ಮೊಳಕಾಲ್ಮೂರು: ಆಂಬ್ಯುಲೆನ್ಸ್ ಕೊರತೆಯಿಂದ ಕೋವಿಡ್ ಸೋಂಕಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಪಟ್ಟಣದಲ್ಲಿ ಗುರುವಾರ ನಡೆದಿದೆ. ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್‌ಗಾಗಿ ಬಂದಿದ್ದ ಪಟ್ಟಣದ ಭಾಗ್ಯಜ್ಯೋತಿ ನಗರದ ನಿವಾಸಿ ಎಸ್.ಕೆ.ಎಂ. ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ 63 ವರ್ಷದ ವ್ಯಕ್ತಿ ಕೋವಿಡ್ ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ಕೊರತೆಯಿಂದ ಅಸ್ವಸ್ಥನಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ.
ಮೃತ ವ್ಯಕ್ತಿ ಸೇರಿ ಆ ಕುಟುಂಬದ ಮೂವರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಸೋಂಕಿತರನ್ನು ರಾಂಪುರ ಹಾಗೂ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಒಟ್ಟಿಗೆ 3-4 ಸೋಂಕಿತರನ್ನು ಆಂಬ್ಯುಲೆನ್ಸ್‌ನಲ್ಲಿ ಸಾಗಿಸಲಾಗುತ್ತಿರುವುದರಿಂದ ಗಂಭೀರ ಸ್ಥಿತಿಯಲ್ಲಿರುವ ಮೃತ ವ್ಯಕ್ತಿಯನ್ನು ತಕ್ಷಣ ಕಳುಹಿಸಲಾಗಲಿಲ್ಲ. ಈ ಮೃತ ಸೋಂಕಿತ ವ್ಯಕ್ತಿಯನ್ನು ಕೂಡಲೇ ಕೋವಿಡ್ ಆಸ್ಪತ್ರೆಗೆ ಕಳುಹಿಸದೆ ಹಾಗೂ ಸ್ಥಳದಲ್ಲಿದ್ದ ವೈದ್ಯರು ಯಾವುದೇ ಚಿಕಿತ್ಸೆ ನೀಡದ ಕಾರಣ ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ ಸಂಭವಿಸಲಾಗಿದೆ.
ಘಟನೆ ತಿಳಿಯುತ್ತಿದ್ದಂತೆಯೇ ಅಪಾರ ಬಂಧುಗಳು ಮತ್ತು ಪಟ್ಟಣದ ನಾಗರಿಕರು ಜಮಾಯಿಸಿ ತಾಲೂಕು ಆರೋಗ್ಯಾಧಿಕಾರಿ, ಆಡಳಿತ ವೈದ್ಯಾಧಿಕಾರಿ, ವೈದ್ಯರು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪಿಎಸ್‌ಐ ಎಂ.ಕೆ.ಬಸವರಾಜ್ ಹಾಗೂ ಸಿಬ್ಬಂದಿ ಮತ್ತು ಬಿ.ಜೆ.ಪಿ ಮಂಡಲಾಧ್ಯಕ್ಷ ಡಾ.ಪಿ.ಎಂ.ಮಂಜುನಾಥ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ತಿಲಕ್ ಬಡಾವಣೆಯ ಯುವ ಮುಖಂಡ ರಾಘವೇಂದ್ರ ಮಾತನಾಡಿ, ಜನವರಿಯಲ್ಲಿ ಮೃತ ಸೋಂಕಿತನ ಮಗನಿಗೂ ರಸ್ತೆ ಅಪಘಾತವಾದಾಗ ಆಂಬ್ಯುಲೆನ್ಸ್ ಕೊರತೆಯಿಂದ ಮೃತಪಟ್ಟಿದ್ದ. ಆಗ ಈ ಆಸ್ಪತ್ರೆಗೆ ಆಂಬ್ಯುಲೆನ್ಸ್ ಸೌಲಭ್ಯ ಕಲ್ಪಿಸಬೇಕೆಂದು ಪ್ರತಿಭಟನೆ ನಡೆಸಿ ದ್ದರೂ ಆಡಳಿತಾಧಿಕಾರಿ ನಿರ್ಲಕ್ಷ್ಯ ವಹಿಸಿ ಸಚಿವ ಬಿ.ಶ್ರೀರಾಮುಲು ಬಳಿ ಯಾವುದೇ ಕೊರತೆಯಿಲ್ಲವೆಂದು ಸುಳ್ಳು ವರದಿ ನೀಡಿ ಈ ಆಸ್ಪತ್ರೆಗೆ ಸಿಗುವ ಸೌಲಭ್ಯವನ್ನು ವಂಚಿಸಿ ಬಡಜನತೆಗೆ ಅನ್ಯಾಯವೆಸಗುತ್ತಿದ್ದಾರೆ ಎಂದು ಆರೋಪಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಸುಧಾ ಮಾತನಾಡಿ, ತಾಲೂಕಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಹೆಚ್ಚಿನ ಆಂಬ್ಯುಲೆನ್ಸ್ ಸೌಲಭ್ಯ ಅವಶ್ಯಕತೆ ಇದೆ. ದೂರದ ಕೋವಿಡ್ ಆಸ್ಪತ್ರೆಗೆ ಕಳುಹಿಸುವ ಬದಲು ಪಟ್ಟಣದಲ್ಲಿಯೇ ಕೋವಿಡ್ ಆಸ್ಪತ್ರೆಗೆ ಅವಕಾಶ ಕಲ್ಪಿಸಿದ್ದಲ್ಲಿ ಇಂತಹ ಅವಘಡ ತಪ್ಪಿಸಬಹುದಾಗಿದೆ ಎಂದರು.