ಶಹಾಬಾದ: ನಾಡಿನ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ನಾಡಿನ ಸಾಂಸ್ಕೃತಿಕ ರಾಯಭಾರಿ ಕುವೆಂಪು ಎಂದು ಉಪನ್ಯಾಸಕಿ ಇಂದು ಚನ್ನೂರ ಹೇಳಿದರು.
ನಗರದ ಚವ್ಹಾಣ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಿಜಯ ಕಂಪ್ಯೂಟರ್ ಶಿಕ್ಷಣ ಕೇಂದ್ರದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮ ದಿನದ ಪ್ರಯುಕ್ತ ಆಯೋಜಿಸಲಾಗಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಡಿನ ಸಾಹಿತ್ಯ ಕ್ಷೇತ್ರದ ಶಾಶ್ವತ ನಾಯಕ ಕುವೆಂಪು ಎಂಬ ಸಂಗತಿಯನ್ನು ಕನ್ನಡ ಮನಸ್ಸುಗಳು ಅಂಗೀಕರಿಸಿದ್ದು, ಬೇರೆ ಯಾವ ಸಾಹಿತಿಗೂ ಸಿಗದ ಗೌರವ ಸಾಮಾನ್ಯರಿಂದ ಸಿಕ್ಕಿದೆ. ಕಾರಣ ಸಾಹಿತ್ಯದಲ್ಲಿನ ಅವರ ಹೃದಯವಂತಿಕೆ, ವಿಶಾಲವಾದ ಮನೋಭಾವನೆ, ಮಾನವೀಯ ಮೌಲ್ಯಗಳನ್ನು ಹೊಂದಿದ್ದಕ್ಕೆ ಈ ಗೌರವ ದೊರಕಿದೆ ಎಂದರು.
ಉಪನ್ಯಾಸಕಿ ಸೋನಾಬಾಯಿ ರಾಠೊಡ ಮಾತನಾಡಿ, ನಾಡಿನ ನೊಂದ ವರ್ಗದ ದನಿಯಾಗಿ, ರೈತರ ಪರವಾಗಿ ದಿಟ್ಟದನಿ ಎತ್ತಿದ ಕುವೆಂಪು ಸಾಹಿತ್ಯವನ್ನು ಪ್ರತಿಯೊಬ್ಬರು ಓದಬೇಕು ಎಂದು ಹೇಳಿದರು.
ವಿಜಯ ಕಂಪ್ಯೂಟರ್ ನಿರ್ದೇಶಕ ವಾಸುದೇವ ಚವ್ಹಾಣ ಕುವೆಂಪು ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಶಿಕ್ಷಕಿ ರೇಷ್ಮಾ, ವಿಜಯಲಕ್ಷ್ಮೀಹಳ್ಳಿ, ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದರು.