Advertisement

ಡಾ|ಅಂಬೇಡ್ಕರ್‌ ಅವರನ್ನು ನೆನೆಯುತ್ತಾ…

10:59 PM Apr 13, 2022 | Team Udayavani |

ಭಾರತವೆಂಬ ಪುಣ್ಯಭೂಮಿ ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಹೊರಬಂದು ತಾಯ್ನಾಡಿನ ಸರಕಾರ ರಚನೆಯಾದಾಗ, ಆಡಳಿತ ನಿರ್ವಹಣೆಗೆ ಸಹಾಯ ಮಾಡುವ ಸಂವಿಧಾನ ಎಂಬ ಮಹಾನ್‌ ಗ್ರಂಥ ರಚನೆ ಮಾಡಿಕೊಟ್ಟವರು, ಡಾ| ಬಾಬಾ ಸಾಹೇಬ್‌ ಅಂಬೇಡ್ಕರ್‌.

Advertisement

ಅಂಬೇಡ್ಕರ್‌ ನೇತೃತ್ವದ ತಂಡ ರಚಿಸಿದ ಸಂವಿಧಾನದ ತಿರುಳು, ಭಾರತಮಾತೆಯ ಆತ್ಮ ಎಂದು ದೇಶದ ಮೊದಲ ರಾಷ್ಟ್ರಪತಿ ಡಾ| ಬಾಬು ರಾಜೇಂದ್ರ ಪ್ರಸಾದ್‌ ಹೇಳಿದ್ದರಂತೆ. ಸಂವಿಧಾನ ಸೃಷ್ಟಿಕರ್ತನ ಜನ್ಮದಿನದ ನೆಪದಲ್ಲಿ ಒಮ್ಮೆ ಹಿಂದಿರುಗಿ ನೋಡಿದರೆ, ಅಂಬೇಡ್ಕರ್‌ ಅವರ ಆಶಯಗಳನ್ನು ಈಡೇರಿಸುವಲ್ಲಿ ಅರ್ಥಾತ್‌ ಸಂವಿಧಾನದ ಯೋಚನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಸ್ವತಂತ್ರ ಭಾರತದ ಸರ್ವ ಸರಕಾರಗಳು ಹಾಕಿದ ದಾಪುಗಾಲು, ಕಿರಿದಾದ ಕಣಿವೆಗಳನ್ನು ದಾಟಲಾಗದೆ ಚಡಪಡಿಸಿದಂತೆ ಕಾಣುತ್ತದೆ.

ಹಕ್ಕು ಕೇಳುತ್ತೇವೆ, ಕರ್ತವ್ಯ ಮರೆಯುತ್ತೇವೆ!
ದಿಲ್ಲಿಯಲ್ಲಿರುವ ಸಂಸತ್ತಿನ ಎದುರು ಗಂಭೀರವಾಗಿ ನಿಂತಿರುವ ಅಂಬೇಡ್ಕರ್‌ ಪ್ರತಿಮೆಯ ನಿಲುವನ್ನು ವಿಮರ್ಶಿಸಿದರೆ- “ಎಡಗೈಯಲ್ಲಿ ಸಂವಿಧಾನ ಗ್ರಂಥ ಹಿಡಿದು, ಬಲಗೈಯ ತೋರು ಬೆರಳನ್ನು ಸಂಸತ್ತಿನ ಕಟ್ಟಡದತ್ತ ತೋರಿಸುತ್ತಿರುವ ಬಾಬಾ ಸಾಹೇಬ್‌ ಅಂಬೇಡ್ಕರರು, ನಾನು ಮತ್ತು ನನ್ನೊಂದಿಗಿದ್ದ ಗಣ್ಯರು ಈ ಸಂವಿಧಾನ ರಚಿಸಿದ್ದೇವೆ. ಇದರೊಳಗಿನ ಆಶಯಗಳು ಅನುಷ್ಠಾನವಾಗಿ ದೇಶವಾಸಿಗಳಿಗೆ ನೆಮ್ಮದಿಯ ಬದುಕು ಸಿಗುವಂತೆ ಮಾಡುವುದು ಸದನದ ಒಳಗೆ ಕೆಲಸ ಮಾಡುವ ನಿಮ್ಮೆಲ್ಲರ ಜವಾಬ್ದಾರಿ’ ಎಂದು ಸಂಸತ್‌ ಸದಸ್ಯರಿಗೆ ಹೇಳುತ್ತಿರುವಂತಿದೆ. ದುರಾದೃಷ್ಟಕ್ಕೆ, ಸ್ವಾತಂತ್ರ್ಯಪಡೆದ ನಾವೆಲ್ಲ ನಮಗೆ ಚಲಾಯಿಸಲು ಇರುವ ಸಂವಿಧಾನಬದ್ಧ ಹಕ್ಕುಗಳ ಕುರಿತು ಆಗಾಗ ಗಟ್ಟಿಯಾಗಿ ಕೇಳಿದ್ದೇವೆ ಮತ್ತು ಕೇಳುತ್ತಿದ್ದೇವೆ ಅಷ್ಟೇ. ಅದೇ ಸಮಯದಲ್ಲಿ, ಭಾರತೀಯ ಪೌರರಾಗಿ ನಾವು ಮಾಡಲೇಬೇಕಿರುವ ಕರ್ತವ್ಯಗಳನ್ನು ಜಾಣತನದಿಂದ ಮರೆತೇ ಬಿಡುತ್ತೇವೆ. ಜನಸಾಮಾನ್ಯರ ಕಥೆ ಹೀಗಾದರೆ, ಅಧಿಕಾರಿಗಳು ಮತ್ತು ರಾಜಕೀಯ ನಾಯಕರುಗಳ ಸ್ಥಿತಿ ಇನ್ನೊಂದು ಬಗೆಯದು. ಇರುವ ಅಧಿಕಾರವನ್ನು ಜನಪರ ಕೆಲಸಗಳಿಗಾಗಿ ಸದ್ಬಳಕೆ ಮಾಡಿಕೊಳ್ಳಬೇಕಿರುವುದು ನಮ್ಮ ಆದ್ಯ ಕರ್ತವ್ಯ ಎಂದು ಅರಿಯಲಾರದಷ್ಟು ಮೈಮರೆವು ಅವರನ್ನು ಆವರಿಸಿಕೊಂಡಿದೆ.

