Advertisement

ಅಂಬೇಡ್ಕರ್‌ ನಿಗಮಕ್ಕೆ ವರ್ಷದಿಂದ ಅನುದಾನವೇ ಇಲ್ಲ

11:35 AM Aug 05, 2019 | Team Udayavani |

ಉಡುಪಿ: ರಾಜ್ಯದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಗ್ರಾ.ಪಂ.ಗಳ ಮೂಲಕ ನಡೆಯುತ್ತಿದ್ದ ವಸತಿ ಯೋಜನೆ ಫ‌ಲಾನುಭವಿಗಳ ಆಯ್ಕೆಗೆ ಬ್ರೇಕ್‌ ಬಿದ್ದಿದೆ.

Advertisement

ಈಗ ರಾಜೀವ್‌ ಗಾಂಧಿ ವಸತಿ ನಿಗಮದ ಸೈಟ್‌ ಯಾವುದೇ ರೀತಿಯ ವಸತಿ ಯೋಜನೆಗಳ ಫ‌ಲಾನುಭವಿಗಳ ಆಯ್ಕೆ, ಮಂಜೂರಾತಿಗೆ ತೆರೆದುಕೊಳ್ಳುತ್ತಿಲ್ಲ. “ಮುಂದಿನ ಆದೇಶದವರೆಗೆ ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ’ ಎಂಬ ಸಂದೇಶ ಬರುತ್ತಿದೆ. ಇದರಲ್ಲಿ ಬಸವ ವಸತಿ, ಡಾ| ಅಂಬೇಡ್ಕರ್‌ ವಸತಿ ಮತ್ತು ವಾಜಪೇಯಿ ವಸತಿ ಯೋಜನೆಗಳೂ ಸೇರಿವೆ.

ಹೊಸ ಪಟ್ಟಿ?
ಯಾವ ಉದ್ದೇಶಕ್ಕೆ ಸ್ಥಗಿತಗೊಳಿಸಲಾಗಿದೆ ಎಂಬ ಮಾಹಿತಿ ಅಧಿಕಾರಿಗಳಲ್ಲಿ ಇಲ್ಲ. ಈಗಾಗಲೇ ಸಮೀಕ್ಷೆ ನಡೆಸಿ ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ವಸತಿ ಮತ್ತು ನಿವೇಶನ ರಹಿತರ ಪಟ್ಟಿ ಸಿದ್ಧವಾಗಿತ್ತು. ಆಕಾಂಕ್ಷಿಗಳ ಅರ್ಜಿಯನ್ನು 6 ತಿಂಗಳುಗಳಿಂದ ನಿಗಮದ ವೆಬ್‌ಸೈಟ್‌ ಸ್ವೀಕರಿಸುತ್ತಿರಲಿಲ್ಲ. ಈಗ ಹಳೆಯ ಮತ್ತು ಹೊಸ ಅರ್ಜಿಗಳ ಅಪ್‌ಲೋಡ್‌ ಕೂಡ ನಿಂತಿದೆ. ಈ ಕುರಿತಾದ ಇ ಮೇಲ್‌ ಸಂದೇಶ ಪಿಡಿಒಗಳಿಗೆ ರವಾನೆಯಾಗಿದೆ. “ಮತ್ತೆ ಹೊಸ ಸಮೀಕ್ಷೆಯಾಗಿ ಹೊಸ ಪಟ್ಟಿ ಸಿದ್ಧವಾಗುತ್ತದೆಯೋ ಅಥವಾ ಹಳೆಯ ಪಟ್ಟಿಯ ಜತೆಗೆ ಹೊಸಬರಿಗೂ ಅವಕಾಶ ನೀಡಲಾಗುತ್ತದೆಯೋ ಎಂಬ ಮಾಹಿತಿ ದೊರೆತಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದಿನ ಸಮೀಕ್ಷೆಯಂತೆ ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಒಟ್ಟು 15,750 ಮತ್ತು ದ.ಕ. ಜಿಲ್ಲೆಯಲ್ಲಿ ಒಟ್ಟು 18,926 ವಸತಿ ರಹಿತ ಕುಟುಂಬಗಳನ್ನು ಗುರುತಿಸಲಾಗಿದೆ.

