ಬೇಲೂರು: ಸಂವಿಧಾನ ಶಿಲ್ಪಿ ಡಾ.ಬಿ.ಅರ್.ಅಂಬೇಡ್ಕರ್‌ಗೆ ಅಪಮಾನವೆಸಗಿರುವ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರನ್ನು ಹುದ್ದೆಯಿಂದ ವಜಾಗೊಳಿಸಿ, ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿ ದಲಿತಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಪ್ರತಿಕೃತಿ ದಹಿಸಿ, ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಪಟ್ಟಣದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಹೊರಟ ಪ್ರತಿಭಟನಾಕಾರರು, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮತ್ತು ಸಚಿವ ಸುರೇಶ್ ಕುಮಾರ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಬಸವೇಶ್ವರ ವೃತ್ತದಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಪ್ರತಿಕೃತಿ ದಹಿಸಿ ಕೆಲ ಸಮಯ ರಸ್ತೆ ತಡೆ ನಡೆಸಿದರು. ತಹಶೀಲ್ದಾರ್ ಕಚೇರಿಯವರೆಗೆ ಮೆರವಣಿಗೆಯಲ್ಲಿ ತೆರಳಿ ಮನವಿ ಸಲ್ಲಿಸಿದರು.
ಈ ಸಂದರ್ಭ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಮರಿಯಪ್ಪ ನ.26 ರಂದು ಸಂವಿಧಾನ ದಿನದ ಅಂಗವಾಗಿ ಶಿಕ್ಷಣ ಇಲಾಖೆ ಹೊರತಂದಿರುವ ಕೈಪಿಡಿಯಲ್ಲಿ ಸಂವಿಧಾನವನ್ನು ಡಾ.ಅಂಬೇಡ್ಕರ್ ಒಬ್ಬರೇ ಬರೆದಿಲ್ಲ, ಸಂವಿಧಾನ ರಚನಾ ಸಮಿತಿಯವರು ಸೇರಿ ಬರೆದಿದ್ದಾರೆಂದು ಉಲ್ಲೇಖೀಸಲಾಗಿದೆ ಎಂದು ಆಪಾದಿಸಿದರು.
ಶಾಲಾ ಮಕ್ಕಳ ಮೇಲೆ ಪರಿಣಾಮ: ಶಿಕ್ಷಣ ಇಲಾಖೆ ವಿವಾದಾತ್ಮಕ ಕೈಪಿಡಿಯನ್ನು ಹೊರತರುವ ಮೂಲಕ ಮುಗ್ಧ ಶಾಲಾ ಮಕ್ಕಳ ಮನಸ್ಸಿನಲ್ಲಿ ಅಂಬೇಡ್ಕರ್ ಅವರ ಘನತೆ ಕಡಿಮೆ ಮಾಡುವ ಹುನ್ನಾರ ನಡೆಸಿದೆ ಎಂದು ಆಪಾದಿಸಿದರು. ತಾಲೂಕು ಪಂಚಾಯಿತಿ ಸದಸ್ಯ ಮಂಜುನಾಥ್ ಮಾತನಾಡಿ, ಸಂವಿಧಾನ ಬರೆದ ಅಂಬೇಡ್ಕರ್ ಅವರನ್ನು ರಾಜ್ಯ ಸರ್ಕಾರದ ನೌಕರರಾದ ಉಮಶಂಕರ್ ಅವಮಾನ ಮಾಡಿರುವವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶ್ರೇಷ್ಠ ಸಂವಿಧಾನ ರಚಿಸಿದ ಅಂಬೇಡ್ಕರ್: ದಸಂಸ(ಅಂಬೇಡ್ಕರ್ ವಾದ)ಜಿಲ್ಲಾ ಪ್ರಧಾನ ಸಂಚಾಲಕ ಲಕ್ಷ್ಮಣ್ ಮಾತನಾಡಿ, ಭಾರತದ ಸಂವಿಧಾನ ರಚಿಸುವ ಸಂದರ್ಭ ಕರಡು ಸಮಿತಿಯಲ್ಲಿದ್ದ 7 ಜನರಲ್ಲಿ ಕೆಲವರು ತೀರಿಕೊಂಡರೆ, ಮತ್ತೆ ಕೆಲವರು ವಿದೇಶಕ್ಕೆ ತೆರಳಿದ್ದರಿಂದ ಸಂವಿಧಾನ ರಚಿಸುವ ಜವಾಬ್ದಾರಿ ಡಾ.ಅಂಬೇಡ್ಕರ್ ಹೆಗಲ ಮೇಲೆ ಬೀಳುತ್ತದೆ. ಅವರು ತಮ್ಮ ಆರೋಗ್ಯ, ಕುಟುಂಬವನ್ನು ಲೆಕ್ಕಿಸದೇ ಶ್ರೇಷ್ಠ ಸಂವಿಧಾನ ರಚಿಸಿದ್ದಾರೆ. ಈ ಬಗ್ಗೆ ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಹಾಗೂ ಸಮಿತಿ ಸದಸ್ಯರೆ ಸಂವಿಧಾನವನ್ನು ಅಂಬೇಡ್ಕರ್ ಅವರು ರಚಿಸಿದ್ದಾರೆ ಎಂದು ಹೇಳಿದ್ದಾರೆ ಎಂದರು.
ರಾಜ್ಯದ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಪೂರ್ವಾಗ್ರಹ ಪೀಡಿತರಾಗಿ ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ಬರೆದಿಲ್ಲ ಎಂಬ ಸಾಲುಗಳನ್ನು ಸೇರಿಸಿ ಸುತ್ತೋಲೆ ಹೊರಡಿಸಿ ಅಂಬೇಡ್ಕರ್‌ಗೆ ಅವಮಾನಿಸಿದ್ದಾರೆ. ಅವರ ವಿರುದ್ಧ ಸರ್ಕಾರ ತಕ್ಷಣ ದೇಶ ದ್ರೋಹದ ಕೇಸು ದಾಖಲಿಸಿ ಹುದ್ದೆಯಿಂದ ವಜಾ ಮಾಡುವ ಮೂಲಕ ಯಾರೂ ಡಾ.ಅಂಬೇಡ್ಕರ್ ವಿರುದ್ಧ ಮಾತನಾಡದಂತೆ ಎಚ್ಚರಿಕೆ ವಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯ ರವಿ, ದಲಿತಮುಖಂಡರಾದ ಈಶ್ವರ್ ಪ್ರಸಾದ್, ದೊರೆಸ್ವಾಮಿ, ಹುಲಿಕೆರೆ ಕುಮಾರ್, ಗಂಗಾಧರ್‌ಬಹುಜನ್, ಪುರಸಭೆ ಮಾಜಿ ಸದಸ್ಯ ಮಂಜುನಾಥ್, ದಾಸಪ್ಪ, ರಂಗನಾಥ್, ತೆಂಡೆಕೆರೆ ರಮೇಶ್, ನಿಂಗರಾಜ್, ಎಂ.ಜಿ.ವೆಂಕಟೇಶ್, ಹೊಸಹಳ್ಳಿ ರಾಜು, ರಾಮೇನಹಳ್ಳಿ ವೆಂಕಟೇಶ್, ವಕೀಲ ಕುಮಾರ್, ನೆಟ್ಟೆಕೆರೆ ಮಂಜುನಾಥ್, ಭೂಮೇಶ್, ಶಿವಣ್ಣ ಮೊದಲಾದವರಿದ್ದರು.