ಬೆಂಗಳೂರು: ಸತತ ನಷ್ಟದಿಂದ ಸರ್ಕಾರದ ಪಾಲಿಗೆ “ಬಿಳಿ ಆನೆ’ಗಳಂತಾಗಿರುವ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಉದ್ದಿಮೆಗಳಿಗೆ ಸರ್ಕಾರ “ಅಂಬಾರಿ’ ಹೂಡಿಕೆ ಮಾಡುತ್ತಿದೆ. “ಗಜ ಗಾತ್ರದ’ ಸಾಲ ನೀಡುತ್ತಿದೆ. ಆದರೆ, ಅವುಗಳಿಂದ ಬರುತ್ತಿರುವ ಪ್ರತಿಫಲ “ಅಳಿಲಿನಷ್ಟು’.
ಹೌದು! ರಾಜ್ಯದಲ್ಲಿ ಸರ್ಕಾರಿ ಸ್ವಾಮ್ಯದ 60 ಉದ್ದಿಮೆಗಳಿವೆ. ಅವುಗಳಲ್ಲಿ 21ಕ್ಕೂ ಹೆಚ್ಚು ಉದ್ದಿಮೆಗಳು ನಷ್ಟ ಅನುಭವಿಸುತ್ತಿವೆ. ಈ ಪೈಕಿ ಸತತವಾಗಿ ನಷ್ಟದಲ್ಲಿರುವ 10ಕ್ಕೂ ಹೆಚ್ಚು ಉದ್ದಿಮೆಗಳಲ್ಲಿ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಬರೋಬ್ಬರಿ 42 ಸಾವಿರ ಕೋಟಿ ರೂ. ಹೂಡಿಕೆ ಮಾಡಿದೆ. ಇದರಲ್ಲಿ ಸಂಚಿತ ನಷ್ಟ 16 ಸಾವಿರ ಕೋಟಿ ರೂ. ಆಗಿದೆ.
ನಷ್ಟದಲ್ಲಿರುವ ಕಂಪನಿಗಳ ಪೈಕಿ ಶಾಸನಬದ್ಧ ಸಂಸ್ಥೆಗಳಾದ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಹಾಗೂ ಸರ್ಕಾರಿ ಕಂಪನಿಗಳಾದ ಕೃಷ್ಣ ಭಾಗ್ಯ ಜಲ ನಿಗಮ, ಕರ್ನಾಟಕ ನೀರಾವರಿ ನಿಗಮ, ಮೈಸೂರು ಸಕ್ಕರೆ ಕಂಪನಿ, ಮೈಸೂರು ಪೇಪರ್ ಮಿಲ್, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ, ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿಗಳಿಗೆ ದೊಡ್ಡ ಪ್ರಮಾಣದ ಹೂಡಿಕೆ ಸರ್ಕಾರ ಮಾಡಿದೆ. ಈ ಕಂಪನಿಗಳಿಗೆ 2017-18ರಲ್ಲಿ ಇದ್ದ 13 ಸಾವಿರ ಕೋಟಿ ರೂ. ಹೂಡಿಕೆ ಪ್ರಮಾಣ 2020-21ರಲ್ಲಿ 42 ಸಾವಿರ ಕೋಟಿ ರೂ. ಆಗಿದೆ.
ಆರ್ಥಿಕ ಇಲಾಖೆ ಸಮಜಾಯಿಷಿ: ನಷ್ಟದಲ್ಲಿರುವ ಕಂಪನಿಗಳಲ್ಲಿ ಹೂಡಿಕೆ ಮತ್ತು ಸಾಲದ ಬಗ್ಗೆ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ ಲೆಕ್ಕಪರಿಶೋಧನಾ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಇಂಥ ಕಂಪನಿಗಳು ನೀರಾವರಿ ಹಾಗೂ ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿದ್ದು, ಅವು ಮೂಲಸೌಕರ್ಯ ಮತ್ತು ಉದ್ಯೋಗ ಸೃಷ್ಟಿಗೆ ಕಾರಣವಾಗಿರುವುದರಿಂದ ಹೂಡಿಕೆಯು ಅನಿವಾರ್ಯವಾಗಿದೆ ಎಂದು ಆರ್ಥಿಕ ಇಲಾಖೆ ಸಮಜಾಯಿಷಿ ನೀಡಿದೆ. ಸರ್ಕಾರದ ಮಾಹಿತಿ ಯಂತೆ ರಾಜ್ಯದಲ್ಲಿರುವ 60 ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಪೈಕಿ 21 ನಷ್ಟದಲ್ಲಿವೆ.
ಮುಚ್ಚಲು ಶಿಫಾರಸು: ಸಾರ್ವಜನಿಕ ಲೆಕ್ಕಪತ್ರ ಸಮಿತಿಯು 2015ರಲ್ಲಿ ಸಲ್ಲಿಸಿದ್ದ ತನ್ನ 5ನೇ ವರದಿ ಯಲ್ಲಿ ನಷ್ಟದಲ್ಲಿರುವ ಕಂಪನಿಗಳು, ನಿಗಮಗಳ ಕಾರ್ಯ ಸಾಧನೆ ನಿರ್ಣಯಿಸಲು ಮತ್ತು 13ನೇ ಹಣಕಾಸು ಆಯೋಗ ಶಿಫಾರಸು ಮಾಡಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸದ ಕಂಪನಿ, ನಿಗಮಗಳನ್ನು ಗುರುತಿಸಿ ಮುಚ್ಚಲು ಶಿಫಾರಸು ಮಾಡಿದೆ ಎಂದು ಉಲ್ಲೇಖೀಸಿವೆ.
ಗಜ ಗಾತ್ರದ ಹೂಡಿಕೆ ಅಳಿಲಷ್ಟು ಪ್ರತಿಫಲ : ರಾಜ್ಯ ಸರ್ಕಾರ 2021ರ ಮಾರ್ಚ್ ಅಂತ್ಯದಲ್ಲಿರುವಂತೆ ಕಳೆದ 5 ವರ್ಷಗಳಲ್ಲಿ ಕಂಪನಿ, ನಿಗಮ ಮತ್ತು ಇತರ ಸಂಸ್ಥೆಗಳಲ್ಲಿ 68,256 ಕೋಟಿ ರೂ. ಹೂಡಿಕೆ ಮಾಡಿದೆ. ಅದರಲ್ಲಿ 89 ಸರ್ಕಾರಿ ಕಂಪನಿಗಳಲ್ಲಿ 60,731 ಕೋಟಿ, ಒಂಭತ್ತು ಶಾಸನಬದ್ಧ ನಿಗಮಗಳಲ್ಲಿ 2,934 ಕೋಟಿ, 44 ಕೂಡು ಬಂಡವಾಳ ಕಂಪನಿಗಳಲ್ಲಿ 4,137 ಕೋಟಿ, ಸಹಕಾರ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ 455 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಈ ಹೂಡಿಕೆಯಿಂದ 2020-21ರಲ್ಲಿ ಬಂದಿರುವ ಪ್ರತಿಫಲ ಕೇವಲ 80 ಕೋಟಿ ರೂ. ಮಾತ್ರ.
-ರಫೀಕ್ ಅಹ್ಮದ್