Advertisement

ಸಮಾನತೆ, ಸ್ವತಂತ್ರ, ಗೌರವವೇ ಅಂಬೇಡ್ಕರ್‌ ಯುಗ: ಮಹೇಶ್‌

01:10 PM Apr 17, 2022 | Team Udayavani |

ಯಳಂದೂರು: ಸಮಾಜವನ್ನು ಸಮಾನತೆಯಿಂದ ಕಾಣುವುದು, ಎಲ್ಲರೂ ಸ್ವತಂತ್ರರಾಗಿರುವುದು, ಶೋಷಿತರು, ಶೋಷಕರು ಪರಸ್ಪರ ಗೌರವದಿಂದ ವರ್ತಿಸುವುದೇ ಅಂಬೇಡ್ಕರ್‌ ಯುಗವಾಗಿದ್ದು, ಆ ಯುಗದ ದಿನಗಳು ದೂರ ಉಳಿದಿಲ್ಲ ಎಂದು ಶಾಸಕ ಎನ್‌. ಮಹೇಶ್‌ ಅಭಿಮತ ವ್ಯಕ್ತಪಡಿಸಿದರು.

Advertisement

ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ ರವರ 131 ನೆ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಬೇಡ್ಕರ್‌ ವಾದವನ್ನು ಇಂದು ಇಡೀ ವಿಶ್ವವೇ ಒಪ್ಪಿದೆ. ಇವರ ವಾದ ಅನುಸರಿಸುವ ವ್ಯಕ್ತಿಗಳು ಅನ್ಯಾಯದ ವಿರುದ್ಧ ಹೋರಾಡುವ ಬದಲು, ಅನ್ಯಾಯ ಆಗದಂತೆ ನೋಡಿಕೊಳ್ಳುವ ಕೆಲಸವನ್ನು ಮಾಡಬೇಕಿದೆ ಎಂದರು.

ಮುಖ್ಯ ಭಾಷಣಕಾರ ಎ.ಜಿ. ಜಯರಾಂ ಮಾತನಾಡಿ, ನಮ್ಮ ದೇಶವನ್ನು ಕಟ್ಟುವುದರಲ್ಲಿ ಅಂಬೇಡ್ಕರ್‌ ಅಗ್ರಗಣ್ಯ ನಾಯಕರಾಗಿದ್ದಾರೆ. ನಮ್ಮ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ. ದೇಶದಲ್ಲಿ ಸಾಮಾಜಿಕ, ಆರ್ಥಿಕ ಅಸಮಾನತೆ ತೊಲಗಬೇಕಿದೆ, ಶೋಷಿತರ ಸಬಲೀಕರಣವಾಗಬೇಕಿದೆ, ಶಿಕ್ಷಣ, ರಾಜಕೀಯ, ಉದ್ಯೋಗಗಳಲ್ಲಿ ಈ ಸಮಾಜ ಪ್ರಬಲವಾಗಬೇಕಿದೆ. ಅಂಬೇಡ್ಕರ್‌ ಜಯಂತಿ ಆಚರಣೆಯ ಜೊತೆಗೆ ಇವರನ್ನು ಅನುಕರಣೆ ಮಾಡುವ ಪರಿಪಾಠವನ್ನು ಕಲಿಯುವ ಜರೂರತ್ತು ಇಂದಿಗೆ ಪ್ರಸ್ತುತವಾಗಿದೆ ಎಂದರು.

ಅದ್ಧೂರಿ ಮೆರವಣಿಗೆ: ಇದಕ್ಕೂ ಮುಂಚೆ ಅಂಬೇಡ್ಕರ್‌ ಭಾವಚಿತ್ರವನ್ನು ಹೂವಿನಿಂದ ಅಲಂಕೃತ ಸಾರೋಟಿನಲ್ಲಿ ಇರಿಸಿ, ವಿವಿಧ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು

Advertisement

Udayavani is now on Telegram. Click here to join our channel and stay updated with the latest news.

Next