ಕುಳಗೇರಿ ಕ್ರಾಸ್: ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ, ಆಂಬ್ಯುಲೆನ್ಸ್ ಇದೆ, ಡ್ರೈವರ್‌ನೂ ಇದ್ದಾನೆ. ಆದರೆ ಈ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಹೌದು. ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಮಾರು ತಿಂಗಳ ಹಿಂದೆಯೇ ಹೊಸ ಆಂಬ್ಯುಲೆನ್ಸ್ ಕೊಟ್ಟಿದ್ದಾರೆ. ಆದರೆ ಅದು ತಾಲೂಕು ಆಸ್ಪತ್ರೆಯಲ್ಲೇ ನಿಂತಲ್ಲೇ ನಿಂತು ಬಿಸಿಲು-ಮಳೆಗೆ ತುಕ್ಕು ಹಿಡಿದು ಹಾಳಾಗಿ ಹೋಗುತ್ತಿದೆ. ಇನ್ನು ಇಲ್ಲಿಯ ಆರೋಗ್ಯ ಕೇಂದ್ರದಿಂದ ಪ್ರತಿ ತಿಂಗಳು ಸಂಬಳ ಪಡೆಯುತ್ತಿರುವ ಡ್ರೈವರ್ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.
ಗ್ರಾಮದ ಆರೋಗ್ಯ ಕೇಂದ್ರಕ್ಕೆ ನಿತ್ಯ ನೂರಾರು ರೋಗಿಗಳು ಸೇರಿದಂತೆ ಸಾಕಷ್ಟು ಗರ್ಭಿಣಿಯರು ತಪಾಸಣೆಗೆಂದು ಬರುತ್ತಾರೆ. ಹೆಚ್ಚಿನ ಚಿಕಿತ್ಸೆಗೆಂದು ಬೇರೆಡೆ ಹೋಗಲು ಆಂಬ್ಯುಲೆನ್ಸ್ ಇಲ್ಲದ ಕಾರಣ ಸಾಕಷ್ಟು ಜನರಿಗೆ ತೀವ್ರ ತೊಂದರೆಯಾಗಿದೆ. ಬಡ ಜನರು ಬಾಡಿಗೆ ವಾಹನ ಪಡೆದು ತಾಲೂಕು, ಜಿಲ್ಲಾ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ಬಂದೊದಗಿದೆ. ಹೀಗಾಗಿ ಬಡಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ.
ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಹಳ ವರ್ಷಗಳಿಂದ ಬಹಳ ವರ್ಷಗಳಿಂದ ಆಂಬ್ಯುಲೆನ್ಸ್ ಬೇಡಿಕೆ ಇತ್ತು. ಹಿಂದೆ ಈ ಮತಕ್ಷೇತ್ರದ ಶಾಸಕರಾಗಿದ್ದ ಸಿದ್ದರಾಮಯ್ಯ ಅವರು ಈ ಆರೋಗ್ಯ ಕೇಂದ್ರಕ್ಕೆ ಆಂಬ್ಯುಲೆನ್ಸ್ ನೀಡುವ ಮೂಲಕ ಉದ್ಘಾಟಿಸಿ ಜನರ ಬೇಡಿಕೆ ಈಡೇರಿಸಿದ್ದರು.ಆದರೆ ಈ ಆಂಬ್ಯುಲೆನ್ಸ್ ಈಗ ಇಲ್ಲಿಲ್ಲ, ಇದರ ಚಾಲಕ ಸಹ ಇಲ್ಲಿಲ್ಲ. ಈ ಆರೋಗ್ಯ ಕೇಂದ್ರದಿಂದ ವೇತನ ಪಡೆಯುವ ಚಾಲಕ ಅಧಿಕಾರಿಯೊಬ್ಬರ ಜೀಪ್ ಚಾಲಕನಾಗಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಜನರು ಪ್ರಶ್ನಿಸಿದ್ದಾರೆ.
