Advertisement

ದೃಶ್ಯ ಕಾವ್ಯವಾದ ಅಂಬೆಯ ಒಡಲಾಳ

05:53 PM Jun 20, 2019 | mahesh |

ಸಂದೇಹ ಹಾಗೂ ಅತಾರ್ಕಿಕ ಸಂಗತಿಗಳನ್ನು ಪಕ್ಕಕ್ಕಿಟ್ಟು ನಾಟಕವನ್ನು ನೋಡುವುದಾದರೆ ಇಡೀ ನಾಟಕ ಒಂದು ದೃಶ್ಯಕಾವ್ಯವಾಗಿ ಮೂಡಿಬಂದಿದೆ. ನಾಟಕದಾದ್ಯಂತ ಬಳಸಿದ ರಂಗತಂತ್ರಗಳು ಪ್ರಯೋಗವನ್ನು ಆಕರ್ಷಣೀಯವೆನಿಸಿದೆ.

Advertisement

ಅಂಬೆಯ ಪಾತ್ರವನ್ನು ಕೇಂದ್ರವಾಗಿರಿಸಿ ಪಿತೃಪ್ರಧಾನ ವ್ಯವಸ್ಥೆಯ ರಾಜಕಾರಣವನ್ನು ಡಾ| ಜಯಪ್ರಕಾಶ ಮಾವಿನಕುಳಿ ಅಭಿಯಾನ ನಾಟಕ ರೂಪದಲ್ಲಿ ರಚಿಸಿದ್ದಾರೆ.ಸುಬ್ರಹ್ಮಣ್ಯ ಕೆಎಸ್‌ಎಸ್‌ ಕಾಲೇಜಿನ ಕುಸುಮಸಾರಂಗ ವಿದ್ಯಾರ್ಥಿಗಳು ಕಾಲೇಜಿನಲ್ಲಿ 27ನೇ ಪ್ರಸ್ತುತಿಯಾಗಿ ನಾಟಕವನ್ನು ಇತ್ತೀಚೆಗೆ ಪ್ರದರ್ಶಿಸಿದರು. ದಾಕ್ಷಾಯಿಣಿ ಭಟ್‌ ನಾಟಕವನ್ನು ನಿರ್ದೇಶಿಸಿದ್ದಾರೆ.

ಕಾಶಿರಾಜನ ಕುಮಾರಿ ಅಂಬೆ ಸ್ವಯಂವರಕ್ಕೆ ಬಂದ ಸಾಲ್ವನನ್ನು ಪ್ರೀತಿಸುತ್ತಾಳೆ. ಸ್ವಯಂವರದಲ್ಲಿ ಸಾಲ್ವರಾಜನಿಗೆ ಮಾಲೆ ಹಾಕಬೇಕು ಎನ್ನುವಷ್ಟರಲ್ಲಿ ನುಗ್ಗಿದ ಭೀಷ್ಮ ಇತರೆಲ್ಲ ರಾಜಕುಮಾರರ ಜತೆಗೆ ಸಾಲ್ವನನ್ನೂ ಸೋಲಿಸುತ್ತಾನೆ. ಅಂಬೆಯ ವಿರೋಧ ಲೆಕ್ಕಿಸದೇ ಆಕೆಯ ಇಬ್ಬರು ತಂಗಿಯರ ಜೊತೆಗೆ ಬಲವಂತವಾಗಿ ಹಸ್ತಿನಾವತಿಗೆ ಹೊತ್ತೋಯ್ಯುತ್ತಾನೆ. ಮಲತಮ್ಮ ವಿಚಿತ್ರವೀರ್ಯನಿಗೆ ಆಕೆಯನ್ನು ವಿವಾಹ ಮಾಡಲು ತೀರ್ಮಾನಿಸುತ್ತಾಳೆ. ಆಕೆ ಸಾಲ್ವನನ್ನು ತಾನು ಪ್ರೀತಿಸುತ್ತಿದ್ದು ಕನ್ಯತ್ವವನ್ನು ಸಹ ಕಳೆದುಕೊಂಡಿದ್ದೇನೆಂದು ರಾಣಿ ಸತ್ಯವತಿಗೆ ಹೇಳುತ್ತಾಳೆ. ಕಾಡಿ ಬೇಡಿ ಬಿಡುಗಡೆ ಪಡೆದು ಸಾಲ್ವನಲ್ಲಿಗೆ ಹೋದ ಅಂಬೆ ಅಲ್ಲಿಯೂ ಅವಮಾನಿತಳಾಗುತ್ತಾಳೆ. ಮತ್ತೆ ಹಸ್ತಿನಾವತಿಗೆ ಬಂದ ಅಂಬೆ ಹೊತ್ತು ತಂದ ಭೀಷ್ಮನೇ ತನ್ನನ್ನು ಮದುವೆಯಾಗಬೇಕೆಂದು ಆಗ್ರಹಿಸುತ್ತಾಳೆ. ಆಜನ್ಮ ಬ್ರಹ್ಮಚಾರಿ ಪ್ರತಿಜ್ಞೆ ಮುರಿಯಲು ನಿರಾಕರಿಸಿದ ಭೀಷ್ಮ ಅಂಬೆಯನ್ನು ತಿರಸ್ಕರಿಸುತ್ತಾನೆ. ಅವಮಾನದ ಬೆಂಕಿಯಲ್ಲಿ ಬೆಂದುಹೋದ ಅಂಬೆ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡುವ ಮೂಲಕ ನಾಟಕ ಅಂತ್ಯವಾಗುತ್ತದೆ.