ಪರಿಶಿಷ್ಟರ ಪಾಡು
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಸತಿ ಭಾಗ್ಯ ಒದಗಿಸುವ ಅಂಬೇಡ್ಕರ್‌ ವಸತಿ ನಿಗಮಕ್ಕೆ ಒಂದು ವರ್ಷದಿಂದ ಚಿಕ್ಕಾಸೂ ಬಿಡುಗಡೆಯಾ
ಗಿಲ್ಲ. ಪರಿಣಾಮ ರಾಜ್ಯದೆಲ್ಲೆಡೆ ಸಾವಿರಾರು ಪ.ಜಾತಿ,ಪಂಗಡದ ಕುಟುಂಬಗಳು ವಸತಿ ವಂಚಿತವಾಗಿವೆ. ಉಡುಪಿ ಜಿಲ್ಲೆಗೆ ಅಂಬೇಡ್ಕರ್‌ ವಸತಿ ಯೋಜನೆಯಡಿ (ಪ.ಜಾತಿ) 2018-19ನೇ ಸಾಲಿನಲ್ಲಿ 1.03 ಕೋ.ರೂ. ನಿಗದಿಯಾಗಿತ್ತಾದರೂ ಬಿಡುಗಡೆಯಾಗಿಲ್ಲ. 2017-18ನೇ ಸಾಲಿನಲ್ಲಿ ನಿಗದಿಯಾದ ಅನುದಾನಕ್ಕಿಂತ ತೀರಾ ಕಡಿಮೆ ಅನುದಾನ ಬಿಡುಗಡೆಯಾಗಿತ್ತು. 2017-18ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 268 ಮನೆ ನಿರ್ಮಾಣದ ಗುರಿ ಇತ್ತಾದರೂ 59 ಮನೆ ನಿರ್ಮಾಣ ಮಾತ್ರ ಸಾಧ್ಯವಾಗಿದೆ. ಅಂಬೇಡ್ಕರ್‌ ವಸತಿ ಯೋಜನೆಯಡಿ (ಪ. ಪಂಗಡ) 2018- 19ನೇ ಸಾಲಿನಲ್ಲಿ ಬಿಡುಗಡೆಯಾಗಬೇಕಿದ್ದ 84 ಲ.ರೂ. ಬಿಡುಗಡೆಯಾಗಿಲ್ಲ. ದ.ಕ. ಜಿಲ್ಲೆಯಲ್ಲಿ ಕೂಡ ಅನುದಾನ ದೊರೆತಿಲ್ಲ.
ಅನುದಾನ ಬಿಡುಗಡೆಯಾಗದಿರುವುದು, ಮರಳಿನ ಕೊರತೆ, ಈಗ ಎಲ್ಲ ರೀತಿಯ ಆಯ್ಕೆ ಪ್ರಕ್ರಿಯೆ ಸ್ಥಗಿತಗೊಳಿಸಿರುವುದರಿಂದ ವಸತಿ ಆಕಾಂಕ್ಷಿ ಕುಟುಂಬ ಗೊಂದಲಕ್ಕೀಡಾಗಿವೆ. ನಿರ್ಮಾಣ ಹಂತದಲ್ಲಿರುವ ಮನೆಗಳ ಭವಿಷ್ಯ ಕೂಡ ಡೋಲಾಯಮಾನವಾಗಿದೆ.

ಸೇರ್ಪಡೆಗೆ ಅವಕಾಶವಿರಲಿ
ಹೊಸದಾಗಿ ಮತ್ತೆ ಪಟ್ಟಿ ಸಿದ್ಧಪಡಿಸುವುದು ಸರಿಯಲ್ಲ. ಈಗ ಬಿಟ್ಟು ಹೋಗಿರುವವರನ್ನು ಮತ್ತೆ ಸೇರಿಸಲು ಅವಕಾಶ ನೀಡಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ಗೆ ಅನುವು ಮಾಡಿಕೊಡಬೇಕು ಎಂದು ಹೆಸರು ಹೇಳಲು ಇಚ್ಛಿಸದ ಗ್ರಾ.ಪಂ. ಪಿಡಿಒ ಒಬ್ಬರು ತಿಳಿಸಿದ್ದಾರೆ.

Advertisement

ಶೀಘ್ರ ಸಭೆ
ಬೆಂಗಳೂರಿನಲ್ಲಿ ವಸತಿ ಯೋಜನೆಗಳ ಕುರಿತಾದ ಸಭೆ ನಡೆಯಲಿದೆ. ಅನಂತರ ಈ ಕುರಿತಾದ ಎಲ್ಲ ಗೊಂದಲಗಳಿಗೆ ಉತ್ತರ ದೊರೆಯಲಿದೆ. ಸದ್ಯ ಹೆಚ್ಚಿನ ಮಾಹಿತಿ ತಿಳಿದಿಲ್ಲ.
-ಸಿಂಧೂ ಬಿ. ರೂಪೇಶ್‌ ಜಿ.ಪಂ. ಸಿಇಒ, ಉಡುಪಿ

ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next