ಅಂಬರೀಶ್ ಈಗಿಲ್ಲ. ಆದರೆ, ಅಂಬರೀಶ್ ಅಭಿಮಾನಿಗಳಿಗೆ ಮಾತ್ರ ತಮ್ಮ ಪ್ರೀತಿಯ ಹೀರೋ ಇಲ್ಲ ಎಂಬ ನೋವು ಎಂದಿಗೂ ಕಾಡಿಲ್ಲ. ಅವರ ಚಿತ್ರಗಳ ಮೂಲಕ ಸದಾ ಕಣ್ತುಂಬಿಕೊಳ್ಳುತ್ತಿರುವ ಅಭಿಮಾನಿಗಳಿಗೆ ಇಲ್ಲೊಂದು ಸಂತಸದ ಸುದ್ದಿ ಇದೆ. ಅಂಬರೀಶ್ ಅವರಿಲ್ಲದ ಮೊದಲ ಹುಟ್ಟುಹಬ್ಬ ಮೇ.29 ರಂದು ಆಚರಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಅಂಬರೀಶ್ ಅಭಿನಯದ “ಅಂತ’ ಚಿತ್ರವನ್ನು ಮರು ಬಿಡುಗಡೆ ಮಾಡಲು ನಿರ್ಮಾಪಕ ವೇಣುಗೋಪಾಲ್ ನಿರ್ಧರಿಸಿದ್ದಾರೆ. ಹೌದು, ಕಳೆದ 38 ವರ್ಷಗಳ ಹಿಂದೆ ತೆರೆಗೆ ಬಂದಿದ್ದ “ಅಂತ’ 80 ರ ದಶಕದಲ್ಲಿ ಭರ್ಜರಿ ಯಶಸ್ಸು ಪಡೆದಿತ್ತು.
ಆ ಕಾಲದಲ್ಲೇ ಹೊಸ ದಾಖಲೆ ಬರೆದಿದ್ದ “ಅಂತ’ ಇಂದಿಗೂ ಎವರ್‌ಗ್ರೀನ್ ಸಿನಿಮಾ ಎಂದೇ ಜನಪ್ರಿಯಗೊಂಡಿದೆ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಈ ಚಿತ್ರವನ್ನು ಎಚ್.ಎನ್.ಮಾರುತಿ ಮತ್ತು ವೇಣುಗೋಪಾಲ್ ನಿರ್ಮಾಣ ಮಾಡಿದ್ದರು.
ಹೆಚ್.ಕೆ.ಅನಂತರಾವ್ ಅವರ ಕಾದಂಬರಿ ಆಧರಿಸಿದ ಚಿತ್ರದಲ್ಲಿ ಅಂಬರೀಶ್ ಇನ್ಸ್‌ಪೆಕ್ಟರ್ ಸುಶೀಲ್‌ಕುಮಾರ್ ಪಾತ್ರದ ಮೂಲಕ ಗಮನಸೆಳೆದಿದ್ದರು. ಅಷ್ಟೇ ಅಲ್ಲ, ಆ ಚಿತ್ರದಲ್ಲಿ ಅವರು ಕನ್ವರ್‌ಲಾಲ್ ಎಂಬ ನೆಗೆಟಿವ್ ಪಾತ್ರವನ್ನೂ ನಿರ್ವಹಿಸಿ, ಮನೆಮಾತಾಗಿದ್ದರು.
ಆ ಚಿತ್ರದಲ್ಲಿ ಅವರು ನಿರ್ವಹಿಸಿದ್ದ ಕನ್ವರ್‌ಲಾಲ್ ಪಾತ್ರ ಇನ್ನೊಂದು ಚಿತ್ರ ನಿರ್ಮಾಣಕ್ಕೂ ಕಾರಣವಾಗಿತ್ತು. ಅಂಬರೀಶ್ ಅವರ ಸಿನಿಮಾ ವೃತ್ತಿ ಬದುಕಿನಲ್ಲಿ “ಅಂತ’ ಅದ್ಭುತ ಸಿನಿಮಾ. ಈಗ ಮತ್ತೂಮ್ಮೆ ಆ ಚಿತ್ರ ಹೊಸ ತಂತ್ರಜ್ಞಾನದೊಂದಿಗೆ ಪ್ರೇಕ್ಷಕರ ಮುಂದೆ ಬರಲಿದೆ.
ಮೇ.29 ರಂದು ಅಂಬರೀಶ್ ಅವರ ಹುಟ್ಟುಹಬ್ಬ. ಆ ಕಾರಣಕ್ಕೆ ನಿರ್ಮಾಪಕರು “ಅಂತ’ ಚಿತ್ರಕ್ಕೆ ತಂತ್ರಜ್ಞಾನದ ಹೊಸ ಸ್ಪರ್ಶ ನೀಡಿ ಬಿಡುಗಡೆ ಮಾಡುತ್ತಿದ್ದಾರೆ. ಚಿತ್ರಕ್ಕೆ ಜಿ.ಕೆ. ವೆಂಕಟೇಶ್ ಅವರ ಸಂಗೀತವಿತ್ತು. ಹಾಡುಗಳು ಇಂದಿಗೂ ಜನರಲ್ಲಿ ಅಚ್ಚಳಿಯದೆ ಉಳಿದಿವೆ.
ಅಂದಹಾಗೆ, ಹೊಸ ರೂಪ ಪಡೆದ ಪ್ರೇಕ್ಷಕರ ಎದುರು ಬರುತ್ತಿರುವ “ಅಂತ’ ಚಿತ್ರ ರಾಜ್ಯಾದ್ಯಂತ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. “ಅಂತ’ ಚಿತ್ರದಲ್ಲಿ ಅಂಬರೀಶ್ ಜೊತೆ ಲಕ್ಷ್ಮೀ, ಜಯಮಾಲಾ, ಲತಾ, ಪಂಡರೀಬಾಯಿ, ವಜ್ರಮುನಿ, ಪ್ರಭಾಕರ್, ಸುಂದರ ಕೃಷ್ಣ ಅರಸ್, ಶಕ್ತಿ ಪ್ರಸಾದ್, ಲಕ್ಷ್ಮಣ್, ಸಿ.ಸೀತಾರಾಮ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದರು.