Advertisement

ಅಮೀನಗಡ: ಮಳೆ ಬಂದ್ರೆ ಸೋರುವ ಸರ್ಕಾರಿ ಶಾಲೆ -ಪಾಲಕರ ಆಕ್ರೋಶ

04:42 PM Jul 28, 2023 | Team Udayavani |

ಅಮೀನಗಡ:ಮಳೆ ಬಂದ್ರೆ ಸೋರುವ ಸರ್ಕಾರಿ ಶಾಲೆ -ಪಾಲಕರ ಆಕ್ರೋಶ ಅಮೀನಗಡ: ಗುಡೂರಿನ ಉರ್ದು ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಮಳೆ ಬಂದರೆ ಸಾಕು ಸೋರುತ್ತದೆ. ಅಂತಹ ಶಿಥಿಲಾವಸ್ಥೆಯಲ್ಲೇ ಮಕ್ಕಳ ಭಯದ ಕಲಿಕೆ ಮುಂದುವರಿದಿದೆ.

Advertisement

ಹಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಮೇಲ್ಛಾವಣಿಯಿಂದ ನೀರು ಸುರಿಯುತ್ತಿದೆ.
ಈ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 60 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಏಳು ಕೊಠಡಿಗಳಿವೆ. ಅದರಲ್ಲಿ ಮೂರು ಕೊಠಡಿಗಳು ದುಸ್ಥಿತಿಯಲ್ಲಿದ್ದು, ಒಂದು ಕೊಠಡಿ ಆಫೀಸ್‌ ರೂಮ್‌ ಮಾಡಲಾಗಿದೆ. ಮೂರು ಕೊಠಡಿಗಳಲ್ಲಿ 1ರಿಂದ 7ನೇ ತರಗತಿಗಳವರೆಗೆ ಪಾಠ ಮಾಡಲಾಗುತ್ತಿದೆ. ಇದರಿಂದ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಲು ಶಿಕ್ಷಕರಿಗೆ ಸಮಸ್ಯೆಯಾಗಿದೆ.

ಕೊಠಡಿ ತುಂಬಾ ನೀರು: ಮಳೆ ಬಂದರೆ ಸರ್ಕಾರಿ ಉರ್ದು ಶಾಲೆಯಲ್ಲಿರುವ ಮೂರು ಕೊಠಡಿಗಳು ಸೋರುತ್ತವೆ. ಕೊಠಡಿಗಳ ಚಾವಣಿ, ಗೋಡೆ ಹೀಗೆ ಕಟ್ಟಡದ ಬಹುಭಾಗ ಮಳೆ ನೀರಿನಿಂದ ನೆನೆದು ದುರ್ಬಲವಾಗಿದೆ. ಕಟ್ಟಡದ ದುಸ್ಥಿತಿ ಕುರಿತು ಸಂಬಂಧಿಸಿದ ಅಧಿಕಾರಿಗಳು ಕಂಡೂ ಕಾಣದಂತೆ ಜಾಣತನ ಪ್ರದರ್ಶಿಸುತ್ತಿದ್ದಾರೆ.

ಶಿಥಿಲಗೊಂಡ ಕಟ್ಟಡ ಸರಿಪಡಿಸುವಂತೆ, ಬಹಳಷ್ಟು ಶಿಥಿಲಗೊಂಡ ಕೊಠಡಿ ನೆಲಸಮಗೊಳಿಸುವಂತೆ ಶಾಲೆಯ
ಮುಖ್ಯಗುರುಗಳು ಹಲವು ಬಾರಿ ಲಖೀತ ರೂಪದಲ್ಲಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನಮ್ಮ ಮಕ್ಕಳು ಶಿಥಿಲಾವಸ್ಥೆಯಲ್ಲಿರುವ ಕೊಠಡಿಯಲ್ಲಿ ಕುಳಿತು ಪಾಠ ಕೇಳಬೇಕಿದೆ. ಶಿಕ್ಷಕರು ಮಳೆ ಬಂದಾಗ ಅನೇಕ ಸಮಸ್ಯೆ ಎದುರಿಸಬೇಕಿದೆ. ಮಳೆ ಬಂದಾಗ ಕೇವಲ ಮಕ್ಕಳನ್ನು ನೋಡಿಕೊಳ್ಳುವುದೆ ಕೆಲಸವಾಗಿದೆ. ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಅಧಿಕಾರಿಗಳು ಕೂಡಲೇ ಶಾಲೆಯತ್ತ ಗಮನ ಹರಿಸಬೇಕು ಎಂಬುದು ಪೋಷಕರ ಒತ್ತಾಯ.