ಪುನರ್‌ ಪರೀಕ್ಷೆಗೆ ಒಡ್ಡಿಕೊಳ್ಳಬೇಕು…
ಇದು ನಾಜೂಕಿನ ರಾಜಕಾರಣಕ್ಕೆ ಅನಿವಾರ್ಯವಿರಬಹುದು. ಆದರೆ ಕಣ್ಣೆದುರು ನಡೆದ ಕಟುಸತ್ಯದ ಕರುಣಾಜನಕ ಬದುಕನ್ನು ಸಂರಕ್ಷಿಸಲು ಅಂದು ಅಂಬೇಡ್ಕರ್‌ ಸಂವಿಧಾನದ ಮೂಲಕ ಹೊಸ ಆಯಾಮವನ್ನು ಕಲ್ಪಿಸದೆ ಇದ್ದಿದ್ದರೆ ಇಂದು ಸಮಾನತೆ ಎನ್ನುವುದು ಮರೀಚಿಕೆಯಾಗುತ್ತಿತ್ತು. ಮಾತ್ರವಲ್ಲ, ಜವಾಬ್ದಾರಿ ಎಂಬ ಕರ್ತವ್ಯವನ್ನು ನೆನಪಿಸಲು ಸಾಧ್ಯವಾಗದಷ್ಟು ಸಂಕೋಚವಿಲ್ಲದ ಜಡ್ಡುತನ ಎಲ್ಲರನ್ನೂ ಆವರಿಸಿಕೊಳ್ಳುತ್ತಿತ್ತು.

ಅಂದು ಸಂವಿಧಾನದ ರಚನೆಯ ಸಂದರ್ಭ ಬಾಬಾಸಾಹೇಬರ ಮನದಲ್ಲಿ ಈ ದೇಶದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮಚಿತ್ತದಿಂದ ಸಮರ್ಪಣ ಮನೋಭಾವದಿಂದ ದುಡಿಯಬೇಕೆಂಬ ಹಂಬಲ ಮನೆಮಾಡಿತ್ತು ಎನಿಸು ಸುತ್ತದೆ. ಅಂಥದೊಂದು ಉದಾತ್ತ ಆಶಯವಿದ್ದುದರಿಂದಲೇ ಅಖಂಡ ಭಾರತಕ್ಕೆ  ಸರ್ವಕಾಲಕ್ಕೂ ಸಲ್ಲುವಂಥ, ಸಕಲರಿಗೂ ಮಾರ್ಗದರ್ಶಿಯಾಗುವಂಥ ಸಂವಿಧಾನ ರಚಿಸುವುದು ಸಾಧ್ಯವಾಯಿತು. ಆದರೆ ಇಂದು ಕಾರ್ಯಾಂಗ ಸಂಬಳ ಹೆಚ್ಚಳದಂಥ ಸಂಗತಿಯನ್ನು ಮಾತ್ರ ಗುರಿಯಾಗಿಟ್ಟುಕೊಂಡು, ಶಾಸಕಾಂಗವು ಅಧಿಕಾರದ ಯೋಚನೆಯನ್ನಿಟ್ಟುಕೊಂಡು, ನ್ಯಾಯಾಂಗ‌ವು  ಕಾಯಿದೆಯನ್ನಷ್ಟೆ ಎದುರಿಟ್ಟುಕೊಂಡು ಕಾರ್ಯನಿರ್ವಹಿಸುವ  ಅಪಾಯ ಇದೆ ಎಂದಾಗ ಬಾಬಾ ಸಾಹೇಬರ ಜನ್ಮದಿನದ ಸಂದರ್ಭದಲ್ಲಿಯಾದರೂ ದೇಶವಿಂದು ಆತ್ಮಾವಲೋಕನದ ಅಂಚಿನಲ್ಲಿ ತನ್ನ ನಡೆಗಳನ್ನು ಪುನರ್‌ ಪರೀಕ್ಷೆಗೆ ಒಡ್ಡಿಕೊಳ್ಳಬೇಕಾದ ಅಗತ್ಯವಿದೆ.

