Advertisement

ಆಗಲಿದ ಅಂಬಿ, ಜಾಫ‌ರ್‌ ಷರೀಫ್ಗೆ ನುಡಿನಮನ

12:24 PM Nov 27, 2018 | |

ಮೈಸೂರು: ಮೈಸೂರು ನಗರ ಹಾಗೂ ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ ಅಗಲಿದ ನಾಯಕರಾದ ಮಾಜಿ ಸಚಿವ ಅಂಬರೀಶ್‌ ಹಾಗೂ ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫ‌ರ್‌ ಷರೀಫ್ ಅವರಿಗೆ ನುಡಿನಮನ ಸಲ್ಲಿಸಲಾಯಿತು. ನಗರದ ಇಂದಿರಾ ಕಾಂಗ್ರೆಸ್‌ ಭವನದಲ್ಲಿ ಸೋಮವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅಗಲಿದ ಇಬ್ಬರು ನಾಯಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

Advertisement

ಸಂಸದ ಆರ್‌. ಧ್ರುವನಾರಾಯಣ ಮಾತನಾಡಿ, ಅಂಬರೀಶ್‌ ಅವರನ್ನು ಕೇಂದ್ರ ಸಚಿವರಾಗಿದ್ದಾಗಿನಿಂದಲೂ ಅವರೊಂದಿಗೆ ಉತ್ತಮ ಒಡನಾಟವಿತ್ತು. ಮೈಸೂರಿನ ಮೇಲೆ ಅವರಿಗೆ ಅಪಾರ ಪ್ರೀತಿ ಇತ್ತು. ಅದಕ್ಕಾಗಿಯೇ ವಸತಿ ಸಚಿವರಾಗಿದ್ದಾಗ ಪ್ರತಿಯೊಂದು ತಾಲೂಕಿಗೆ 200 ಮನೆಗಳನ್ನು ಮಂಜೂರು ಮಾಡಿದ್ದರು ಎಂದು ಸ್ಮರಿಸಿದರು.  

ಅಪತ್ಬಾಂಧವ: ರಾಜಕೀಯಕ್ಕಿಂತ ಹೆಚ್ಚಾಗಿ ಕನ್ನಡ ಚಿತ್ರರಂಗದ ಅಪತ್ಬಾಂಧವನನ್ನು ನಾವಿಂದು ಕಳೆದುಕೊಂಡಿದ್ದೇವೆ. ಚಿತ್ರರಂಗದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಡಾ.ರಾಜ್‌ಕುಮಾರ್‌ ನಿಧನದ ಬಳಿಕ ಮೂಂಚೂಣಿಯಲ್ಲಿ ನಿಂತು ಸಮಸ್ಯೆ ಬಗೆಹರಿಸುತ್ತಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಶತಾಬ್ಧಿ ಎಕ್ಸ್‌ಪ್ರೆಸ್‌ ರೈಲು ಸೇವೆ: ಜಾಫ‌ರ್‌ ಷರೀಫ್  ಕಾಂಗ್ರೆಸ್‌ ಪಕ್ಷದ ತಳಮಟ್ಟದ ಕಾರ್ಯಕರ್ತರಾಗಿ ಪಕ್ಷಕ್ಕಾಗಿ ದುಡಿದು ರೈಲ್ವೆ ಮಂತ್ರಿಯಾಗಿ ಕರ್ನಾಟಕಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ನೆನೆದರು. ಚೆನ್ನೈ-ಬೆಂಗಳೂರು ನಡುವಿನ ಶತಾಬ್ಧಿ ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನು ಮೈಸೂರುವರೆಗೂ ವಿಸ್ತರಿಸಿದರು.

ಇದರಿಂದ ಮೈಸೂರು ಅಭಿವೃದ್ಧಿಗೆ ಸಹಕಾರಿಯಾಯಿತು. ಎಲ್‌ ಆ್ಯಂಡ್‌ ಟಿ ಸೇರಿದಂತೆ ಸಾಕಷ್ಟು ಕಾರ್ಖಾನೆಗಳು ಈ ಭಾಗಕ್ಕೆ ತರಲು ಕಾರಣಕರ್ತರಾಗಿ ಮೈಸೂರು ಭಾಗದ ಅಭಿವೃದ್ಧಿಗೆ ಸಾಕಷ್ಟು ಕಾಳಜಿ ಹೊಂದಿದ್ದರು. ನಮ್ಮೆಲ್ಲರ ಮಾರ್ಗದರ್ಶಕರಾಗಿದ್ದ ಅವರ ಅಗಲಿಕೆ ಇಡೀ ಸಮಾಜಕ್ಕೆ ಒಂದು ನಷ್ಟವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

