Advertisement

ಅಂಬರ್‌ಗ್ರೀಸ್‌ ಮಾರಾಟ ಯತ್ನ: ಮೂವರ ಸೆರೆ

02:44 PM May 24, 2023 | Team Udayavani |

ಮೈಸೂರು: ಅಕ್ರಮವಾಗಿ ಮಾರಾಟ ಮಾಡಲು ಕೇರಳದಿಂದ ತಂದಿದ್ದ ಸುಮಾರು 18 ಕೋಟಿ ಮೌಲ್ಯದ 9 ಕೆ.ಜಿ. 821 ಗ್ರಾಂ ಅಂಬರ್‌ಗ್ರೀಸ್‌ (ತಿಮಿಂಗಲ ವಾಂತಿ) ವಶಪಡಿಸಿಕೊಂಡಿರುವ ಪೊಲೀಸರು ಕೇರಳದ ಮೂವರನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್‌ ಹೇಳಿದರು.

Advertisement

ನಗರದಲ್ಲಿನ ಎಸ್‌ಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂಬರ್‌ ಗ್ರೀಸನ್ನು ಸುಗಂಧ ದ್ರವ್ಯ ಹಾಗೂ ಔಷಧ ತಯಾರಿಕೆಗೆ ಬಳಕೆ ಮಾಡಲಾಗುತ್ತದೆ. ಕೋಟ್ಯಂತರ ರೂ. ಬೆಲೆ ಬಾಳುವ ಈ ವಸ್ತುವಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಇದೆ ಎಂದರು.

ಮಾಲು ಸಮೇತ ಬಂಧನ: ಆರೋಪಿಗಳು ಅಂಬರ್‌ ಗ್ರೀಸನ್ನು ಕೇರಳದಿಂದ ತಂದು ಎಚ್‌.ಡಿ.ಕೋಟೆಯ ಹೋಟೆಲೊಂದರಲ್ಲಿ ಉಳಿದುಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಹ್ಯಾಂಡ್‌ಪೋಸ್ಟ್‌ ಬಳಿ ದಾಳಿ ನಡೆಸಿದ ಎಚ್‌.ಡಿ.ಕೋಟೆ ಹಾಗೂ ಸೆನ್‌ ಪೊಲೀಸರು ಅಂಬರ್‌ಗ್ರೀಸ್‌ ಹಾಗೂ ಕಾರಿನ ಸಮೇತ ಕೇರಳದ ಮೂವರನ್ನು ಬಂಧಿಸಿದ್ದಾರೆ.

ಆರೋಪಿಗಳು ಅಂಬರ್‌ ಗ್ರೀಸನ್ನು ಬೇರೊಬ್ಬರಿಂದ ಪಡೆದುಕೊಂಡು ಮತ್ತೂಬ್ಬರಿಗೆ ಮಾರಾಟ ಮಾಡಲು ಮುಂದಾಗಿದ್ದರು. ಇದರಲ್ಲಿ ಅಂತಾರಾಷ್ಟ್ರೀಯ ಮಾರಾಟ ಜಾಲ ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವಿವರಿಸಿದರು.

ಸುಲಿಗೆಕೋರನ ಬಂಧನ: ಬಾಡಿಗೆಗೆ ಆಟೋದಲ್ಲಿ ತೆರಳಿ ಚಾಲಕನಿಗೆ ಚಾಕು ತೋರಿಸಿ 2 ಸಾವಿರ ನಗದು, ಒಂದು ಮೊಬೈಲ್‌ ಹಾಗೂ ಆಟೋದೊಂದಿಗೆ ಪರಾರಿ ಯಾಗಿದ್ದ ಆರೋಪಿಯನ್ನು ವರುಣ ಠಾಣೆ ಪೊಲೀ ಸರು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದರು.

Advertisement

ಮೇ 19ರಂದು ರವಿ ಎಂಬುವವರ ಆಟೋದಲ್ಲಿ ಇಬ್ಬರು ವ್ಯಕ್ತಿಗಳು ಕಡಕೊಳಕ್ಕೆ ತೆರಳಿದ್ದರು. ಈ ವೇಳೆ ಸ್ನೇಹಿತನನ್ನು ನೋಡಬೇಕೆಂದು ದೇವಲಾಪುರದ ಕಡೆಗೆ ಹೋಗುವಂತೆ ಹೇಳಿ ಮಾರ್ಗ ಮಧ್ಯೆ ಪೂರ್ಣಿಮ ಫಾರಂ ಹೌಸ್‌ ಬಳಿ ಸ್ನೇಹಿತ ಬರುತ್ತಾನೆಂದು ಆಟೋ ನಿಲ್ಲಿಸಿದ್ದಾರೆ. ಈ ವೇಳೆ ಮೂತ್ರ ವಿಜರ್ಸನೆಗೆಂದು ತೆರಳಿದ ಚಾಲಕ ರವಿಗೆ ಚಾಕು ತೋರಿಸಿ ಆತನ ಬಳಿಯಿದ್ದ 2 ಸಾವಿರ ನಗದು, ಒಂದು ಮೊಬೈಲ್‌ ಫೋನ್‌ ಕಿತ್ತುಕೊಂಡು, ಆತನನ್ನು ಹಳ್ಳಕ್ಕೆ ತಳ್ಳಿ ಆಟೋದೊಂದಿಗೆ ಪರಾರಿಯಾಗಿದ್ದರು. ಈ ಸಂಬಂಧ ಚಾಲಕ ರವಿ ವರುಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಮೇ 21ರಂದು ಆರೋಪಿಯನ್ನು ಬಂಧಿಸಿ ಆಟೋ, ಮೊಬೈಲ್‌ ವಶಪಡಿಸಿಕೊಂಡಿದ್ದಾರೆ.

ಈತ ತನ್ನ ಸ್ನೇಹಿತನೊಂದಿಗೆ ಇಲವಾಲ, ಬಿಳಿಗೆರೆ, ಮೈಸೂರು ದಕ್ಷಿಣ ಠಾಣೆಗಳ ವ್ಯಾಪ್ತಿಯಲ್ಲಿ 6 ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ತಿಳಿದುಬಂದಿದೆ. ತಲೆ ಮರೆಸಿಕೊಂಡಿರುವ ಮತ್ತೂಬ್ಬ ಆರೋಪಿಯ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಎಸ್ಪಿ ಡಾ.ಬಿ.ಎನ್‌. ನಂದಿನಿ, ಮೈಸೂರು ಗ್ರಾಮಾಂತರ ಉಪವಿಭಾಗದ ಡಿಎಸ್‌ಪಿ ಶಿವಕುಮಾರ್‌, ಸಿಪಿಐ ಸ್ವರ್ಣ.ಜಿ.ಎಸ್‌, ಎಚ್‌.ಡಿ.ಕೋಟೆ ಠಾಣೆ ಇನ್ಸ್‌ಪೆಕ್ಟರ್‌ ಶಬ್ಬೀರ್‌ ಹುಸೇನ್‌, ಸೆನ್‌ ಪೊಲೀಸ್‌ ಠಾಣೆಯ ಪುರುಷೋತ್ತಮ್‌ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next