ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದಾಗುತ್ತಿದ್ದಂತೆ, ಅತ್ಯಂತ ಕುತೂಹಲಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಭಾರತೀಯ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಿದ್ದರೂ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಗೆ ಅಂಬೇಡ್ಕರ್ ಅವರು ಸುತಾರಾಂ ಒಪ್ಪಿರಲಿಲ್ಲವಂತೆ.
ಅಂಬೇಡ್ಕರ್ ತಿರಸ್ಕಾರ ಮಾಡಿದಾಗ, ಅಂದಿನ ಪ್ರಧಾನಿ ಜವಾಹಾರ್ ಲಾಲ್ ನೆಹರೂ, ಸಂವಿಧಾನ ರಚನಾ ಸಮಿತಿಯ ಇನ್ನೊಬ್ಬ ಸದಸ್ಯ ಎನ್.ಗೋಪಾಲಸ್ವಾಮಿ ಅಯ್ಯಂಗಾರ್ ಅವರಿಗೆ ಹೇಳಿ, ಕಾಶ್ಮೀರಕ್ಕೆ ಪೂರಕವಾದ ಸಂವಿಧಾನ ರಚಿಸಲು ಆದೇಶಿಸಿದರು! ಹೀಗೆಂದು ಲಾ ಕಾರ್ನರ್ ಎಂಬ ಬ್ಲಾಗ್‌ನಲ್ಲಿ ಪ್ರಕಟವಾಗಿದೆ.
370ನೇ ವಿಧಿಯ ಕಾರಣ ಕಾಶ್ಮೀರಕ್ಕೆ ಪ್ರತ್ಯೇಕ ಧ್ವಜ, ಸಂವಿಧಾನ ಲಭ್ಯವಾಗಿತ್ತು. ರಕ್ಷಣೆ, ವಿದೇಶಾಂಗ ಹೊರತುಪಡಿಸಿ ಉಳಿದೆಲ್ಲ ವಿಚಾರಗಳಲ್ಲಿ ಸ್ವಾಯತ್ತತೆ ಲಭಿಸಿತ್ತು. ಈ ರೀತಿಯ ಪ್ರತ್ಯೇಕತೆಯಿಂದ ಕಾಶ್ಮೀರ ರಾಜ್ಯ ದೇಶದ ಉಳಿದೆಲ್ಲ ರಾಜ್ಯಗಳಿಗಿಂತ ಭಿನ್ನವಾಗುತ್ತದೆ. ಅದು ಸಮಾನ ಸ್ಥಾನಮಾನ ಕಳೆದುಕೊಳ್ಳುತ್ತದೆ. ಕಾಶ್ಮೀರ ಅಭಿವೃದ್ಧಿಯನ್ನೂ ಹೊಂದುವುದಿಲ್ಲ, ಹಾಗೆಯೇ ಭವಿಷ್ಯದಲ್ಲಿ ಹಲವಾರು ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಈ ವಿಧಿಯಿಂದ ಕಾಶ್ಮೀರದ ಸಮಸ್ಯೆ ಬಗೆಹರಿಸುವುದಕ್ಕಿಂತ ಸಮಸ್ಯೆ ಸೃಷ್ಟಿಗೆ ಕಾರಣವಾಗುತ್ತದೆ ಎಂದು ಅಂಬೇಡ್ಕರ್ ಬಲವಾಗಿ ಭಾವಿಸಿದ್ದರು ಎಂದು ಲಾ ಕಾರ್ನರ್ ಹೇಳಿದೆ.
ಇದು ದೇಶದ ಹಿತಾಸಕ್ತಿ ವಿರುದ್ಧ:ನೆಹರೂ ನಿರ್ದೇಶನದಂತೆ ಕಾಶ್ಮೀರಿ ನಾಯಕ ಶೇಖ್ ಅಬ್ದುಲ್ಲಾ, 1949ರಲ್ಲಿ ಅಂದಿನ ಕಾನೂನು ಮಂತ್ರಿ ಅಂಬೇಡ್ಕರ್‌ರನ್ನು ಸಂಪರ್ಕಿಸುತ್ತಾರೆ. ಆಗ ಅವರಿಗೆ ನೀಡಿದ ಪ್ರತಿಕ್ರಿಯೆ ಹೀಗಿದೆ: “ನೀವು ಕಾಶ್ಮೀರವನ್ನು ಭಾರತ ರಕ್ಷಣೆ ಮಾಡಬೇಕೆಂದು ಬಯಸುತ್ತೀರಿ, ಅಲ್ಲಿ ರಸ್ತೆ ನಿರ್ಮಿಸಬೇಕು, ಆಹಾರಧಾನ್ಯ ಪೂರೈಸಬೇಕೆಂದು ಬಯಸುತ್ತೀರಿ. ಜೊತೆಗೆ ಕಾಶ್ಮೀರ ಭಾರತಕ್ಕೆ ಸಮಾನ ಸ್ಥಾನ ಪಡೆಯಬೇಕೆಂದು ಬಯಸುತ್ತೀರಿ. ಆದರೆ ಇದರಿಂದ ಕಾಶ್ಮೀರದ ಮೇಲೆ ಕೇಂದ್ರ ಸರಕಾರಕ್ಕೆ ಕಡಿಮೆ ಅಧಿಕಾರವಿರುತ್ತದೆ. ಭಾರತದ ಇತರೆ ಜನತೆಗೂ ಕಾಶ್ಮೀರದ ಮೇಲೆ ಹಕ್ಕಿರುವು ದಿಲ್ಲ. ನಿಮ್ಮ ಈ ಶಿಫಾರಸಿಗೆ ನಾನು ಒಪ್ಪಿಗೆ ಸೂಚಿಸಿದರೆ ದೇಶದ ಹಿತಕ್ಕೆ ಘಾತ ಮಾಡಿದಂತಾ ಗುತ್ತದೆ. ದೇಶದ ಕಾನೂನು ಮಂತ್ರಿಯಾಗಿ ನಾನಿದಕ್ಕೆ ಒಪ್ಪಿಗೆ ನೀಡುವುದಿಲ್ಲ’ ಹೀಗೆಂದು ಅಂಬೇಡ್ಕರ್ ಖಂಡತುಂಡವಾಗಿ ಹೇಳುತ್ತಾರೆ.
ಆಗ ನೆಹರೂ ನಿರ್ದೇಶನದಂತೆ ಶೇಖ್ ಅಬ್ದುಲ್ಲಾ, ಗೋಪಾಲಸ್ವಾಮಿ ಐಯ್ಯಂಗಾರ್‌ರನ್ನು ಸಂಪರ್ಕಿಸುತ್ತಾರೆ. ಆ ವೇಳೆ ನೆಹರೂ ಅಮೆರಿಕ ಪ್ರವಾಸದಲ್ಲಿದ್ದರಿಂದ ಆಗಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲರನ್ನು ಗೋಪಾಲಸ್ವಾಮಿ ಭೇಟಿ ಮಾಡುತ್ತಾರೆ. ಸುದೀರ್ಘ ಚರ್ಚೆ ನಡೆಯುತ್ತದೆ. ಕಡೆಗೆ ಪಟೇಲರು ಒಪ್ಪುತ್ತಾರೆ. ಅಂತೂ ಇಂತೂ ಬಹಳ ವಿರೋಧದ ನಡುವೆಯೇ ಪ್ರತ್ಯೇಕ ಸ್ಥಾನಮಾನ ಸಂವಿಧಾನ ಸೇರಿಕೊಳ್ಳುತ್ತದೆ!