Advertisement

ಅಂಬೇಡ್ಕರ್‌ ಮಹಾನ್‌ ಚೇತನ: ವಗ್ಗನ್‌

11:23 AM Feb 07, 2018 | Team Udayavani |

ಚಿತ್ತಾಪುರ: ಭಾರತ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್‌ ಚೇತನ, ಅಂಬೇಡ್ಕರ್‌ ಅವರ ವಿಚಾರ ಧಾರೆಗಳನ್ನು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಯುವಪೀಳಿಗೆ ಸಮರ್ಪಣಾ ಭಾವದಿಂದ ದುಡಿಯಬೇಕು ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಸಂಘದ ವಿಭಾಗೀಯ ಅಧ್ಯಕ್ಷ ವಿಠ್ಠಲ್‌ ವಗ್ಗನ್‌ ಹೇಳಿದರು.

Advertisement

ತಾಲೂಕಿನ ಗುಂಡಗುರ್ತಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಸಂವಿಧಾನ ಜಾರಿಗೆ ಬಂದ ದಿನದ ಅಂಗವಾಗಿ ಭಾರತೀಯ ದಲಿತ ಪ್ಯಾಂಥರ್‌ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದ ಶ್ರೇಷ್ಠ ಮಾನವತಾವಾದಿ, ಜನಪರ ಚಿಂತಕ ಡಾ| ಬಿ.ಆರ್‌ ಅಂಬೇಡ್ಕರ್‌ ಅವರ ಆಶಯದಂತೆ ದೇಶದ ಪ್ರಗತಿಗೆ ಯುವ ಜನಾಂಗದ ಕನಸುಗಳನ್ನು ಕಟ್ಟಿಕೊಳ್ಳಬೇಕಿದೆ. ಡಾ| ಬಿ.ಆರ್‌. ಅಂಬೇಡ್ಕರ್‌ ಅವರನ್ನು ಒಂದು ಗುಂಪಿನ ನಾಯಕರಂತೆ ಕಾಣುತ್ತಿರುವುದು ದುರಂತ. ಮಹಾನ್‌ ಚೇತನಗಳ ಜಯಂತಿಗಳಲ್ಲಿ ಕುಡಿದು ಕುಣಿಯುವುದು ಸಭ್ಯತೆಯಲ್ಲ ಎಂದರು. ಡಾ| ಬಿ.ಆರ್‌. ಅಂಬೇಡ್ಕರ್‌ ಮೀಸಲಾತಿ ಮೂಲಕ ಅಸಮಾನತೆ ತೊಡೆದು ಹಾಕಲು ಮುಂದಾದರು.

ಆದರೆ ಅದು ಇಂದಿಗೂ ಸಂಪೂರ್ಣ ಸಾಧ್ಯವಾಗದೇ ಮೀಸಲಾತಿ ಆರ್ಥಿಕ ಸದೃಢರಾದ ದಲಿತರ ಕೈ ಸೇರುತ್ತಿರುವುದು ಸರಿಯಲ್ಲ. ಸ್ವಾತಂತ್ರ್ಯ ಬಂದು ಹಲವು ದಶಕಗಳೇ ಕಳೆದರೂ ಅಂಬೇಡ್ಕರ್‌ ಅವರ ಚಿಂತನೆ ಸಾಮಾಜಿಕ ಅಸಮಾನತೆ ಸಂಪೂರ್ಣ ತೊಡೆಯಲು ಇಂದಿಗೂ ಸಾಧ್ಯವಾಗಿಲ್ಲ. ಅವರ ಚಿಂತನೆಗಳನ್ನು ಮರೆತಿರುವುದು ದುರಂತ. ಆರ್ಥಿಕವಾಗಿ ಹಿಂದುಳಿದವರು ಅಧ್ಯಯನಕ್ಕೆ ಒತ್ತು ನೀಡಿ, ಜ್ಞಾನ ವೃದ್ಧಿಸಿಕೊಂಡು ಮುಂದಿನ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಸುರೇಶ ಆಲ್ದಾರ್ಥಿ, ಕಾವೇರಿ ಗುತ್ತೇದಾರ, ಶಿಕ್ಷಕರಾದ ಲೋಕೇಶ, ಜಗದೀಶ, ಸಿದ್ರಾಜ ಮಾತನಾಡಿದರು. ಭಾರತೀಯ ದಲಿತ ಪ್ಯಾಂಥರ್‌ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷ ಗಂಗಾಧರ ಮಾಡಬೂಳ ಮಾತನಾಡಿದರು. ಗುಂಡಗುರ್ತಿ ಗ್ರಾಪಂ ಅಧ್ಯಕ್ಷ ರೋಹಿತ್‌ ಎಂ. ಗಂಜಗೇರಿ ಉದ್ಘಾಟಿಸಿದರು.

