ಬೀದರ: ಜಾನುವಾರುಗಳಲ್ಲಿ ಎದುರಾಗುವ ಅರೋಗ್ಯ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಿ, ಮೂಕ ರೋಧನೆ ತಪ್ಪಿಸಲು ಸರ್ಕಾರ ಜಾರಿಗೊಳಿಸಿರುವ “ಪಶು ಸಂಜೀವಿನಿ’ ಸೇವೆಗೆ ಗಡಿ ಜಿಲ್ಲೆ ಬೀದರನಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ರೈತರ ಮನೆ ಬಾಗಿಲಿಗೆ ಪಶು ವೈದ್ಯಕೀಯ ಸೇವೆ ನೀಡುತ್ತಿರುವ ಪಶು ಶಸ್ತ್ರ ಚಿಕಿತ್ಸಾ ವಾಹನ ಪಶು ಪಾಲಕರಿಗೆ “ಸಂಜೀವಿನಿ’ಯಾಗಿಯೇ ಪರಿಣಿಮಿಸುತ್ತಿದೆ.
ರೋಗಗ್ರಸ್ಥ ಜಾನುವಾರುಗಳಿಗೆ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ದೂರದ ಪಶು ಆಸ್ಪತ್ರೆಗಳಿಗೆ ಸಾಗಿಸಲು ರೈತರಿಗೆ ಅನಾನುಕೂಲದ ಜತೆಗೆ ಆರ್ಥಿಕ ಹೊರೆ ಆಗುತ್ತಿದ್ದು, ಸಮಯಕ್ಕೆಚಿಕಿತ್ಸೆ ಲಭ್ಯವಾಗದೇ ಅಸುನೀಗುತ್ತಿವೆ.ಇದನ್ನು ತಪ್ಪಿಸಿ ತುರ್ತು ಆರೋಗ್ಯ ಸೇವೆಒದಗಿಸಲು ಸರ್ಕಾರ ಬೀದರ ಸೇರಿರಾಜ್ಯದ 15 ಜಿಲ್ಲೆಗಳಲ್ಲಿ ತಲಾ ಒಂದರಂತೆ ಪಶು ಸಂಜೀವಿನಿ ಅಂಬ್ಯುಲೆನ್ಸ್ ಸೇವೆ ಜಾರಿಗೊಳಿಸಿದೆ. ಬೀದರ ಜಿಲ್ಲೆಯಲ್ಲಿ ಕಳೆದನಾಲ್ಕು ತಿಂಗಳಲ್ಲಿ ಕಾಯಿಲೆಗಳಿಗೆ ತುತ್ತಾಗಿದ್ದ 40ಕ್ಕೂ ಹೆಚ್ಚು ಜಾನುವಾರುಗಳ ಆರೋಗ್ಯ ರಕ್ಷಣೆ ಮಾಡಿದೆ. ರೈತರ ಮನೆ ಬಾಗಿಲಿಗೆ ತೆರಳಿ ಅವಶ್ಯಕ ಹಾಗೂ ತುರ್ತು ಚಿಕಿತ್ಸೆ ಒದಗಿಸಿದೆ.
ಅಂಬ್ಯುಲೆನ್ಸ್ ವಿಶೇಷತೆಗಳು: ಸುಸಜ್ಜಿತ ಅಂಬ್ಯುಲೆನ್ಸ್ ವಾಹನ ಆಧುನಿಕ ಪಶುವೈದ್ಯಕೀಯ ಸೇವೆಗಳಾದ ಶಸ್ತ್ರ ಚಿಕಿತ್ಸಾ ಘಟಕ,ಪ್ರಯೋಗಶಾಲೆ, ಸ್ಕ್ಯಾನಿಂಗ್ ಉಪಕರಣಅಳವಡಿಸಲಾಗಿದೆ. ಪ್ರಸೂತಿ ಮತ್ತು ಶಸ್ತ್ರಚಿಕಿತ್ಸಾ ಉಪಕರಣಗಳ ಕಿಟ್, ಮರಣೋತ್ತರಪರೀಕ್ಷೆ ಉಪಕರಣಗಳ ಕಿಟ್, ವಾಶ್‌ಬೇಸಿನ್, ಆಮ್ಲಜನಕ ಸಪೋರ್ಟ್ ಸಿಸ್ಟಮ್‌ಒಳಗೊಂಡಿದ್ದು, ಪ್ರತಿ ಪಾಲಿಕ್ಲಿನಿಕ್‌ನ ಒಬ್ಬರು ಶಸ್ತ್ರ ಚಿಕಿತ್ಸಾ ತಜ್ಞರು ಮತ್ತು ಸಹಾಯಕರನ್ನುನೇಮಕ ಮಾಡಲಾಗಿದೆ. ಪಶು ಪಾಲಕರುಸಹಾಯವಾಣಿ ಸಂಖ್ಯೆ-1962ಕ್ಕೆ ಕರೆಮಾಡಿದರೆ ರೋಗಗ್ರಸ್ತ ಜಾನುವಾರು ಸ್ಥಳಕ್ಕೆ ವಾಹನ ತೆರಳಿ ವೈದ್ಯಕೀಯ ಸೇವೆ ನೀಡಲಿದೆ. ವಿಷಪ್ರಾಶನ, ಪ್ರಸವಕ್ಕೆ ಸಂಬಂಧಿ ಸಿದ ತೊಂದರೆಗಳು, ಹೊಟ್ಟೆಯುಬ್ಬರ, ಉಸಿರುಗಟ್ಟುವುದು, ಅಪಘಾತ,ಮೂಳೆಮುರಿತ ಸೇರಿದಂತೆ ಇನ್ನಿತರೆಆರೋಗ್ಯ ಸಮಸ್ಯೆಗಳಿಗೆ ಜಾನುವಾರುಗಳನ್ನುವಾಹನದಲ್ಲಿ ಹಾಕಿಕೊಂಡು ಹೋಗಿ ಚಿಕಿತ್ಸೆಪಡೆಯುವ ಸಮಸ್ಯೆಗಳಿಗೆ ಪರಿಹಾರಸಿಕ್ಕಂತಾಗಿದೆ. ಈ ಮೂಲಕ ಜಾನುವಾರುಗಳ ಪ್ರಾಣ ಹಾನಿ ಆಗುವುದನ್ನು ತಡೆಗಟ್ಟಿ ರೈತರಿಗೆ ಎದುರಾಗುವ ಆರ್ಥಿಕ ಸಂಕಷ್ಟ ತಪ್ಪಿಸಲು ಅನುಕೂಲ ಆಗುತ್ತಿದೆ.
