲಿ ಬಿ ಖರಾಬು ಜಮೀನು ಮಂಜೂರಾತಿಗೆ ಅವಕಾಶ ನೀಡಿರುವುದಿಲ್ಲ. ಚಾಲ್ತಿಯಲ್ಲಿರುವ ಕಾನೂನಿನ ಮೂಲ ಉದ್ದೇಶ ಬಿ ಖರಾಬು ಜಮೀನು ಬೇರೆ ಉದ್ದೇಶಕ್ಕೆ ಪರಭಾರೆ ಮಾರಾಟ ಮಾಡಬಾರದೆಂಬುದೇ ಆಗಿದೆ. ಬಿ ಖರಾಬು ಜಮೀನು ಖಾಸಗಿ ವ್ಯಕ್ತಿಯ ಜಮೀನಿನಲ್ಲಿ, ಬಡಾವಣೆಗಳಲ್ಲಿ ಹಾದು ಹೋಗಿರುವ ಹಳ್ಳ, ಸಣ್ಣ ಹಳ್ಳ, ಜರಿ, ಕಾಲುದಾರಿ ಬಂಡಿದಾರಿಗಳನ್ನು ಅಳತೆ ಪ್ರಕಾರ ನಮೂದಿಸಲಾಗಿದ್ದು, ಕೃಷಿಯೇತರ ಉದ್ದೇಶಕ್ಕಾಗಲೀ, ಖಾಸಗಿ ವ್ಯಕ್ತಿಯಾಗಲೀ ಬಳಕೆ ಮಾಡುವಂತಿಲ್ಲ ಮತ್ತು ಹಸ್ತಾಂತರ ಮಾಡುವಂತೆಯೂ ಇಲ್ಲ. ನಗರ ಪ್ರದೇಶಗಳಲ್ಲಿರುವ ಬಡಾವಣೆಗಳಲ್ಲಿ ನಿವೇಶನಗಳ ಮಧ್ಯೆ ಇರುವ ಬಿ ಖರಾಬುನ್ನು ಮಂಜೂರು ಮಾಡಲು ಅಥವಾ ಮಾರಾಟ ಮಾಡುವುದು, ಅಂದರೆ ಸಾರ್ವಜನಿಕ ರಸ್ತೆ, ಓಣಿ ಸೇತುವೆ, ಹಳ್ಳಕೊಳ್ಳಗಳು, ನದಿಗಳು ಸರೋವÃಗಳು ಕೆರೆ, ಕಟ್ಟೆ ಇತ್ಯಾದಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿದಂತೆಯೇ ಆಗುತ್ತದೆ. ಭೂ ದಾಖಲೆಗಳ ವರ್ಗೀಕರಣದ ಮೂಲ ಉದ್ದೇಶವನ್ನೇ ಬುಡಮೇಲು ಮಾಡಿದಂತೆ ಆಗುತ್ತದೆ ಎಂದು ತಿಳಿಸಿದ್ದಾರೆ. ಸರ್ಕಾರ ಭೂಕಂದಾಯಕಾಯ್ದೆ ತಿದ್ದುಪಡಿಯನ್ನು ಕೈಬಿಟ್ಟು ಸರ್ಕಾರದ ಆಸ್ತಿಗಳನ್ನು ರಕ್ಷಣೆ ಮಾಡಲು ಹಾಗೂ ಒತ್ತುವರಿಗಳನ್ನು ತೆರವುಗೊಳಿಸಲು ಇನ್ನೂ ಹೆಚ್ಚಿನ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next