ಮೈಸೂರು: ನಟ ಪುನೀತ್ ರಾಜಕುಮಾರ್ ಸ್ಮರಣಾರ್ಥ ಸಾಮಾಜಿಕ ಸೇವಾ ಕಾರ್ಯವನ್ನು ನಟ ಪ್ರಕಾಶ್‌ರೈ ಆರಂಭಿಸಿದ್ದಾರೆ.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿನ ಮಿಷನ್ ಆಸ್ಪತ್ರೆಗೆ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಪ್ರಕಾಶ್ ರಾಜ್ ಫೌಂಡೇಷನ್‌ನಿಂದ ಸುಸಜ್ಜಿತ ಆ್ಯಂಬುಲೆನ್ಸ್ ಅನ್ನು ಕೊಡುಗೆಯಾಗಿ ನೀಡಿದರು. ರಾಜ್ಯದ ಎಲ್ಲಾ 32 ಜಿಲ್ಲೆಗಳಲ್ಲಿ ಹೀಗೆ ಆ್ಯಂಬುಲೆನ್ಸ್‌ಅನ್ನು ಕೊಡುಗೆಯಾಗಿ ನೀಡುವ ಉದ್ದೇಶವಿದೆ ಎಂದು ತಿಳಿಸಿದರು.
ಪುನೀತ್ ರಾಜಕುಮಾರ್ ನಿಧನರಾದಾಗ ರಾಜ್ಯ ಕಣ್ಣೀರಿಟ್ಟಿತು. ಅನಾಥ ಪ್ರಜ್ಞೆ ನಮ್ಮನ್ನು ಕಾಡಿತು. ಅಪ್ಪು ಎಂದೆಂದಿಗೂ ನಮ್ಮ ಜೊತೆ ಇರುತ್ತಾರೆ. ಅಪ್ಪು ಅವರನ್ನು ಬಾಲ್ಯದಿಂದ ನೋಡಿದ್ದೇನೆ. ಎತ್ತರಕ್ಕೆ ಬೆಳೆದ ವ್ಯಕ್ತಿಯನ್ನು ಕಳೆದುಕೊಂಡು ಸಮಾಜಕ್ಕೆ ಬಹಳ ನಷ್ಟವಾಗಿದೆ ಎಂದು ಹೇಳಿದರು. ಕೋವಿಡ್ ಸಮಯದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದೆ. ಆ ಸಮಯದಲ್ಲಿ ಅಪ್ಪು ಅವರು ಕರೆ ಮಾಡಿ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ಎರಡು ಲಕ್ಷ ರೂ. ಅನ್ನು ನಮ್ಮ ಫೌಂಡೇಷನ್‌ಗೆ ಕೊಡುಗೆ ಯಾಗಿ ನೀಡಿದರು.
ಈ ವಿಚಾರವನ್ನು ಎಲ್ಲಿಯೂ ಹೇಳಿಕೊಳ್ಳಲಿಲ್ಲ. ಅಪ್ಪು ಮಾಡುತ್ತಿದ್ದ ಕೆಲಸವನ್ನು ನಾವು ಮುಂದುವರಿಸಿಕೊಂಡು ಹೋಗಬೇಕು. ಬಡವರಿಗಾಗಿ ಆ್ಯಂಬುಲೆನ್ಸ್ ಕೊಡಲು ನಿರ್ಧರಿಸಿದ್ದೇವೆ. ಇದು ಕೇವಲ ಆರಂಭ ಎಂದು ಪ್ರಕಾಶ್ ರೈ ಹೇಳಿದರು. ಮೈಸೂರಿನ ಮಿಷನ್ ಆಸ್ಪತ್ರೆ ಆವರಣದಲ್ಲಿ ಬ್ಲಿಡ್ ಬ್ಯಾಂಕ್ ನಿರ್ಮಿಸಲು ನಿರ್ಧರಿಸಿದ್ದೇವೆ. ಈ ರೀತಿ ಸಮಾಜಮುಖಿ ಕೆಲಸಗಳ ಮೂಲಕ ಅಪ್ಪು ಮಾಡಿದ ಕೆಲಸಗಳಿಗೆ ಧನ್ಯವಾದವನ್ನು ಹೇಳಬೇಕಿದೆ. ಅಪ್ಪು ವ್ಯಕ್ತಿತ್ವವನ್ನು ನಮ್ಮೊಳಗೆ ಬೆಳೆಸಿಕೊಳ್ಳಬೇಕಿದೆ ಎಂದರು.
ನಿರ್ದೇಶಕ ಸಂತೋಷ ಆನಂದರಾಮ್ ಪತ್ರಿಕಾಗೋಷ್ಠಿಯಲ್ಲಿದ್ದರು.