Advertisement

ರಜನಿ ಮಾತಲ್ಲಿ ಅಂಬಿ ಸ್ನೇಹ

11:40 AM Nov 26, 2018 | Team Udayavani |

ಅಂಬರೀಷ್‌ ಅವರ ವ್ಯಕ್ತಿತ್ವ ಎಂಥವರನ್ನಾದರೂ ಸೆಳೆಯುವಂಥದ್ದು. ಅದೇ ಕಾರಣದಿಂದ ಅವರ ಸ್ನೇಹಿತರ ಬಳಗ ದೊಡ್ಡದಿದೆ. ಕೇವಲ ಕನ್ನಡವಷ್ಟೇ ಅಲ್ಲದೇ ಪರಭಾಷಾ ನಟರು ಕೂಡಾ ಅಂಬರೀಷ್‌ ಅವರ ಆಪ್ತರಾಗಿದ್ದರು. ಅದರಲ್ಲಿ ಪ್ರಮುಖವಾಗಿದ್ದವರೆಂದರೆ ರಜನಿಕಾಂತ್‌. ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್‌ ಆಗಿ ಅಪಾರ ಸಂಖ್ಯೆಯ ಅಭಿಮಾನಿ ವರ್ಗವನ್ನು ಹೊಂದಿರುವ ರಜನಿಕಾಂತ್‌, ಅಂಬಿಯವರ “ಹೋಗೋ ಬಾರೋ’ ಸ್ನೇಹಿತ.

Advertisement

ಇಬ್ಬರು ಚಿತ್ರರಂಗದಲ್ಲಿ ಕಷ್ಟಪಟ್ಟು ಗಟ್ಟಿ ನೆಲೆ ಕಂಡುಕೊಂಡವರು. ಅಂದು ಆರಂಭವಾದ ಅವರಿಬ್ಬರ ನಿಷ್ಕಲ್ಮಶ ಸ್ನೇಹ ಹಾಗೆ ಮುಂದುವರೆದುಕೊಂಡು ಬಂದಿದೆ. ಅಂಬರೀಷ್‌ ಚೆನ್ನೈಗೆ ಹೋದರೆ ರಜನಿಕಾಂತ್‌ ಅವರನ್ನು ಭೇಟಿಯಾಗದೇ ಬರುತ್ತಿರಲಿಲ್ಲ. ಅದರಂತೆ ರಜನಿಕಾಂತ್‌ ಕೂಡಾ ಬೆಂಗಳೂರಿಗೆ ಬಂದರೆ ಅಂಬಿ ಮನೆಗೆ ಹೋಗಿ ಮಾತನಾಡಿ, ಊಟ ಮಾಡದೇ ಹೋಗುತ್ತಿರಲಿಲ್ಲ.

ಆದರೆ, ಇತ್ತೀಚೆಗೆ ಒಂದು ಬಾರಿ ರಜನಿಕಾಂತ್‌ ಅವರು ಬೆಂಗಳೂರಿಗೆ ಬಂದು ಹೋದರೂ ತುರ್ತು ಕಾರಣಗಳಿಂದಾಗಿ ಅಂಬಿ ಮನೆಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಇದು ಅಂಬಿಗೆ ಗೊತ್ತಾಗಿ, ತಮ್ಮದೇ ಶೈಲಿಯಲ್ಲಿ ರಜನಿಗೆ ಗದರಿದ್ದಾರೆ. “ಬಡ್ಡಿ ಮಗನೇ ಇನ್ನೊಂದ್ಸಾರಿ ಮನೆಗೆ ಬಾರದೇ ಹಾಗೇ ಹೋದರೆ ಸಾಯಿಸಿ ಬಿಡ್ತೀನಿ’ ಎಂದು. ಈ ವಿಚಾರವನ್ನು ಸ್ವತಃ ರಜನಿಕಾಂತ್‌ ಹೇಳಿಕೊಂಡು ಭಾವುಕರಾದರು.

ಅಂಬಿಯ ಅಂತಿಮ ದರ್ಶನಕ್ಕಾಗಿ ಚೆನ್ನೈನಿಂದ ಬಂದ ರಜನಿ, ಗೆಳೆಯನನ್ನು ನೋಡಿ ಕಣ್ಣೀರು ಹಾಕಿದರು. ಒತ್ತರಿಸಿ ಬರುತ್ತಿದ್ದ ದುಃಖವನ್ನು ತಡೆಯುತ್ತಾ ಸುಮಲತಾ ಅವರಿಗೆ ಸಾಂತ್ವನ ಹೇಳಿದರು. ಆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅಂಬರೀಷ್‌, “ಒಬ್ಬ ಅದ್ಭುತ ಗೆಳೆಯನನ್ನು ಕಳೆದುಕೊಂಡಿದ್ದೇನೆ. ಆತ ರಾಜನಂತೆ ಬದುಕಿದ. ಆತನ ತರಹ ಬದುಕಲು ಯಾರಿಂದಲೂ ಸಾಧ್ಯವಿಲ್ಲ. ಸಾಮಾನ್ಯವಾಗಿ ನಾನು ಬೆಂಗಳೂರಿಗೆ ಬಂದರೆ ಅಂಬಿ ಮನೆಗೆ ಹೋಗಿ ಹೋಗುತ್ತಿದ್ದೆ.

ಆದರೆ ಕಳೆದ ಬಾರಿ ಭೇಟಿ ಕೊಟ್ಟಾಗ ಆತನ ಮನೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಇದರಿಂದ ಸಿಟ್ಟಾದ ಆತ ಕರೆ ಮಾಡಿ, “ಬಡ್ಡಿ ಮಗನೇ ಇನ್ನೊಂದ್ಸಾರಿ ಮನೆಗೆ ಬಾರದೇ ಹಾಗೇ ಹೋದರೆ ಸಾಯಿಸಿ ಬಿಡ್ತೀನಿ’ ಎಂದಿದ್ದ. ಆ ತರಹದ ಸ್ನೇಹ ನಮ್ಮಿಬ್ಬರ ಮಧ್ಯೆ ಇತ್ತು. ಚಿತ್ರರಂಗಕ್ಕೆ ಅಂಬರೀಷ್‌ನಂತಹ ನಟ ಬರಬಹುದು, ಆದರೆ ಆತನಂತಹ ಮನುಷ್ಯ ಬರಲು ಸಾಧ್ಯವಿಲ್ಲ’ ಎಂದು ತಮ್ಮಿಬ್ಬರ ಗೆಳೆತನವನ್ನು ಮೆಲುಕು ಹಾಕಿದರು ರಜನಿಕಾಂತ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next