ಬಂಗಾರಪೇಟೆ: ತಾಲೂಕು ಕಚೇರಿ ನ್ಯಾಯಾಂಗ ಸಭಾಂಗಣಕ್ಕೆ ಭೀಮ ಸಭಾಂಗಣ ಎಂದು ನಾಮಕರಣ ಮಾಡಿ ಒಳಗೆ ಬೃಹತ್ ಅಂಬೇಡ್ಕರ್ ಭಾವಚಿತ್ರವನ್ನು ಸ್ಥಾಪಿಸುವ ಮೂಲಕ ದಲಿತ ಸಂಘಟನೆಗಳ ಅಭಿನಂದನೆಗೆ ತಹಶೀಲ್ದಾರ್ ಎಂ.ದಯಾನಂದ್ ಪಾತ್ರರಾಗಿದ್ದಾರೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ಕೆಜಿಎಫ್ ಕಲಾವಿದರ ಕೈಚಳಕದಿಂದ ಅರಳಿರುವ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ಪಟ್ಟಣದ ಹೊರವಲಯದ ದೇಶಿಹಳ್ಳಿ ಬಡಾವಣೆಯಿಂದ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಸ್ವಾಗತಿಸಿದರು. ಅಂಬೇಡ್ಕರ್ ಭಾವಚಿತ್ರವನ್ನು ತಾಲೂಕು ಕಚೇರಿಯಿಂದ ಸಭಾಂಗಣದೊಳಗೆ ಸ್ವತಃ ತಹಶೀಲ್ದಾರ್ ಎಂ.ದಯಾನಂದ್ ಅವರೇ ಭಾವಚಿತ್ರವನ್ನು ತಲೆ ಮೇಲೆ ಹೊತ್ತು ಕೊಂಡು ಬಂದರು.
ನೆರೆದಿದ್ದ ದಲಿತ ಪರ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಜೈ ಬೀಮ್ ಜಯಘೋಷ ಕೂಗಿದರು. ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ಭೀಮ ಸಭಾಂಗಣದಲ್ಲಿ ಸ್ಥಾಪಿಸಿದ ಬಳಿಕ ಮಾತನಾಡಿದ ಅವರು, ಬದುಕು ಉದ್ದವಾಗಿರದೇ ಸಾಧನೆ ದೀರ್ಘವಾಗಿರಲಿ ಎಂದು ಬಯಸಿದವರು ಡಾ.ಬಿ.ಆರ್. ಅಂಬೇಡ್ಕರ್ ಅವರು, ಭಾರತದ ಸಂವಿಧಾ ನವನ್ನು ಇಡೀ ಜಗತ್ತೇ ಮೆಚ್ಚುವಂತೆ ರಚನೆ ಮಾಡಿದ್ದಾರೆ. ಬದುಕಿರದೆ ಹುಲಿ ಸಿಂಹಗಳಂತೆ ಬದುಕಿ ಏಕೆಂದರೆ ಬಲಿ ಕೊಡುವುದು ಕುರಿ ಕೋಳಿಗಳನ್ನೇ ಹೊರತು ಹುಲಿ ಸಿಂಹಗಳನ್ನಲ್ಲ ಎಂದು ಅಂಬೇಡ್ಕರ್ ಅವರು ಅಂದು ಹೇಳಿದ್ದ ಮಾತನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅನುಷ್ಠಾನಕ್ಕೆ ತಂದಿದೆ ಎಂದರು.
ಪಟ್ಟಣದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡಿ 8 ವರ್ಷಗಳೇ ಕಳೇದರೂ ಕಚೇರಿಯ ಸುತ್ತಲೂ ಪುಷ್ಪವನ ನಿರ್ಮಾಣ ಯಾರೂ ಮಾಡಿರಲಿಲ್ಲ. ಮಿನಿ ವಿಧಾನಸೌಧದಲ್ಲಿ ಇರುವ ನ್ಯಾಯಾಂಗ ಸಭಾಂಗಣಕ್ಕೆ ಭೀಮಾ ಸಭಾಂಗಣ ಎಂದು ನಾಮಕರಣವನ್ನು ಮಾಡಿದ್ದಾರೆ. ಈ ಭೀಮಾ ಸಭಾಂಗಣವನ್ನು ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವಿತ ಕಾಲದಲ್ಲಿ ಅತಿ ಶ್ರೇಷ್ಠ ವ್ಯಕ್ತಿಯಾಗಿದ್ದ ಚಮ್ಮಾರ ಅವರ ಕೈಯಲ್ಲಿ ಉದ್ಘಾಟನೆ ಮಾಡಿಸಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನದ ಅಂಗವಾಗಿ ತಾಲೂಕು ಕಚೇರಿಯ ಭೀಮಾ ಸಭಾಂಗಣವನ್ನು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರಿಯರಾಗಿದ್ದ ಚಮ್ಮಾರರ ಕೈಯಲ್ಲಿ ಉದ್ಘಾಟನೆ ಮಾಡಿಸಿದರು. ದಲಿತ ಪರ ಸಂಘಟನೆಗಳ ನಾಯಕರಾದ ಸೂಲಿಕುಂಟೆ ರಮೇಶ್, ಹೂವರಸನಹಳ್ಳಿ ರಾಜಪ್ಪ, ಸೂಲಿಕುಂಟೆ ಆನಂದ್, ಹುಣಸನಹಳ್ಳಿ ವೆಂಕಟೇಶ್, ದೊಡ್ಡವಲಗಮಾದಿ ಚೌಡಪ್ಪ, ಕಾಶಾ ಪ್ರಸನ್ನಕುಮಾರಸ್ವಾಮಿ, ದೇಶಿಹಳ್ಳಿ ಶ್ರೀನಿವಾಸ್, ಮಾವಹಳ್ಳಿ ವಿಕ್ಕಿ, ಗೌತಮನಗರ ಶ್ರೀನಿವಾಸ್, ಕಂದಾಯ ನಿರೀಕ್ಷಕ ಅಜಯ್, ಗ್ರಾಮಲೆಕ್ಕಿಗ ಪವನ್ ಇತರರು ಹಾಜರಿದ್ದರು.