Advertisement

ಅಧಿಕಾರ ದುರುಪಯೋಗ ಆಗಬಾರದು…
ತಮಿಳುನಾಡಿನ ಮುಖ್ಯಮಂತ್ರಿಯಾದ ಅನಂತರ ತಾಯಿಯ ಆಶೀರ್ವಾದ ಪಡೆಯಲು ಬಂದ ಕಾಮರಾಜ…, ಅಮ್ಮನ ಮನೆಗೆ ಜಿಲ್ಲಾಧಿಕಾರಿ ಹೊಸದಾಗಿ ಹಾಕಿಸಿದ ನಲ್ಲಿ ಸಂಪರ್ಕವನ್ನು ತೆಗಿಸಿ ಹಾಕುತ್ತಾರೆ. ಇಡೀ ಗ್ರಾಮವು ನಲ್ಲಿ ನೀರಿನ ಸೌಲಭ್ಯ ಹೊಂದಿದ ಮೇಲೆ ನಮ್ಮ ಮನೆಗೆ ನಲ್ಲಿ ಸಂಪರ್ಕ ಕೊಡಿ. ಹಾಗೆ ಮಾಡದೇ ಹೋದರೆ, ಮುಖ್ಯಮಂತ್ರಿಯ ಅಮ್ಮನಿಗೆ ಮಾತ್ರ ನಲ್ಲಿ ಸೌಲಭ್ಯ ಒದಗಿಸಿಕೊಟ್ಟಿದ್ದಾರೆ, ಆ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಂಡಿ¨ªಾರೆ ಎಂಬ ಆಪಾದನೆ ಬರುತ್ತದೆ ಎಂದು ಅಂದಿನ ಜಿಲ್ಲಾ ಕಲೆಕ್ಟರ್‌ಗೆ ಕಿವಿಮಾತು ಹೇಳಿದರಂತೆ. ಈ ದೇಶದ ಶಾಸಕಾಂಗದ ನೇತೃತ್ವ ಹೇಗಿರಬೇಕು ಎಂಬುದಕ್ಕೆ ಅತ್ಯುತ್ತಮ ಮಾದರಿ ಇದು.

ಸಂವಿಧಾನವೆಂಬ ಕೈ ದೀವಿಗೆ
ಅಂಬೇಡ್ಕರ್‌ ಅವರು ಕೊಡುಗೆಯಾಗಿ ನೀಡಿದ ಸಂವಿಧಾನವೆಂಬ ಗ್ರಂಥ, ದೇಶದ ಸಮಸ್ತರಿಗೂ ನಿತ್ಯ ಬೆಳಕು ಕೊಡುವ ಸತ್ಯದ ಕೈ ದೀವಿಗೆಯಾಗಿ ದಾರಿ ತೋರುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯ ದಿನದಂದು ಪ್ರಥಮ ಬಾರಿಗೆ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿ, ತಾನು ದೇಶದ ಪ್ರಧಾನಿಯಾಗಿ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿಲ್ಲ. ಬದಲಾಗಿ, ಈ ದೇಶದ ಪ್ರಧಾನ ಸೇವಕನಾಗಿ ತ್ರಿವರ್ಣ ಧ್ವಜ ಹಾರಿಸಿದೆ ಎಂದಿದ್ದರು. ಭಾರತದ ರಾಜಕಾರಣದ ದಿಕ್ಕು ಇಂತಹ ಸಮರ್ಪಣೆಯ ಸೇವೆಯತ್ತ ಹೆಜ್ಜೆ ಇಡಬೇಕು. ಸಂವಿಧಾನದ ಕತೃì ಅಂಬೇಡ್ಕರ್‌ರ ಜನ್ಮದಿನಕ್ಕೆ ಶುಭಕೋರುವವರು, ಅವರು ರಚಿಸಿದ ಸಂವಿಧಾನದ ಆಶಯಗಳಿಗೆ ಬದ್ಧರಾಗಿ ದೇಶಕ್ಕಾಗಿ ದುಡಿಯಲು, ದೇಶಕ್ಕಾಗಿ ಬದುಕಲು ಪಣತೊಡಬೇಕು. ನುಡಿದಂತೆಯೇ ನಡೆದುಕೊಳ್ಳಲೂ ಮುಂದಾಗಬೇಕು. ಅದು ಈ ಕ್ಷಣದ ತುರ್ತು ಮತ್ತು ಅವರನ್ನು, ನಮ್ಮ ಸಂವಿಧಾನವನ್ನು ಗೌರವಿಸುವ ಪರಿ.

-ಕೋಟ ಶ್ರೀನಿವಾಸ ಪೂಜಾರಿ,
ಸಮಾಜ ಕಲ್ಯಾಣ ಇಲಾಖೆ ಸಚಿವರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next