ರಾಜ್ಯಾಧಿಕಾರವನ್ನು ಕಾಪಾಡಿಕೊಳ್ಳಲು ರಾಣಿ ಸತ್ಯವತಿ ಪ್ರಯತ್ನಿಸಿದರೆ. ಕೊಟ್ಟ ವಚನಕ್ಕೆ ಭೀಷ್ಮ ಕಟಿಬದ್ದನಾಗುತ್ತಾನೆ. ಕಾಶಿರಾಜನಿಗೆ ತನ್ನ ಸಿಂಹಾಸನದ ಚಿಂತೆಯಾದರೆ, ಸಾಲ್ವರಾಜನನ್ನು ಅವಮಾನ ಸುಡುತ್ತಿರುತ್ತದೆ. ಎಲ್ಲರ ಸ್ವಾರ್ಥ ಹಿತಾಸಕ್ತಿಯಲ್ಲಿ ಅಂಬೆ ಬಲಿಪಶುವಾಗುತ್ತಾಳೆ. ರಾಜ್ಯಾಧಿಕಾರ, ಧರ್ಮ ಹಾಗೂ ಸ್ವಾರ್ಥ ಹಿತಾಸಕ್ತಿಗಾಗಿ ಬಲಿಯಾದ ಸಮಸ್ತ ಮಹಿಳೆಯರ ಪ್ರತಿನಿ ಧಿಯಾಗಿ ಅಂಬೆಯ ಪಾತ್ರ ಮೂಡಿಬಂದಿದೆ. ಅಂಬೆ ಪಾತ್ರಧಾರಿ ಅನಘಾ ಎಂ. ಜಿ. ಕೊನೆಯವರೆಗೂ ತನ್ನ ಹಾವಭಾವಗಳಲ್ಲಿ ಸೇಡನ್ನೇ ಮೈಗೂಡಿಸಿಕೊಂಡಂತೆ ಅಭಿನಯಿಸಿದ್ದಾರೆ. ಏಟಿಗೆ ಎದುರೇಟು, ಉತ್ತರಕ್ಕೆ ಪ್ರತ್ಯುತ್ತರ, ಬಾಣಕ್ಕೆ ತಿರುಗುಬಾಣ, ಮಂತ್ರಕ್ಕೆ ತಿರುಮಂತ್ರ ನೀಡುತ್ತಾ ಪಾತ್ರಕ್ಕೆ ರಂಗು ತುಂಬಿದ್ದಾರೆ.