ಸೌಲಭ್ಯ ದುರುಪಯೋಗ ಪಡಿಸಿಕೊಂಡು ಸಾರ್ವಜನಿಕರ ಆರೋಗ್ಯ ಜತೆ ಆಟವಾಡುತ್ತಿರುವ ಅಧಿಕಾರಿಗಳು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಸಮಸ್ಯೆ ಶೀಘ್ರ ಸರಿಪಡಿಸದಿದ್ದರೆ ಆಸ್ಪತ್ರೆಗೆ ಬೀಗ ಹಾಕಿ ಪ್ರತಿಭಟಿಸುವುದಾಗಿ ಸಾರ್ವಜನಿಕರು ಎಚ್ಚರಿಕೆ
ನೀಡಿದ್ದಾರೆ.
6 ತಿಂಗಳ ಹಿಂದೆ ಆಂಬ್ಯುಲೆನ್ಸ್ ಬಂದು ನಿಂತಿದೆ. ರೋಗಿಗಳಿಗೆ ಆಗುತ್ತಿರುವ ತೊಂದರೆ ಕುರಿತು ಸಾಕಷ್ಟು ಬಾರಿ ಮೇಲಧಿ ಕಾರಿಗಳಿಗೆ ತಿಳಿಸಿದ್ದೇನೆ. ಇಒ ಅವರಿಗೆ ಲಿಖಿತವಾಗಿ ಸಾಕಷ್ಟು ಬಾರಿ ವಿನಂತಿಸಿದರೂ ಸ್ಪಂದಿಸಿಲ್ಲ. ಆಂಬ್ಯುಲೆನ್ಸ್ ಬಿಸಿಲು-ಮಳೆಗೆ ಹಾಳಾಗುತ್ತಿದೆ. ಪ್ರತಿ ದಿನ ಡೀಸೆಲ್ ಹಾಕಿ ನಿಂತಲ್ಲೇ ಸ್ಟಾರ್ಟ್ ಮಾಡಿ ಎಂಜಿನ್ ಹಾಳಾಗದಂತೆ ನೋಡಿಕೊಳ್ಳುತ್ತಿದ್ದೇನೆ.
*ಮಲ್ಲಿಕಾರ್ಜುನ ಪಾಟೀಲ,
ತಾಲೂಕು ಆರೋಗ್ಯ ಅಧಿಕಾರಿ
ನಮಗೆ ಕಾಯಂ ಚಾಲಕ ಇದ್ದಿರಲಿಲ್ಲ. ಆರೋಗ್ಯ ಕೇಂದ್ರದಲ್ಲಿ ಖಾಲಿ ಇದ್ದ ಚಾಲಕನನ್ನು ಜಿಪಂ ಸಿಇಒ ಆದೇಶದ ಮೇರೆಗೆ ತಾತ್ಕಾಲಿಕವಾಗಿ ನಮಗೆ ಕಳುಹಿಸಿದ್ದರು. ಟಿಎಚ್‌ಒ ವಾಪಸ್ ಕಳಿಸಿ ಎಂದು ಕೇಳಿದ್ದಾರೆ. ಮೇಲಾಧಿಕಾರಿಗಳಿಗೆ ಲಿಖಿತವಾಗಿ
ರಿಲೀವ್ ಮಾಡಿ ಎಂದು ತಿಳಿಸಿದ್ದೇನೆ. ನಾನು ಟ್ರೇನಿಂಗ್‌ನಲ್ಲಿ ಇರುವೆ. ಸದ್ಯದಲ್ಲೇ ಆರೋಗ್ಯ ಕೇಂದ್ರದ ಚಾಲಕನನ್ನು ವಾಪಸ್ ಕಳಿಸುತ್ತೇನೆ.
ಮಲ್ಲಿಕಾರ್ಜುನ ಕಲಾದಗಿ,
ತಾಪಂ ಇಒ, ಬಾದಾವಿ
*ಮಹಾಂತಯ್ಯ ಹಿರೇಮಠ