ಅಮೀನಗಡ ಶಾಲೇಲಿ ಅನ್ನ ಮಾಡಲೂ ಆಗಲ್ಲ !
ಗುಡೂರಿನ ಸರ್ಕಾರಿ ಉರ್ದು ಶಾಲೆಯ ಸ್ಥಿತಿ ಒಂದೆಡೆಯಾದರೆ, ಅಮೀನಗಡ ಪಟ್ಟಣದ ಈ ಶಾಲೆಯಲ್ಲಿ ಮಕ್ಕಳಿಗೆ ಬಿಸಿ ಊಟದ
ಅನ್ನ ಮಾಡಲೂ ಆಗದ ಸ್ಥಿತಿ ಇದೆ. ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 192 ಮಕ್ಕಳು ಅಧ್ಯಯನ ಮಾಡುತ್ತಿದ್ದು, ಶಾಲೆಯ ಬಿಸಿಯೂಟ ಅಡುಗೆ ತಯಾರಿ ಕೋಣೆ ನಿರಂತರ ಸೋರುತ್ತಿದೆ. ಹೀಗಾಗಿ ಅಡುಗೆಯವರು ಛತ್ರಿ ಹಿಡಿದು, ಮಕ್ಕಳಿಗೆ ಅನ್ನ-ಸಾಂಬಾರ ತಯಾರಿಸುವ ದುಸ್ಥಿತಿ ಇದೆ. ಸತತ ಮಳೆಯಿಂದ ಅಡುಗೆ ಕೋಣೆ ಮೇಲ್ಛಾವಣಿಯಿಂದ ಮಳೆ ನೀರು ಸುರಿಯುತ್ತಿದೆ. ಆದರು ಅಡುಗೆ ಮಾಡುವ ಸಿಬ್ಬಂದಿಗಳು ಛತ್ರಿ ಹಿಡಿದುಕೊಂಡು ಸೋರುವ ಕೋಣೆಯಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸುತ್ತಿದ್ದಾರೆ. ನೂರಾರು ವಿದ್ಯಾರ್ಥಿಗಳು ಕಲಿಯುವ ಶಾಲೆಯಲ್ಲಿ ಸೋರುತ್ತಿರುವ ಬಿಸಿ ಊಟ ತಯಾರಿಕೆಯ ಕೋಣೆ ಕಂಡು ಪಾಲಕರು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಅಮೀನಗಡ ಉರ್ದು ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಅಡುಗೆ ಕೋಣೆ ಸೋರುತ್ತಿರುವ ವಿಷಯ ಗಮನಕ್ಕೆ ಬಂದಿದೆ. ಇದರ ಬಗ್ಗೆ ಸ್ಥಳಿಯ ಪಪಂ ಹಾಗೂ ಹುನಗುಂದ ತಾಪಂ ಇಒ ಅವರಿಗೆ ಪತ್ರ ಬರೆಯುತ್ತೇನೆ. ಸ್ಥಳಕ್ಕೆ ಭೇಟಿ ನೀಡಿ ಎರಡ್ಮೂರು
ದಿನಗಳಲ್ಲಿ ಸಮಸ್ಯೆ ಬಗೆಹರಿಸುತ್ತೇನೆ.
ಬಿ.ಎಚ್‌.ತಿಳಿಗೋಡ,
ಅಕ್ಷರ ದಾಸೋಹ ಅಧಿಕಾರಿ, ಹುನಗುಂದ

ಗುಡೂರ (ಎಸ್‌.ಸಿ) ಗ್ರಾಮದ ಸರ್ಕಾರಿ ಉರ್ದು ಗಂಡು ಮಕ್ಕಳ ಶಾಲೆಯಲ್ಲಿ ಮಳೆ ಬಂದರೆ ಶಾಲೆಯ ಮೂರು ಕೊಠಡಿಗಳಲ್ಲಿ ನೀರು ಸುರಿಯುತ್ತಿವೆ. ಇದರಿಂದ ಶಾಲೆಯ ಗೋಡೆಗಳು ಬಿರುಕು ಬಿಟ್ಟಿವೆ. ಮಕ್ಕಳು ಭಯದಲ್ಲಿ ಪಾಠ ಕೇಳುವಂತಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ಕೂಡಲೇ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು.
ಮುಸ್ತಫಾ ಕೊಡಿಹಾಳ,
ಸದಸ್ಯರು, ಗ್ರಾಪಂ, ಗುಡೂರ

ಶಾಲೆಯ ಏಳು ಕೊಠಡಿಗಳಲ್ಲಿ ಮಳೆ ಬಂದರೆ ಎರಡು ಕೊಠಡಿಗಳಲ್ಲಿ ನೀರು ಸೋರುತ್ತದೆ. ಒಂದು ಕೊಠಡಿ ಸಂಪೂರ್ಣ ಶಿಥಿಲಗೊಂಡಿದೆ. ಇದರ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗದೆ. ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.
ಎಸ್‌.ಎಸ್‌. ಖಾದ್ರಿ,
ಪ್ರಭಾರಿ ಮುಖ್ಯಾಧ್ಯಾಪಕರು, ಗುಡೂರ

ಸಮಸ್ಯೆಯಿರುವ ಕೊಠಡಿ ಬಿಟ್ಟು ಮಕ್ಕಳನ್ನು ಸುರಕ್ಷಿತವಾದ ಕೊಠಡಿಗಳಲ್ಲಿ ಪಾಠ ಮಾಡಿ ಎಂದು ಮುಖ್ಯಗುರುಗಳಿಗೆ ಸೂಚನೆ ನೀಡಲಾಗಿದೆ. ಶಿಥಿಲಗೊಂಡಿರುವ ಕಟ್ಟಡಗಳ ಮತ್ತು ಸೋರುತ್ತಿರುವ ಶಾಲಾ ಕೊಠಡಿಗಳ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ. ಮತ್ತೂಮ್ಮೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುತ್ತೇವೆ.
ವೆಂಕಟೇಶ ಕೊಂಕಲ್‌,
ತಾಲೂಕು ಕೇತ್ರ ಶಿಕ್ಷಣಾಧಿಕಾರಿಗಳು, ಹುನಗುಂದ

*ಎಚ್‌.ಎಚ್‌.ಬೇಪಾರಿ

Advertisement

Udayavani is now on Telegram. Click here to join our channel and stay updated with the latest news.

Next