Advertisement

ಶೀಘ್ರ ಅಂಗಾಂಗ ರವಾನೆಗೆ ಚಾಲಕರಿಂದಲೇ ಪೂರಕ ವ್ಯವಸ್ಥೆ: ಝೀರೋ ಟ್ರಾಫಿಕ್‌

01:49 AM Jul 28, 2022 | Team Udayavani |

ಉಡುಪಿ: ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಅಂಗಾಂಗಗಳ ರವಾನೆಗೆ ಆ್ಯಂಬುಲೆನ್ಸ್‌ ಚಾಲಕರೇ ಸೇರಿಕೊಂಡು “ಆ್ಯಂಬುಲೆನ್ಸ್‌ ರೋಡ್‌ ಸೇಫ್ಟಿ ವಿಂಗ್‌’ ರಚಿಸಿದ್ದಾರೆ.

Advertisement

ರಾಜ್ಯದ 250ರಿಂದ 300 ಚಾಲಕರು ಇದರ ಸದಸ್ಯರಾಗಿದ್ದಾರೆ. ಈ ಸಂಘ ಅಧಿಕೃತವಾಗಿ ನೋಂದಣಿ ಯಾಗಬೇಕಿದೆ.

ಅಂಗಾಂಗ ದಾನದ ಬಗ್ಗೆ ರೋಗಿಗಳು ನಿರ್ಧರಿಸಿದಂತೆ ಆಯಾ ಆಸ್ಪತ್ರೆಗಳು ವ್ಯವಸ್ಥೆ ಕಲ್ಪಿಸುತ್ತವೆ. ಕೆಲವೇ ನಿಮಿಷ ಅಥವಾ ಗಂಟೆಗಳ ಅಂತರದಲ್ಲಿ ಮತ್ತೊಂದು ಆಸ್ಪತ್ರೆಗೆ ತಲುಪಿಸುವ ಅನಿವಾರ್ಯ ಇರುತ್ತದೆ. ಅಂತಹ ಸಂದರ್ಭದಲ್ಲಿ ಆಸ್ಪತ್ರೆಯವರು ಪೊಲೀಸ್‌ ಇಲಾಖೆಯ ಸಹಕಾರ ಪಡೆದು ಝೀರೋ ಟ್ರಾಫಿಕ್‌ ಮೂಲಕ ರವಾನಿಸುವ ವ್ಯವಸ್ಥೆ ಕಲ್ಪಿಸುತ್ತಿ ದ್ದರು. ಕೆಲವು ಬಾರಿ ಸಮನ್ವಯದ ಕೊರತೆ ಹಾಗೂ ಅನುಮತಿ ವಿಳಂಬದಿಂದಾಗಿ ಝೀರೋ ಟ್ರಾಫಿಕ್‌ ಸಾಧ್ಯವಾಗುತ್ತಿಲ್ಲ. ಅಂಥ ಸಂದರ್ಭದಲ್ಲಿ ಟ್ರಾಫಿಕ್‌ ನಡುವೆಯೇ ರವಾನಿಸಲಾಗುತ್ತಿದೆ.

ಕಾರ್ಯನಿರ್ವಹಣೆ ಹೇಗೆ?
ರೋಗಿಯ ಮನೆಯವರು ಅಂಗಾಂಗ ದಾನಕ್ಕೆ ನಿರ್ಧರಿಸಿದರೆ ಆಸ್ಪತ್ರೆಯವರ ಸೂಚನೆಯಂತೆ ಆ್ಯಂಬುಲೆನ್ಸ್‌ ಚಾಲಕರೇ ಝೀರೋ ಟ್ರಾಫಿಕ್‌ಗೆ ಬೇಕಿರುವ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸುತ್ತಾರೆ. ಈ ವಿಂಗ್‌ನಲ್ಲಿ ಬೆಂಗಳೂರು ಟ್ರಾಫಿಕ್‌ ಪೊಲೀಸ್‌ ಕಮಿಷನರ್‌ ಹಾಗೂ ಆಯಾ ಜಿಲ್ಲೆಗಳ ಟ್ರಾಫಿಕ್‌ ಉಸ್ತುವಾರಿಗಳು ಇರುತ್ತಾರೆ. ಅವರ ಮೂಲಕ ಕ್ಷಣಾರ್ಧದಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇದು ಖಾಸಗಿ ಮತ್ತು ಸರಕಾರಿ ಎರಡೂ
ಆ್ಯಂಬುಲೆನ್ಸ್‌ಗಳಿಗೂ ಸಹಕಾರಿ.