ನಾಟಕದಲ್ಲಿ ಅಂಬೆ ಹೇಗೆ ಅಸಹಾಯಕಳ್ಳೋ ಹಾಗೆಯೇ ಪುರುಷ ಪಾತ್ರಗಳೂ ಸಹ ಅಸಹಾಯಕವಾಗಿವೆ. ನಾಟಕದ ವಿನ್ಯಾಸದ ಮೇಲೆ ಪ್ರಭುತ್ವ ಸಾಧಿಸಿದ ನಿರ್ದೇಶಕಿ ದಾಕ್ಷಾಯಿಣಿಯವರು ವಸ್ತುವಿನ ತಾರ್ಕಿಕ ನಿರೂಪಣೆಯಲ್ಲೂ ಬದ್ಧತೆೆ ತೋರಿದ್ದಾರೆ.ತಾರ್ಕಿಕ ಸಂದೇಹ ಹಾಗೂ ಅತಾರ್ಕಿಕ ಸಂಗತಿಗಳನ್ನು ಪಕ್ಕಕ್ಕಿಟ್ಟು ನಾಟಕವನ್ನು ನೋಡುವುದಾದರೆ ಇಡೀ ನಾಟಕ ಒಂದು ದೃಶ್ಯಕಾವ್ಯವಾಗಿ ಮೂಡಿಬಂದಿದೆ. ನಾಟಕದಾದ್ಯಂತ ಬಳಸಿದ ರಂಗತಂತ್ರಗಳು ಪ್ರಯೋಗವನ್ನು ಆಕರ್ಷಣೀಯವೆನಿಸಿದೆ. ಗುಂಪುಗಳನ್ನು ಬಳಸಿಕೊಂಡ ರೀತಿ, ಗುಂಪಿನಿಂದಲೇ ಪಾತ್ರಗಳು ಹೊರಹೊಮ್ಮಿ ಮತ್ತೆ ಗುಂಪಿನಲ್ಲಿ ಒಂದಾಗುವಂತೆ ಬಳಸಲಾದ ಮಾರ್ಪಾಟು ಸೊಗಸಾಗಿ ಮೂಡಿಬಂದಿದೆ.

Advertisement

ಉದ್ಯಾನವನದಲ್ಲಿ ನಡೆಯುವ ಸರಸ ದೃಶ್ಯ ವೈಭವ ಹಾಗೂ ಸತ್ಯವತಿ-ಶಂತನು ಭೇಟಿಯಾದಾಗ ನಟಿಸುವ ಗುಂಪಿನ ದೃಶ್ಯ, ಸ್ವಯಂವರದಲ್ಲಿ ಭೀಷ್ಮನು ರಾಜಕುಮಾರರೊಂದಿಗೆ ಕಾದಾಡುವ ದೃಶ್ಯಸಂಯೋಜನೆಗಳು. ಜತೆಗೆ ಪೂರಕವಾಗಿ ಹಿನ್ನಲೆ ಆಲಾಪ ಮತ್ತು ಸಂಗೀತ ಸೋಜಿಗವನ್ನು ಹುಟ್ಟುಹಾಕುವಂತಿದೆ. ಸಂಗೀತ ಹಾಗೂ ಬೆಳಕು ನಾಟಕಕ್ಕೆ ಮಾಂತ್ರಿಕತೆಯ ಸ್ಪರ್ಶವನ್ನು ನೀಡಿವೆ.

ಎಲ್ಲ ಪಾತ್ರಗಳ ಶೆ„ಲೀಕೃತ ಆಂಗಿಕ ಅಭಿನಯ ನಾಟಕಕ್ಕೆ ವಿಶೇಷತೆಯನ್ನು ಒದಗಿಸಿದೆ. ಭೀಷ್ಮನಾಗಿ ಕೀರ್ತನ್‌, ಸಾಲ್ವನಾಗಿ ಸುಜಿತ್‌ ಹಾಗೂ ಕಾಶಿರಾಜನಾಗಿ ಡಾ| ಗೋವಿಂದ ಎನ್‌. ಎಸ್‌. ಅಭಿನಯ ಪಾತ್ರಕ್ಕೆ ನ್ಯಾಯಸಲ್ಲಿಸಿದ್ದಾರೆ. ಸತ್ಯವತಿ ಪಾತ್ರದಲ್ಲಿ ವರ್ಷಾ ಮಾಯಿಪಜೆ ಅಭಿನಯ ಗಮನಾರ್ಹವಾಗಿತ್ತು. ಉಳಿದೆಲ್ಲ ನಟ ನಟಿಯರೂ ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ನಾಟಕವನ್ನು ಅಂದಗೊಳಿಸಿದ್ದಾರೆ.ವಸ್ತ್ರವಿನ್ಯಾಸ, ರಂಗಸಜ್ಜಿಕೆ ಸರಳವಾಗಿದ್ದು ಕೇವಲ ರಾಜಲಾಂಛನಗಳನ್ನು ಮಾತ್ರ ಸಾಂಕೇತಿಕವಾಗಿ ಬಳಸಿಕೊಳ್ಳಲಾಗಿದೆ.

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next