ಬೀದರ, ರಾಯಚೂರು, ಕಲುಬುರ್ಗಿ, ಧಾರವಾಡ, ವಿಜಯಪುರ, ಬೆಳಗಾವಿ,ಮಂಗಳೂರು, ಹಾಸನ, ಮಂಡ್ಯ, ಮೈಸೂರು,ಶಿವಮೊಗ್ಗ, ಚಿತ್ರದುರ್ಗ, ಯಾದಗಿರಿ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ಪಶುವೈದ್ಯಕೀಯ ಪಾಲಿಕ್ಲಿನಿಕ್‌ಗಳಿಗೆ ನೀಡಲಾಗಿದೆ. ಸದ್ಯ ರಾಜ್ಯದ 15 ಜಿಲ್ಲೆಗಳಲ್ಲಿ “ಪಶು ಸಂಜೀವಿನಿ’ ಕಾರ್ಯಾರಂಭ ಮಾಡಲಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಇತರಜಿಲ್ಲೆಗಳಿಗೆ ಈ ಸೇವೆಯನ್ನು ವಿಸ್ತರಿಸುವ ಸಾಧ್ಯತೆ ಇದೆ.
“ವೈದ್ಯ ಸಿಬ್ಬಂದಿ ನೇಮಿಸಲಿ’ :
ಜಾನುವಾರುಗಳ ತುರ್ತು ಆರೋಗ್ಯ ಸೇವೆಗಾಗಿ ಪಶು ಸಂಜೀವಿನಿ ಜಾರಿಗೊಳಿಸಿರುವ ಸರ್ಕಾರ, ಚಿಕಿತ್ಸೆಗೆ ಅಗತ್ಯವಾಗಿರುವ ವೈದ್ಯ ಸಿಬ್ಬಂದಿಗಳ ನೇಮಕದಲ್ಲಿ ನಿರ್ಲಕ್ಷ ವಹಿಸಿದೆ. ಸದ್ಯ ಪಾಲಿಕ್ಲಿನಿಕ್‌ನ ಸಿಬ್ಬಂದಿಗಳನ್ನೇ ನಿಯುಕ್ತಿ ಮಾಡಿರುವುದರಿಂದ ರೈತರಿಗೆ 24×7 ಚಿಕಿತ್ಸೆ ಸೌಲಭ್ಯ ಕಲ್ಪಿಸಲು ಅಡ್ಡಿಯಾಗುತ್ತಿದೆ. ಪಶುಗಳಿಗೆ ಸಮಯಕ್ಕೆ ಚಿಕಿತ್ಸೆ ಸೌಲಭ್ಯ ಸಿಗದಂತಾಗಿದೆ. ಪಶು ಸಂಜೀವಿನಿ ವಾಹನಗಳಿಗೆ ಪ್ರತ್ಯೇಕ ಶಸ್ತ್ರ ಚಿಕಿತ್ಸಾ ತಜ್ಞರು, ಸಹಾಯಕರ ಜತೆಗೆ ಅಗತ್ಯ ಚಾಲಕರ ನೇಮಕಾತಿಯ ಅಗತ್ಯವಿದೆ.
ಪಶು ಸಂಜೀವಿನಿ ಅಂಬ್ಯುಲೆನ್ಸ್ ಸೇವೆಗೆ ಬೀದರ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ರೈತರು, ಪಶು ಪಾಲಕರಿಗೆ ಹೆಚ್ಚು ಅನುಕೂಲ ಆಗುತ್ತಿದೆ. ರೋಗಗ್ರಸ್ತ ಜಾನುವಾರುಗಳನ್ನು ಪಶು ಆಸ್ಪತ್ರೆಗೆ ತರಬೇಕಾದರೆ 2-3 ಸಾವಿರ ರೂ. ವೆಚ್ಚವಾಗುತ್ತದೆ. ಈಗ ರೋಗಪೀಡಿತ ಜಾನುವಾರುಗಳ ಸ್ಥಳಕ್ಕೆ ತಜ್ಞ ವೈದ್ಯರು ಮತ್ತು ಉಪಕರಣಗಳನ್ನು ಒಳಗೊಂಡ ವಾಹನ ತೆರಳಿ ಚಿಕಿತ್ಸಾ ಸೇವೆ ನೀಡುತ್ತಿದೆ.
– ಡಾ| ರವೀಂದ್ರ ಭೂರೆ, ಪ್ರಭಾರ ಉಪ ನಿರ್ದೇಶಕರು ಪಶು ಪಾಲಿಕ್ಲಿನಿಕ್, ಬೀದರ
ಶಶಿಕಾಂತ ಬಂಬುಳಗೆ