ಶೀಘ್ರದಲ್ಲೇ ನೋಂದಣಿ
ಆ್ಯಂಬುಲೆನ್ಸ್‌ ಚಾಲಕರೇ ಸೇರಿಕೊಂಡು ಮಾಡಿರುವ “ಆ್ಯಂಬುಲೆನ್ಸ್‌ ರೋಡ್‌ ಸೇಫ್ಟಿ ವಿಂಗ್‌’ನ ನೋಂದಣಿ ಕಾರ್ಯ ಸದ್ಯದಲ್ಲಿಯೇ ನಡೆಯಲಿದೆ. ಅಂಗಾಂಗ ದಾನದಂತಹ ಪ್ರಕ್ರಿಯೆಗಳು ರಾಜ್ಯದಲ್ಲಿ ತಿಂಗಳಿಗೆ ಸರಾಸರಿ 5ರಿಂದ 6 ಪ್ರಕರಣಗಳಷ್ಟೇ ನಡೆಯುತ್ತಿವೆ. ಉಳಿದಂತೆ ಅಸ್ವಸ್ಥಗೊಂಡ ಮಕ್ಕಳಿಗೆ ತುರ್ತು ಚಿಕಿತ್ಸೆ ನೀಡಲು ಹಾಗೂ ತೀರ ಗಂಭೀರ ಪ್ರಕರಣಗಳಿಗೆ ಈ ವಿಂಗ್‌ ಅನ್ನು ಬಳಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ನೋಂದಣಿ ಸಂದರ್ಭದಲ್ಲಿ ಪರಿಶೀಲಿಸಲಾಗುವುದು ಎಂದು ಸದಸ್ಯರು ತಿಳಿಸಿದ್ದಾರೆ.

Advertisement

ತುರ್ತು ಅಂಗಾಂಗ ದಾನಕ್ಕಷ್ಟೇ ಈ ಸೇವೆ
ಶವ ಸಾಗಾಟ ಅಥವಾ ರೋಗಿಯ ಸ್ಥಳಾಂತರ ಪ್ರಕ್ರಿಯೆ ಸಾಮಾನ್ಯ ರೀತಿಯಲ್ಲಿಯೇ ನಡೆಯುತ್ತದೆ. ಜಿಲ್ಲೆಯಿಂದ ಜಿಲ್ಲೆಗೆ ಅಥವಾ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಂಗಾಂಗಗಳನ್ನು ರವಾನಿಸುವ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ “ಆ್ಯಂಬುಲೆನ್ಸ್‌ ರೋಡ್‌ ಸೇಫ್ಟಿ ವಿಂಗ್‌’ ಕಾರ್ಯಾಚರಿಸುತ್ತದೆ ಎನ್ನುತ್ತಾರೆ ಸದಸ್ಯರಾಗಿರುವ ಮಣಿಪಾಲದ ಅನಿಲ್‌.

ಮಹಾನಗರ ಹಾಗೂ ನಗರಗಳ ಸಂಚಾರ ದಟ್ಟಣೆಯಲ್ಲಿ ಆ್ಯಂಬುಲೆನ್ಸ್‌ಗಳು ಸಿಲುಕಿಕೊಳ್ಳುವ ಹಲವಾರು ಘಟನೆಗಳು ನಡೆಯುತ್ತಿವೆ. ತುರ್ತು ಸಂದರ್ಭ ಹಾಗೂ ಅಂಗಾಂಗಗಳನ್ನು ನಿರ್ದಿಷ್ಟ ಅವಧಿಯೊಳಗೆ ತಲುಪಿಸುವ ಅನಿವಾರ್ಯ ಇದ್ದಾಗ ಸಂಚಾರದ ಅಡೆತಡೆಗಳನ್ನು ನಿವಾರಿಸುವ ಉದ್ದೇಶದಿಂದ ಈ ವಿಂಗ್‌ ರಚಿಸಲಾಗಿದೆ. ಇದರಿಂದ ತ್ವರಿತಗತಿಯ ಸಂಚಾರ ಸಾಧ್ಯವಾಗಲಿದೆ.
– ಹನೀಫ್, ಸ್ಥಾಪಕರು,
ಆ್ಯಂಬುಲೆನ್ಸ್‌ ರೋಡ್‌ ಸೇಫ್ಟಿ ವಿಂಗ್‌

ದಾನ ಮಾಡಿರುವ ಅಂಗಾಂಗ ಸಾಗಾಟದ ಬಗ್ಗೆ ವೈದ್ಯಾಧಿಕಾರಿಗಳು ಪೊಲೀಸ್‌ ವರಿಷ್ಠಾಧಿಕಾರಿಯವರ ಗಮನಕ್ಕೆ ತರಬೇಕಾಗುತ್ತದೆ. ಅವರ ಸೂಚನೆಯಂತೆ ಆ್ಯಂಬುಲೆನ್ಸ್‌ ತಲುಪುವ ಮಾರ್ಗದ ಆಧಾರದ ಮೇಲೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು.
– ಅಬ್ದುಲ್‌ ಖಾದರ್‌, ಟ್ರಾಫಿಕ್‌ ಎಸ್‌ಐ, ಉಡುಪಿ

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next