Advertisement

ಭಾರತೀಯ ದಲಿತ ಪ್ಯಾಂಥರ್‌ ವಿಭಾಗೀಯ ಉಪಾಧ್ಯಕ್ಷ ಕಲ್ಯಾಣರಾವ ಡೋಣ್ಣೂರ್‌, ಜಿಲ್ಲಾಧ್ಯಕ್ಷ ರಮೇಶ ಚಿಮ್ಮಾಇದಲಾಯಿ, ತಾಲೂಕು ಅಧ್ಯಕ್ಷ ಕಾಶಿನಾಥ ಶೆಳ್ಳಗಿ, ರಾಹುಲ್‌ ಕಟ್ಟಿಮನಿ, ವಿಶ್ವನಾಥ, ನಾಗರಾಜ ಗಾಯಕವಾಡ, ವಿಜಯಲಕ್ಷ್ಮೀ, ದೇವು ತಳವಾರ, ಶಿವಕುಮಾರ ಚಿಂತಕೋಟಿ, ಕಾಶಿನಾಥ ವಚ್ಚಾ, ಮಹೇಶ ಓಂಕಾರ ಇದ್ದರು. ಶಿಕ್ಷಕ ಲೋಕೇಶ ಸ್ವಾಗತಿಸಿದರು. ಉಮೇಶ ಸಜ್ಜನ್‌ಕರ್‌ ನಿರೂಪಿಸಿ, ವಂದಿಸಿದರು.

ಡಾ| ಅಂಬೇಡ್ಕರ್‌ ಅವರು ಕತ್ತಲಲ್ಲಿ ಓದಿ ಇಡೀ ಜಗತ್ತಿಗೆ ಬೆಳಕನ್ನು ಕಲ್ಪಿಸಿ ಕೊಟ್ಟಿದ್ದಾರೆ. ಅದೇ ರೀತಿ ಡಾ| ಮಲ್ಲಿಕಾರ್ಜುನ ಖರ್ಗೆ ಅವರು ಹೈದ್ರಾಬಾದ್‌ ಕರ್ನಾಟಕಕ್ಕೆ 371ನೇ (ಜೆ) ಕಲಂ ಜಾರಿಗೆ ತಂದು ಈ ಭಾಗದ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿ ಕೊಟ್ಟು ಮಹಾನ್‌ ನಾಯಕರೆನಿಕೊಂಡಿದ್ದಾರೆ. ಆದ್ದರಿಂದ ಈ ಭಾಗದ ವಿದ್ಯಾರ್ಥಿಗಳು 371ನೇ (ಜೆ) ಕಲಂನ್ನು ದುರುಪಯೋಗ ಪಡಿಸಿಕೊಳ್ಳದೆ ಸದುಪಯೋಗ ಪಡಿಸಿಕೊಂಡು ಉನ್ನತ ಉದ್ದೆಗಳನ್ನು ಪಡೆದುಕೊಳ್ಳಬೇಕು. 
 ಮಲ್ಲಪ್ಪ ಹೊಸ್ಮನಿ, ಭಾರತೀಯ ದಲಿತ ಪ್ಯಾಂಥರ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next