ಬೆಂಗಳೂರು: ರಕ್ಷಣಾ ಇಲಾಖೆಯ ಹೆಲಿಕ್ಯಾಪ್ಟರ್ ವ್ಯವಸ್ಥೆಯನ್ನು ಮಾಡಿದ ಹಿನ್ನಲೆಯಲ್ಲಿ ಶನಿವಾರ ವಿಧಿವಶರಾದ ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ದರ್ಶನಕ್ಕೆ ಕೊನೆಗೂ ಮಂಡ್ಯದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇಂದು ಸಂಜೆಯಿಂದ ನಾಳೆ ಬೆಳಗ್ಗೆಯವರೆಗೆ ತವರಿನಲ್ಲಿ ಅಂಬಿ ಅಭಿಮಾನಿಗಳಿಗೆ ಕೊನೆಯ ಬಾರಿ ದರ್ಶನ ನೀಡಲಿದ್ದಾರೆ.
ರಕ್ಷಣಾ ಇಲಾಖೆಯ ಹೆಲಿಕ್ಯಾಪ್ಟರ್ ಮೂಲಕ ಭಾನುವಾರ ಸಂಜೆ 4 ಗಂಟೆಯ ಬಳಿಕ ಮಂಡ್ಯಕ್ಕೆ ಪಾರ್ಥೀವ ಶರೀರವನ್ನು ಏರ್‌ಲಿಫ್ಟ್ ಮಾಡಲಾಗುತ್ತಿದೆ. 4 ಗಂಟೆಯ ಬಳಿಕ ಮಂಡ್ಯದ ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಭಾನುವಾರ ಬೆಳಗ್ಗೆ 6 ಗಂಟೆಯ ವರೆಗೆ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ವ್ಯಾಪಕ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಮಂಡ್ಯದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಬೇಕು ಎಂದು ಲಕ್ಷಾಂತರ ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಏರ್‌ಲಿಫ್ಟ್ ಮಾಡುವ ಸಲುವಾಗಿ ಕೇಂದ್ರ ರಕ್ಷಣಾ ಸಚಿವ ನಿರ್ಮಲಾ ಸೀತಾರಮನ್ ಅವರಿಗೆ ಕರೆ ಮಾಡಿ ಮಾತುಕತೆ ನಡೆಸಿ ಹೆಲಿಕ್ಯಾಪ್ಟರ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದರು.
ಕಂಠೀರವ ಸ್ಟೇಡಿಯಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ನಾನು ಕೇಂದ್ರ ರಕ್ಷಣಾ ಸಚಿವರೊಂದಿಗೆ ಮಾತುಕತೆ ನಡೆಸಿದ್ದು, ರಕ್ಷಣಾ ಇಲಾಖೆಯ ಹೆಲಿಕ್ಯಾಪ್ಟರ್ ನಮಗೆ ವ್ಯವಸ್ಥೆ ಮಾಡಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಮತ್ತೆ ಇನ್ನೊಂದು ರೀತಿಯ ಹಠ ಮಾಡಿದರೆ ನನಗೆ ಇಕ್ಕಟ್ಟಾಗುತ್ತದೆ. ಅವರ ನಾಡಿಗೆ ಸೇವೆ ಹಿನ್ನಲೆಯಲ್ಲಿ ಅವರ ಅಂತಿಮ ಸಂಸ್ಕಾರವನ್ನು ಕಂಠೀರವ ಸ್ಟೇಡಿಯಂ ಬಳಿ ಮಾಡಲು ತೀರ್ಮಾನ ಮಾಡಿದ್ದೇವೆ. ನೀವು ಒತ್ತಡ ಹಾಕಿದರೆ ನನಗೆ ಕಷ್ಟ ಆಗುತ್ತದೆ. ಯಾರೂ ಹಠಮಾರಿ ಧೋರಣೆ ತೋರಬೇಡಿ ಎಂದು ಸಿಎಂ ಮನವಿ ಮಾಡಿದರು.
ಮಂಡ್ಯದಲ್ಲಿ ಯಾರೂ ಆಕ್ರೋಶ ವ್ಯಕ್ತಪಡಿಸುವುದು ಬೇಡ.ಅವರು ಅಜಾತ ಶತ್ರು, ಅವರ ಪ್ರೀತಿ ವಿಶ್ವಾಸದ ಜೀವನ ನಮ್ಮೊಂದಿಗೆ ಇದೆ. ಯಾರೂ ಅನ್ಯತಾ ಭಾವಿಸಬೇಡಿ,ನಮ್ಮ ಒಡನಾಡಿ ಅವರ ವಿಷಯದಲ್ಲಿ ಅಗೌರವ ಸಲ್ಲಿಸುವ ಪ್ರಶ್ನೆಯೇ ಇಲ್ಲ ಎಂದರು.
ನಾಳೆ ಬೆಳಿಗ್ಗೆ 10 ಗಂಟೆಯ ಬಳಿಕ ಮೆರವಣಿಗೆ ಮೂಲಕ ಅಂತ್ಯಕ್ರಿಯೆ ಸ್ಥಳಕ್ಕೆ ಹೋಗಿ ಆ ಬಳಿಕ ವಿಧಿ ವಿಧಾನಗಳನ್ನು ಮಾಡಲಾಗುತ್ತದೆ ಎಂದರು.