Advertisement

ಮಹತ್ವಾಕಾಂಕ್ಷೆ

08:15 AM Feb 11, 2018 | |

ಅವನೊಬ್ಬ ಹೆಸರಾಂತ ಉದ್ಯಮಿ. ಅವನ ಏಕೈಕ ಪುತ್ರ ಆಗಷ್ಟೆ ಪದವಿ ತರಗತಿಗೆ ಸೇರುವ ಉತ್ಸಾಹದಲ್ಲಿದ್ದ. ತುಂಬ ಬೇಗನೆ ಎಲ್ಲ ವಿದ್ಯೆಯನ್ನೂ ಕಲಿಸುವಂಥ ಕೋರ್ಸ್‌ಗೆ ಮಗನನ್ನು ಸೇರಿಸಬೇಕು, ಯಶಸ್ವಿ ಉದ್ಯಮಿಯಾಗುವುದು ಹೇಗೆ ಎಂದು ಅವನಿಗೆ ಎಲ್ಲವನ್ನೂ ಹೇಳಿಕೊಡಬೇಕು. ತಂದೆಗೆ ತಕ್ಕ ಮಗ ಎಂದು ಲೋಕದ ಜನರೆಲ್ಲ  ಮೆಚ್ಚಿ ಮಾತಾಡುವ ರೀತಿಯಲ್ಲಿ ಮಗನನ್ನು ಬೆಳೆಸಬೇಕು ಎಂಬುದು ಅವನ ಉದ್ದೇಶವಾಗಿತ್ತು. ಈತ ಹಲವು ಬಗೆಯ ಲೆಕ್ಕಾಚಾರಗಳನ್ನು ಮಾಡಿಕೊಂಡೇ ಒಂದು ಯೂನಿವರ್ಸಿಟಿಗೆ ಬಂದ. ಮಗನನ್ನು ಅಲ್ಲಿ ಪದವಿ ಕೋರ್ಸ್‌ಗೆ ಸೇರಿಸುವುದು ಅವನ ಉದ್ದೇಶವಾಗಿತ್ತು. ಯೂನಿವರ್ಸಿಟಿಯಲ್ಲಿ ಪದವಿ ಕೋರ್ಸ್‌ಗಳು ಅದಕ್ಕೆ ವಿಧಿಸಲಾಗುವ ಶುಲ್ಕ ಹಾಗೂ ಒಂದೊಂದು ಕೋರ್ಸ್‌ ಮುಗಿಯಲು ಇದ್ದ ಅವಧಿಯ ಬಗ್ಗೆ ತಿಳಿದು ಅವನಿಗೆ ಅಸಹನೆ ಉಂಟಾಯಿತು. 

Advertisement

ಕುಲಪತಿಗಳ ಮುಂದೆ ಕುಳಿತು ಅದನ್ನೇ ಹೇಳಿಕೊಂಡ, “”ಸಾರ್‌, ಒಂದೊಂದು ಪದವಿ ಕೋರ್ಸ್‌ ಮುಗಿಸಲು ಮೂರು, ನಾಲ್ಕು, ಐದು ವರ್ಷಗಳಷ್ಟು ದೀರ್ಘ‌ ಅವಧಿ ತಗಲುತ್ತದೆ. ವಿದ್ಯಾರ್ಥಿಗಳಿಗೆ ನಿಗದಿಪಡಿಸಿರುವ ಕಲಿಕೆಯ ಸಮಯವನ್ನು ಹೆಚ್ಚಿಸುವ ಮೂಲಕ, ಅಂದರೆ ಒಂದೊಂದು ದಿನಕ್ಕೆ ಹದಿನಾಲ್ಕು ಗಂಟೆಗಳ ಕಾಲ ಪಾಠ ಹೇಳುವ ಮೂಲಕ ಒಂದು ಅಥವಾ ಎರಡೇ ವರ್ಷದ ಅವಧಿಯಲ್ಲಿ ವಿದ್ಯಾರ್ಥಿಗಳನ್ನು ಪದವೀಧರರನ್ನಾಗಿ ರೂಪಿಸಲು ಸಾಧ್ಯವಿಲ್ಲವೆ? ಅಂಥದೊಂದು ಪ್ರಯೋಗವನ್ನು ಈ ವರ್ಷ ನನ್ನ ಮಗನ ಮೇಲೆಯೇ ಮಾಡಬಾರದೇಕೆ?”

ಕುಲಪತಿಗಳು ಒಮ್ಮೆ ಆ ಉದ್ಯಮಿಯನ್ನು ಪ್ರೀತಿ ಹಾಗೂ ಮರುಕದಿಂದ ನೋಡಿ ಹೇಳಿದರು, “”ಈ ಲೋಕದ ಚರಾಚರವೂ ಭಗವಂತನ ಸೃಷ್ಟಿ ಎಂದು ಹಿರಿಯರು ಹೇಳಿರುವುದನ್ನು ನೀವೂ ಕೇಳಿಯೇ ಇರುತ್ತೀರಿ. ಒಂದು ಚಿಕ್ಕ ಸಸಿ, ಮರವಾಗಿ ಬೆಳೆದು ಮಾವಿನ ಹಣ್ಣಿನ ಫ‌ಲ ನೀಡಲು ಭರ್ತಿ 12 ವರ್ಷಗಳ ಕಾಲಾವಕಾಶ ಬೇಕು. ಹಾಗೆಯೇ ಕ್ಷಣಮಾತ್ರದಲ್ಲಿ ಪುಡಿಪುಡಿಯಾಗುವ ಗ್ಲಾಸ್‌ ತಯಾರಾಗಲು ಕೇವಲ ಎರಡು ತಿಂಗಳ ಅವಧಿ ಸಾಕು. ನಿಮ್ಮ ಮಗ, ನೂರು ಮಂದಿಯ ಹಸಿವು ತಣಿಸುವ ಮಾವಿನ ಮರ ಆಗಬೇಕೋ ಅಥವಾ ಒಂದು ಗ್ಲಾಸ್‌ ಆಗಿ ಉಳಿದರೆ ಸಾಕೋ ನೀವೇ ನಿರ್ಧರಿಸಿ”.

ಎ. ಆರ್‌. ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next