ಬೆಂಗಳೂರು: ಟ್ರಾಫಿಕ್ ಜಾಮ್ ಕಿರಿಕಿರಿ ತಪ್ಪಿಸುವ ಹಿನ್ನೆಲೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ನಟ ಅಂಬರೀಶ್(66ವರ್ಷ) ಪಾರ್ಥಿವ ಶರೀರದ ಅಂತ್ಯಸಂಸ್ಕಾರ ವಿಳಂಬವಾಗಲಿದೆ ಎಂದು ವರದಿ ತಿಳಿಸಿದೆ.
ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ನಡೆಸಲು ಈಗಾಗಲೇ ನಿರ್ಧರಿಸಲಾಗಿದೆ. ಆದರೆ ಸುಮಾರು 13 ಕಿಲೋ ಮೀಟರ್ ಮೆರವಣಿಗೆ ಸಾಗಲಿರುವ ನಿಟ್ಟಿನಲ್ಲಿ ಟ್ರಾಫಿಕ್ ಜಾಮ್ ಸಂಭವಿಸುವುದರಿಂದ ಅಂತ್ಯಸಂಸ್ಕಾರ ಸಮಯ ಮುಂದೂಡಿರುವುದಾಗಿ ವರದಿ ಹೇಳಿದೆ.
ಮಂಡ್ಯದಿಂದ ಸೇನೆಯ ವಿಶೇಷ ಹೆಲಿಕಾಪ್ಟರ್ ನಲ್ಲಿ ಅಂಬರೀಷ್ ಅವರ ಪಾರ್ಥಿವ ಶರೀರವನ್ನು 11.30ಕ್ಕೆ ಕಂಠೀರವ ಕ್ರೀಡಾಂಗಣಕ್ಕೆ ತರಲಾಗುತ್ತಿದ್ದು, 12ಗಂಟೆಗೆ ಕ್ರೀಡಾಂಗಣದಿಂದ ಪಾರ್ಥಿವ ಶರೀರದ ಯಾತ್ರೆ ಹೊರಡಲಿದೆ.
ಮೈಸೂರು ಬ್ಯಾಂಕ್ ಸರ್ಕಲ್, ಪ್ಯಾಲೇಸ್ ರಸ್ತೆ, ವಿಂಡ್ಸರ್ ಮ್ಯಾನರ್ ಜಂಕ್ಷನ್, ಆರ್ ಎಂಸಿ ಯಾರ್ಡ್, ಗೊರಗುಂಟೆ ಪಾಳ್ಯ ಸೇರಿದಂತೆ ಸುಮಾರು 13 ಕಿಲೋ ಮೀಟರ್ ಮೆರವಣಿಗೆ ಮೂಲಕ ಮಧ್ಯಾಹ್ನ 3ಗಂಟೆಗೆ ಪಾರ್ಥಿವ ಶರೀರ ಕಂಠೀವ ಸ್ಟುಡಿಯೋಗೆ ತರಲಾಗುವುದು ಎಂದು ವರದಿ ತಿಳಿಸಿದೆ.