ಕ್ವೀನ್ಸ್‌ಟೌನ್ (ನ್ಯೂಜಿಲ್ಯಾಂಡ್): ವನಿತಾ ಏಕದಿನದಲ್ಲಿ ದ್ವಿಶತಕ ಬಾರಿಸಿದ ಸಾಹಸಿ ಅಮೇಲಿಯಾ ಕೆರ್ ಭಾರತದೆದುರಿನ ದ್ವಿತೀಯ ಮುಖಾಮುಖಿಯಲ್ಲಿ ಅಮೋಘ 119 ರನ್ ಹೊಡೆದು ನ್ಯೂಜಿಲ್ಯಾಂಡಿಗೆ 3 ವಿಕೆಟ್ ರೋಚಕ ಗೆಲುವು ತಂದಿತ್ತಿದ್ದಾರೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಕಿವೀಸ್ 2-0 ಮುನ್ನಡೆ ಸಾಧಿಸಿತು.
270 ರನ್ ಬಾರಿಸಿದರೆ ನಾವು ಸೇಫ್ ಎಂದು ನಾಯಕಿ ಮಿಥಾಲಿ ರಾಜ್ ಪಂದ್ಯಕ್ಕೂ ಮುನ್ನ ಹೇಳಿದ್ದರು. ಅದರಂತೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ 6 ವಿಕೆಟಿಗೆ ಸರಿಯಾಗಿ 270 ರನ್ ರಾಶಿ ಹಾಕಿತು. ಆದರೆ ಇದನ್ನು ಉಳಿಸಿಕೊಳ್ಳುವಲ್ಲಿ ಮಾತ್ರ ವಿಫಲವಾಯಿತು. ನ್ಯೂಜಿಲ್ಯಾಂಡ್ 49 ಓವರ್‌ಗಳಲ್ಲಿ 7 ವಿಕೆಟಿಗೆ 273 ರನ್ ಬಾರಿಸಿ ಜಯ ಸಾಧಿಸಿತು.
ಇದರಲ್ಲಿ ವನ್‌ಡೌನ್ ಆಟಗಾರ್ತಿ ಅಮೇಲಿಯಾ ಕೆರ್ ಕೊಡುಗೆ ಅಜೇಯ 119 ರನ್. ಇದು ಅವರ 2ನೇ ಶತಕ. 135 ಎಸೆತ ನಿಭಾಯಿಸಿದ ಕೆರ್ 7 ಬೌಂಡರಿ ಹೊಡೆದರು. ಅವರಿಗೆ ಮ್ಯಾಡ್ಡಿ ಗ್ರೀನ್ (52) ಉತ್ತಮ ಬೆಂಬಲ ನೀಡಿದರು. ಈ ಜೋಡಿ 4ನೇ ವಿಕೆಟಿಗೆ 128 ರನ್ ಪೇರಿಸಿ ಭಾರತದ ಗೆಲುವಿನ ಯೋಜನೆಯನ್ನು ವಿಫಲಗೊಳಿಸಿತು.
ಇದನ್ನೂ ಓದಿ:ಐಪಿಎಲ್‌ನಲ್ಲಿ ಕೋಟಿ ಸಿಗುತ್ತಿದ್ದಂತೆ ಪಾಕಿಸ್ಥಾನ ಲೀಗ್ ತೊರೆದ ಹೇಲ್ಸ್
ಭಾರತದ ಬ್ಯಾಟಿಂಗ್ ಅಮೋಘವಾಗಿಯೇ ಇತ್ತು. ಆರಂಭಿಕರಾದ ಎಸ್. ಮೇಘನಾ 49, ಶಫಾಲಿ ವರ್ಮ 24, ಯಾಸ್ತಿಕಾ ಭಾಟಿಯಾ 31 ರನ್ ಹೊಡೆದರು. ನಾಯಕಿ ಮಿಥಾಲಿ ರಾಜ್ (ಅಜೇಯ 66) ಮತ್ತು ಕೀಪರ್ ರಿಚಾ ಘೋಷ್ (65) 4ನೇ ವಿಕೆಟಿಗೆ 124 ರನ್ ರಾಶಿ ಹಾಕಿದರು.
ಸಂಕ್ಷಿಪ್ತ ಸ್ಕೋರ್
ಭಾರತ-6 ವಿಕೆಟಿಗೆ 270 (ಮಿಥಾಲಿ 66, ರಿಚಾ 65, ಮೇಘನಾ 49, ಡಿವೈನ್ 42ಕ್ಕೆ 2). ನ್ಯೂಜಿಲ್ಯಾಂಡ್-49 ಓವರ್‌ಗಳಲ್ಲಿ 7 ವಿಕೆಟಿಗೆ 273 (ಕೆರ್ ಔಟಾಗದೆ 119, ಗ್ರೀನ್ 52, ಡಿವೈನ್ 33, ದೀಪ್ತಿ 52ಕ್ಕೆ 4). ಪಂದ್ಯಶ್ರೇಷ್ಠ: ಅಮೇಲಿಯಾ ಕೆರ್.