Advertisement

ಅಂಬಿ ಅಜಾತಶತ್ರು: ಮಾಜಿ ಶಾಸಕ ವಾಸು ಮಾತನಾಡಿ, ನಟ ಅಂಬರೀಶ್‌ ಮಾತಿನಲ್ಲಿ ಒರಟುತನವಿದ್ದರೂ ಅಂತರಾಳದಲ್ಲಿ ಪ್ರೀತಿ, ವಿಶ್ವಾಸ, ಆತ್ಮೀಯತೆ ಹೆಚ್ಚಿತ್ತು. ಇಲ್ಲದವರಿಗೆ ಕೊಡುವುದರಲ್ಲಿ ಸಾಕಷ್ಟು ತಮ್ಮನ್ನು ಅರ್ಪಿಸಿಕೊಂಡಿದ್ದರು. ಚಿತ್ರರಂಗದ ಸಂಕಷ್ಟ ಸ್ಥಿತಿಗಳಲ್ಲಿ ಮಂಚೂಣಿಗೆ ಬಂದು ಸಮಸ್ಯೆ ಪರಿಹರಿಸುವಲ್ಲಿ ನಿರ್ಣಾಯಕರಾಗಿದ್ದರು. ಅಜಾತಶತ್ರುವಾಗಿದ್ದ ಅಂಬರೀಶ್‌ ಅವರ ಆರೋಗ್ಯವೇ ಶತ್ರುವಾಗಿ ಹೋಯಿತು ಎಂದು ಬೇಸರ ವ್ಯಕ್ತಪಡಿಸಿದರು. 

ಷರೀಫ್ ನಿಷ್ಠೆ: ಜಾಫ‌ರ್‌ ಷರೀಫ್ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರಾಗಿದ್ದು, ಚಿತ್ರದುರ್ಗದ ಜಿಲ್ಲಾ ಕಾಂಗ್ರೆಸ್‌ ಮುಖಂಡನಾಗಿ ತಾವೇ ಕಚೇರಿಯನ್ನು ಶುಚಿಗೊಳಿಸುತ್ತಿದ್ದ ನಿಷ್ಠೆ ಅವರಲ್ಲಿತ್ತು. ನಂತರ ರಾಷ್ಟ್ರಮಟ್ಟದವರೆಗೂ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಸಮುದಾಯ ಯಾವುದೇ ಇದ್ದರೂ ಸಾಮಾನ್ಯ ಕಾರ್ಯಕರ್ತರನ್ನು ಪ್ರೀತಿಯಿಂದ ಕಾಣುತ್ತಿದ್ದ ಅವರ ಗುಣ ಇಂದಿನ ರಾಜಕಾರಣಿಗಳಿಗೆ ಆದರ್ಶವಾಗಿದೆ ಎಂದರು. 

ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌ ಮಾತನಾಡಿ, ಅಂಬರೀಶ್‌ ಅವರಂತಹ ನೇರ ನುಡಿಯ ವ್ಯಕ್ತಿತ್ವವೊಂದು ನಮ್ಮನ್ನು ಅಗಲಿದೆ. ವಸತಿ ಸಚಿವರಾಗಿದ್ದ ವೇಳೆ ಕೃಷ್ಣರಾಜ ಕ್ಷೇತ್ರಕ್ಕೆ ಮೂರು ಸಾವಿರ ಮನೆಗಳನ್ನು ಮಂಜೂರು ಮಾಡಿದ್ದರು. ಜಾಫ‌ರ್‌ ಷರೀಫ್ ಅವರು ಸಹ ಅಧಿಕಾರಕ್ಕೆ ಎಂದೂ ಅಂಟಿಕೊಂಡವರಲ್ಲ. ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲೂ ಪಕ್ಷದ ಅಂಕುಡೊಂಕುಗಳನ್ನು ಟೀಕಿಸಿ ಜನ ಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವಂತೆ ಹೇಳುತ್ತಿದ್ದರು ಎಂದು ನೆನೆದರು.

ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌, ಮೇಯರ್‌ ಪುಷ್ಪಲತಾ ಜಗನ್ನಾಥ್‌, ಮಾತನಾಡಿದರು. ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಮೂರ್ತಿ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌, ಕೆಪಿಸಿಸಿ ವಕ್ತಾರರಾದ ಎಚ್‌.ಎ.ವೆಂಕಟೇಶ್‌, ಎಂ.ಲಕ್ಷ್ಮಣ, ಸೋಮಶೇಖರ್‌, ನಗರ ಪ್ರಧಾನ ಕಾರ್ಯದರ್ಶಿ ಭಾಸ್ಕರ್‌ಗೌಡ ಮತ್ತಿತರರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next